)
Grenade Attack On Army Camp: ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಕಾಕೋಪಥರ್ ಪ್ರದೇಶದಲ್ಲಿ ಗುರುವಾರ(ಅ.16) ಭಾರೀ ಗುಂಡಿನ ದಾಳಿ ಜೊತೆಗೆ ಗ್ರೆನೇಡ್ ದಾಳಿ ಸಂಭವಿಸಿದ್ದು, ಈ ಘಟನೆಯಲ್ಲಿ ಮೂವರು ಸೈನಿಕರು ಗಾಯಗೊಂಡಿದ್ದಾರೆ. ಅಲ್ಲದೆ, ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಗುರುವಾರ ರಾತ್ರಿ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಗುಂಡಿನ ದಾಳಿ ನಡೆದಿದ್ದು, ಮದ್ಯರಾತ್ರಿ ಸುಮಾರಿಗೆ ಭಾರತೀಯ ಸೇನೆಯ 19 ಗ್ರೆನೇಡಿಯರ್ಸ್ ಘಟಕದ ಶಿಬಿರದ ಮೇಲೆ ಗ್ರೆನೇಡ್ಗಳನ್ನು ಎಸೆಯಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ಮಾಹಿತಿ ಲಭ್ಯವಾಗಿದೆ.
ಇನ್ನು ಈ ದಾಳಿಗೆ ಸಂಭವಿಸಿದಂತೆ ಭದ್ರತಾ ಪಡೆಯ ಮೂಲಗಳು ಮಾಹಿತಿ ಖಚಿತಪಡಿಸಿದ್ದು, ಈ ಘಟನೆಯಲ್ಲಿ ಮೂವರು ಸೇನಾ ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಕೊಡಲೇ ಟಿನ್ಸುಕಿಯಾದ ಮಿಷನರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದಿದ್ದಾರೆ.
ಇನ್ನೂ ದಾಳಿಕೋರರು ಸೈನಿಕ ಶಿಭಿರದ ಮೇಲೆ ಗ್ರೆನೇಡ್ ದಾಳಿ ನಡೆಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸೈನಿಕರು ಕೂಡಲೇ ಪ್ರತಿದಾಳಿಯನ್ನು ನಡೆಸಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೋಬ್ಬರು ತಿಳಿಸಿದ್ದಾರೆ.
ಘಟನೆ ಬಳಿಕ ಸೇನೆ ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ. ಶೋಧಕಾರ್ಯ ಮುಂದುವರೆಸಿದ್ದಾರೆ. ಇಡೀ ಪ್ರದೇಶದಲ್ಲಿ ನಾಗರೀಕರ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಭದ್ರತಾ ಮೂಲಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ದಾಳಿಕೋರರು ಸೇನೆ ಮೇಲೆ ದಾಳಿಗಾಗಿ ಬಳಸಿದ ಟ್ರಕ್ ಅನ್ನು ನೆರೆಯ ಅನುಣಾಚಲ ಪ್ರದೇಶದ ತೆಂಗಪಾನಿ ಪ್ರದೇಶದಲ್ಲಿ ಬಿಟ್ಟು ಹೋಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಟ್ರಕ್'ನಲ್ಲಿ ಗ್ರೆನೇಡ್ ಅವಶೇಷಗಳು ಮತ್ತು ಶಸ್ತ್ರಾಸ್ತ್ರಗಳ ಗುರುತು ಪತ್ತೆಯಾಗಿದೆ. ಆದಾಗ್ಯೂ, ಈವರೆಗೂ ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಆದರೆ, ಆರಂಭಿಕ ತನಿಖೆಯ ಪ್ರಕಾರ, ಉಗ್ರಗಾಮಿ ಗುಂಪು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಇಂಡಿಪೆಂಡೆಂಟ್), ಅಥವಾ ಉಲ್ಫಾ (ಐ) ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.