ನವದೆಹಲಿ: ಯಾವುದೇ ನೂತನ ಆರ್ಥಿಕ ನೀತಿ ಜಾರಿಗೆ ಬರದ ಹೊರತು ದೇಶವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ತಲುಪುವುದಿಲ್ಲ ಎಂದು ಬಿಜೆಪಿ  ಮುಖಂಡ ಸುಬ್ರಮಣಿಯನ್ ಸ್ವಾಮಿ ಶನಿವಾರ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಸುಬ್ರಮಣ್ಯ ಸ್ವಾಮಿ ಅವರ ಈ ಹೇಳಿಕೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆಯು 5% ಕ್ಕೆ ಇಳಿದ ಹಿನ್ನಲೆಯಲ್ಲಿ ಬಂದಿದೆ. ಕಳೆದ ಆರು ವರ್ಷಗಳಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಧೈರ್ಯದಿಂದ ಅಥವಾ ಜ್ಞಾನದಿಂದ ಮಾತ್ರ ಆರ್ಥಿಕತೆಯನ್ನು ಕುಸಿತದಿಂದ ರಕ್ಷಿಸಲು ಸಾಧ್ಯವಿಲ್ಲ, ಇದಕ್ಕೆ ಎರಡೂ ಬೇಕು. ಇಂದು ನಮ್ಮಲ್ಲಿ ಇಲ್ಲ' ಎಂದು ಟ್ವೀಟ್ ಮಾಡಿದ್ದಾರೆ. 



ಕಳೆದ ಕೆಲವು ವಾರಗಳಲ್ಲಿ ಆರ್ಥಿಕ ಕುಸಿತವನ್ನು ನಿಯಂತ್ರಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿತು. 10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಾಲ್ಕು ಘಟಕಗಳಾಗಿ ವಿಲೀನಗೊಳಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಪ್ರಕಟಿಸಿದ್ದಾರೆ. ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ಕ್ರಮಗಳನ್ನು ಅನಾವರಣಗೊಳಿಸಿದ ಒಂದು ವಾರದ ನಂತರ ಈ ಪ್ರಕಟಣೆ ಹೊರಬಿದ್ದಿದೆ.


ಕಳೆದ ವಾರ, ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಿದ ಎರಡು ತಿಂಗಳ ನಂತರ ಆರ್ಥಿಕತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಘೋಷಿಸಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವಾರ ಕೇಂದ್ರಕ್ಕೆ ತನ್ನ ಲಾಭಾಂಶ ಮತ್ತು ಹೆಚ್ಚುವರಿ ಮೀಸಲು 1.76 ಲಕ್ಷ ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿತ್ತು. 


ಕಳೆದ ಕೆಲವು ತಿಂಗಳುಗಳಲ್ಲಿ, ಪ್ರಮುಖ ಬೇಡಿಕೆಗಳಾದ ಆಟೋಮೊಬೈಲ್ಗಳು, ಉತ್ಪಾದನೆ ಮತ್ತು ರಿಯಲ್ ಎಸ್ಟೇಟ್, ಗ್ರಾಹಕರ ಬೇಡಿಕೆ ಮತ್ತು ಹೂಡಿಕೆಗಳ ಕೊರತೆಯಿಂದಾಗಿ ಬೆಳವಣಿಗೆಯಲ್ಲಿ ಕುಸಿತ ಕಂಡಿದೆ. ದೇಶೀಯ ಮತ್ತು ಜಾಗತಿಕ ಅಂಶಗಳಿಂದಾಗಿ  ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆ ಕುಂಠಿತವಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್ ಶುಕ್ರವಾರ ಹೇಳಿದ್ದಾರೆ.  ಈ ಪರಿಸ್ಥಿತಿ ಸುಧಾರಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.