)
Wife kills husband: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಭಾವನ ಜೊತೆ ಸೇರಿ ಹೆಂಡತಿಯೇ ತನ್ನ ಗಂಡನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ನೈಋತ್ಯ ದೆಹಲಿಯ ದ್ವಾರಕಾದ ನಿವಾಸಿ ಕರಣ್ ದೇವ್ (35) ಎಂಬುವರನ್ನ ಪತ್ನಿ ಸುಷ್ಮಿತ್ ದೇವ್ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ.
ಭಾವ ರಾಹುಲ್ ದೇವ್ ಜೊತೆಗೆ ಸೇರಿಕೊಂಡು ಸುಷ್ಮಿತಾ ದೇವ್ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿರುವುದು ವಾಟ್ಸಾಪ್ ಚಾಟ್ನಲ್ಲಿ ತಿಳಿದುಬಂದಿದೆ ಅಂತಾ ಪೊಲೀಸರು ತಿಳಿಸಿದ್ದಾರೆ. ಜುಲೈ 13ರಂದು ನಿಗೂಢ ರೀತಿಯಲ್ಲಿ ಕರಣ್ ದೇವ್ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು, ಕೊಲೆ ಸಂಚಿನ ಆರೋಪದ ಮೇಲೆ ಆತನ ಹೆಂಡತಿ ಸುಶ್ಮಿತಾ ಮತ್ತು ರಾಹುಲ್ನನ್ನು ಬಂಧಿಸಿದ್ದಾರೆ.
ಆಕಸ್ಮಿಕ ವಿದ್ಯುತ್ ಶಾಕ್ನಿಂದ ಕರಣ್ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರಿಗೆ ಸುಶ್ಮಿತಾ ಹೇಳಿದ್ದಳು. ಸಮೀಪದ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಬಂದಾಗ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಆಕಸ್ಮಿಕ ಸಾವು ಆಗಿರುವುದರಿಂದ ಮರಣೋತ್ತರ ಪರೀಕ್ಷೆ ನಡೆಸಲು ಸುಶ್ಮಿತಾ ಮತ್ತು ಆಕೆಯ ಪ್ರಿಯಕರ ರಾಹುಲ್ ನಿರಾಕರಿಸಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನ ಆಸ್ಪತ್ರೆಗೆ ಕಳುಹಿಸಿದ್ದರು.
ಘಟನೆ ನಡೆದ ಮೂರು ದಿನಗಳ ನಂತರ ಮೃತನ ಕಿರಿಯ ಸಹೋದರ ಕುನಾಲ್ ತಮ್ಮ ಅಣ್ಣ ಕರಣ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆತನ ಪತ್ನಿ ಸುಶ್ಮಿತಾ ಮತ್ತು ರಾಹುಲ್ ಸೇರಿ ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು. ಈ ವೇಳೆ ಸುಶ್ಮಿತಾ ಮತ್ತು ರಾಹುಲ್ ನಡುವಿನ ವಾಟ್ಸಪ್ ಚಾಟ್ಅನ್ನ ಪೊಲೀಸರಿಗೆ ಒಪ್ಪಿಸಿದ್ದರು.
ಇದನ್ನೂ ಓದಿ: ಟೋಲ್ ಗೇಟ್ ಬಳಿ ಅಹೋರಾತ್ರಿ ಧರಣಿಗೆ ಕುಳಿತ ಶಾಸಕಿ
ಸುಶ್ಮಿತಾ ಮತ್ತು ರಾಹುಲ್ ನಡುವಿನ ಅಕ್ರಮ ಸಂಬಂಧವೇ ಕರಣ್ ಕೊಲೆಗೆ ಪ್ರಮುಖ ಕಾರಣವೆಂಬುದು ವಾಟ್ಸಪ್ ಚಾಟ್ನಿಂದ ಗೊತ್ತಾಗಿದೆ. ಅಣ್ಣನ ಕೊಲೆಗೆ ಏನು ಮಾಡಬೇಕು ಅನ್ನೋದಕ್ಕೆ ರಾಹುಲ್, ಸುಶ್ಮಿತಾಗೆ ಸಲಹೆ ನೀಡಿದ್ದ. ನಿದ್ರೆ ಮಾತ್ರೆಗಳನ್ನ ಊಟದಲ್ಲಿ ಬೆರೆಸಿ ಕರಣ್ ಪ್ರಜ್ಞೆ ತಪ್ಪುವ ಹಾಗೆ ಮಾಡಲಾಗಿತ್ತು. ಬಳಿಕ ಆಕಸ್ಮಿಕ ಸಾವು ಎಂದು ಬಿಂಬಿಸಲು ಇಬ್ಬರು ಸೇರಿ ಕರಣ್ಗೆ ವಿದ್ಯುತ್ ಶಾಕ್ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳನ್ನು ಕೊಲೆ ಮಾಡಿರುವುದನ್ನ ಒಪ್ಪಿಕೊಂಡಿದ್ದಾರೆ. ಸುಶ್ಮಿತಾ ಹಾಗೂ ರಾಹುಲ್ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿರುವ ಸಂಗತಿ ತನಿಖೆಯಿಂದ ತಿಳಿದುಬಂದಿದೆ.