ನವದೆಹಲಿ: ಇತ್ತೀಚಿಗೆ ಉಡಾವಣೆಗೊಂಡಿದ್ದ ಜಿಸ್ಯಾಟ್-6ಎ ಎಸ್ ಬ್ಯಾಂಡ್ ಸಂವಹನ ಉಪಗ್ರಹ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸಂಪರ್ಕ ಕಳೆದುಕೊಂಡಿದೆ. ವರದಿಗಳ ಪ್ರಕಾರ ಉಪಗ್ರಹದೊಂದಿಗೆ ಮರುಸಂಪರ್ಕ ಹೊಂದಲು ಇಸ್ರೋ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಭಾರತಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಶಕ್ತಿಶಾಲಿ ಎಸ್-ಬ್ಯಾಂಡ್ ಸಂವಹನ ಉಪಗ್ರಹ ಜಿಸ್ಯಾಟ್ -6 ಎ ಅನ್ನು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ-ಎಫ್08) ಮೂಲಕ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್(SLP)ನಿಂದ ಮಾರ್ಚ್ 29ರಂದು ಯಶಸ್ವಿ ಉಡಾವಣೆ ಮಾಡಿತ್ತು. 


ಜಿಸ್ಯಾಟ್-6ಎ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‍ವಿ-ಎಫ್-08 ರಾಕೆಟ್'ಅನ್ನು ಸಂಜೆ 4:56ಕ್ಕೆ ಉಡಾವಣೆ ಮಾಡಲಾಗಿತ್ತು. ಸುಮಾರು 17 ನಿಮಿಷಗಳ ಕಾಲ ಮೂರು ಹಂತಗಳಲ್ಲಿ ನಡೆದ ರಾಕೆಟ್ ಉಡಾವಣೆ, ಕಡೆಗೆ ಜಿಸ್ಯಾಟ್-6ಎ ಉಪಗ್ರಹವನ್ನು ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿತ್ತು. ಜಿಸ್ಯಾಟ್-6ಎ ಉಪಗ್ರಹವನ್ನು ಹೊತ್ತ GSLV-F08 ರಾಕೆಟ್ ಸುಮಾರು 415.6 ಟನ್‌ ತೂಕವಿದ್ದು, 161ಅಡಿ ಎತ್ತರವಿದೆ. ಈ ರಾಕೆಟ್ ಗೆ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಲಾಗಿದ್ದು, ಇದರ ಇಂಧನ ದಕ್ಷತೆ ಈ ಹಿಂದಿನ ರಾಕೆಟ್ ಗಳಿಗಿಂತಲೂ ಉತ್ತಮವಾಗಿದೆ.


ಇನ್ನು ಜಿಸ್ಯಾಟ್-6ಎ ಉಪಗ್ರಹವನ್ನು ಭೂಮಿಯಿಂದ ಸುಮಾರು 36,000ಕಿ.ಮೀ. ದೂರದಲ್ಲಿರುವ ಕಕ್ಷೆಗೆ ರವಾನೆ ಮಾಡಲಾಗಿದ್ದು, 10 ವರ್ಷಗಳು ಈ ಉಪಗ್ರಹ ಕಾರ್ಯನಿರ್ವಹಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ಆದರೆ ಇದೀಗ ಈ ಉಪಗ್ರಹದೊಂದಿಗೆ ಇಸ್ರೋ ಸಂಪರ್ಕ ಕಳೆದುಕೊಂಡಿದ್ದು, ಮರು ಸಂಪರ್ಕ ಹೊಂದಲು ಪ್ರಯತ್ನಿಸುತ್ತಿರುವುದಾಗಿ ANI ಸುದ್ದಿ ಸಂಸ್ಥೆ ವರದಿ ಮಾಡಿದೆ.