)
ಮಗು ಬೇಕು ಎಂದು ಎಷ್ಟೋ ಜನರು ಯಾವ್ಯಾವ ದೇವರಿಗೋ ಕೈ ಮುಗಿಯುವುದು ಒಂದಾದರೆ, ಇನ್ನು ಕೆಲವರು ಗಂಡು ಬೇಕು ಎಂದು ಕೊರಗುತ್ತಿರುತ್ತಾರೆ. ತಾವು ಅಂದುಕೊಂಡಿದ್ದನ್ನ ಪಡೆಯುವವರೆಗೂ ಅವರಿಗೆ ನೆಮ್ಮದಿ ಇರಲ್ಲ. ಇಲ್ಲೊಂದು ಘಟನೆ ಇದೇ ರೀತಿ ನಡೆದಿದ್ದು ಮಹಿಳೆಯೊಬ್ಬರು ಬರೋಬ್ಬರಿ ಹತ್ತು ಹೆಣ್ಣು ಮಕ್ಕಳ ಬಳಿಕ ಹನ್ನೊಂದನೇ ಮಗು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದರಿಂದ ಕುಟುಂಬಸ್ಥರೆಲ್ಲಾ ಫುಲ್ ಹ್ಯಾಪಿ ಆಗಿದ್ದಾರೆ.
ಹರಿಯಾಣದ ಜಿಂದ್ ಜಿಲ್ಲೆಯ ಉಚಾನಾ ನಗರದ ಓಜಾಸ್ ಆಸ್ಪತ್ರೆ ಮತ್ತು ಮೆಟರ್ನಿಟಿ ಹೋಮ್ಗೆ 37 ವರ್ಷದ ಮಹಿಳೆಯನ್ನು ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ದಾಖಲು ಮಾಡಲಾಗಿತ್ತು. ಮರುದಿನ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸುದ್ದಿ ಕೇಳುತ್ತಿದ್ದಂತೆ ತಂದೆ ಸೇರಿದಂತೆ ಕುಟುಂಬಸ್ಥರೆಲ್ಲಾ ಸಂತಸ ಪಟ್ಟಿದ್ದಾರೆ. 19 ವರ್ಷದ ದಾಂಪತ್ಯ ಜೀವನದಲ್ಲಿ ದಂಪತಿಗೆ ಇದೀಗ ಗಂಡು ಮಗು ಜನಿಸಿದೆ.
ಫತೇಹಾಬಾದ್ ಜಿಲ್ಲೆಯ ಗ್ರಾಮದ ದಂಪತಿಯೊಬ್ಬರು 19 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಈ ದಂಪತಿಗೆ ಈವರೆಗೂ ಹತ್ತು ಹೆಣ್ಣು ಮಕ್ಕಳು ಜನಿಸಿವೆ. ಇದರಲ್ಲಿ ಮೊದಲನೇ ಮಗಳು ಸೆಕೆಂಡ್ ಪಿಯುಸಿ ಓದುತ್ತಿದ್ದಾಳೆ. ಉಳಿದವರು ಶಾಲೆಗೆ ಹೋಗುತ್ತಿದ್ದಾರೆ. ಆದರೆ ಗಂಡು ಮಗು ಬೇಕು ಎನ್ನುವುದು ಇವರ ಕುಟುಂಬದ ಮಹಾ ದೊಡ್ಡ ಆಸೆ ಆಗಿತ್ತಂತೆ. ಅದರಂತೆ ಇಡೀ ಕುಟುಂಬದ ಆಸೆ ಈಡೇರಿದೆ ಎನ್ನಲಾಗಿದೆ.
ಉಚಾನಾ ನಗರದ ಓಜಾಸ್ ಆಸ್ಪತ್ರೆ ಮತ್ತು ಮೆಟರ್ನಿಟಿ ಹೋಮ್ನಲ್ಲಿ ಮಹಿಳೆ ಹಾಗೂ ಕುಟುಂಬಸ್ಥರು ಸದ್ಯ ಆರೋಗ್ಯವಾಗಿದ್ದಾರೆ. ಹೆರಿಗೆ ಸಮಯದಲ್ಲಿ ಹೆಚ್ಚು ತೊಂದರೆಗಳನ್ನ ಅನುಭಸಿದರೂ ಕೊನೆಗೆ ಎಲ್ಲವೂ ಚೆನ್ನಾಗಿ ನಡೆದವು. ತಾಯಿ, ಮಗುವಿಗೆ ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ಹೇಳಿದ್ದಾರೆ. ಸದ್ಯ ಬಾಣಂತಿಯನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು ತಮ್ಮ ಗ್ರಾಮಕ್ಕೆ ಮರಳಿದ್ದಾರೆ.
ಈ ಬಗ್ಗೆ ಮಾತನಾಡಿದ ಮಗುವಿನ ತಂದೆ ಸಂಜಯ್ ಕುಮಾರ್, ಗಂಡು ಮಗುವಿಗಾಗಿ ಕುಟುಂಬ ಪ್ರಾರ್ಥಿಸಿತ್ತು. ನಾವು ಮಗನನ್ನ ಪಡೆಯಬೇಕು ಎಂದುಕೊಂಡಿದ್ದೇವು. ಹೆಣ್ಣು ಮಕ್ಕಳು ಕೂಡ ಸಹೋದರ ಬೇಕು ಎಂದಿದ್ದರು. ಎಲ್ಲ ದೇವರ ಇಚ್ಛೆಯಂತೆ ಸದ್ಯ ಹತ್ತು ಹೆಣ್ಣುಮಕ್ಕಳ ಬಳಿಕ ಹನ್ನೊಂದನೇಯದು ಗಂಡು ಮಗು ಜನಿಸಿದೆ ಎಂದು ಖುಷಿ ಪಟ್ಟಿದ್ದಾರೆ.