ಈಗಿಂದೀಗಲೇ ಅತೃಪ್ತರ ರಾಜೀನಾಮೆ ಅಂಗೀಕಾರ ಅಸಾಧ್ಯ: ಸ್ಪೀಕರ್ ರಮೇಶ್ ಕುಮಾರ್

ಅತೃಪ್ತ ಶಾಸಕರು ನೀಡಿರುವ ರಾಜೀನಾಮೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ಅಂಗೀಕರಿಸಲು ಸಾಧ್ಯವಿಲ್ಲ.  ರಾಜೀನಾಮೆ ಅಂಗೀಕಾರಕ್ಕೆ ಅದರದ್ದೇ ಆದ ನಿಯಮಗಳಿವೆ. ಅದರಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. 

Last Updated : Jul 11, 2019, 08:14 PM IST
ಈಗಿಂದೀಗಲೇ ಅತೃಪ್ತರ ರಾಜೀನಾಮೆ ಅಂಗೀಕಾರ ಅಸಾಧ್ಯ: ಸ್ಪೀಕರ್ ರಮೇಶ್ ಕುಮಾರ್ title=
Pic Courtesy: ANI

ಬೆಂಗಳೂರು: ಅತೃಪ್ತ ಶಾಸಕರು ಸಲ್ಲಿಸಿರುವ ರಾಜೀನಾಮೆಗಳು ಕ್ರಮಬದ್ಧವಾಗಿವೆ. ಆದರೆ ಈಗಿಂದೀಗಲೇ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಸಂಜೆ 8 ಅತೃಪ್ತ ಶಾಸಕರು ಮುಂಬೈನಿಂದ ಆಗಮಿಸಿ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್,  ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅತೃಪ್ತ ಶಾಸಕರು ನೀಡಿರುವ ರಾಜೀನಾಮೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ಅಂಗೀಕರಿಸಲು ಸಾಧ್ಯವಿಲ್ಲ.  ರಾಜೀನಾಮೆ ಅಂಗೀಕಾರಕ್ಕೆ ಅದರದ್ದೇ ಆದ ನಿಯಮಗಳಿವೆ. ಅದರಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. 

"ಅತೃಪ್ತರು ಇಂದು ನನ್ನ ಕಚೇರಿಗೆ ಬಂದು ರಾಜಿನಾಮೆ ಸಲ್ಲಿಸಿ ನೀಡಿದ ವಿವರಣೆಗಳನ್ನು ವೀಡಿಯೋ ಮಾಡಲಾಗಿದೆ. ಅದನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸುತ್ತೇನೆ. ಹಾಗೇ ಆ ರಾಜೀನಾಮೆಗಳನ್ನು ಪರಿಶೀಲಿಸಿ, ಆ ರಾಜೀನಾಮೆಗಳು ಪ್ರಾಮಾಣಿಕವಾದುವೇ, ಒತ್ತಡದಲ್ಲಿ ಸಲ್ಲಿಸಿದ ರಾಜೀನಾಮೆಗಳೇ ಎಂಬುದನ್ನು ನಾನು ವಿವೇಚನೆ ನಡೆಸಿ ಆ ನಂತರ ರಾಜೀನಾಮೆಯನ್ನು ಅಂಗೀಕಾರ ಮಾಡುತ್ತೇನೆ" ಎಂದು ರಮೇಶ್ ಕುಮಾರ್ ಹೇಳಿದರು.

ರಾಜೀನಾಮೆ ಅಂಗೀಕರಿಸುವಲ್ಲಿ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಯಾರೂ ನನ್ನನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ನಾನೆಂದೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಹೋದವನಲ್ಲ ಎಂದು ಹೇಳಿದರು.

ಕೆಲಸದ ದಿನಗಳನ್ನು ಲೆಕ್ಕ ಹಾಕಿದರೆ ರಾಜೀನಾಮೆ ಸಲ್ಲಿಸಿ ಕೇವಲ ಮೂರು ದಿನ ಕಳೆದಿವೆಯಷ್ಟೇ. ಈ ಮೂರುದಿನಗಳಲ್ಲಿ ತಮಗೆ ಯಾರೋ ಬೆದರಿಕೆ ಹಾಕಿದರು ಅಂತ ಹೇಳಿ ಮುಂಬೈಗೆ ಹೋಗಿ, ಅಲ್ಲಿಂದ ಸುಪ್ರಿಂಕೋರ್ಟ್ ಗೆ ಹೋಗಿ, ಬಿಗಿ ಭದ್ರತೆಯಲ್ಲಿ ಮತ್ತೆ ಮುಂಬೈನಿಂದ ಬಂದು ರಾಜೀನಾಮೆ ಸಲ್ಲಿಸುವ ಅಗತ್ಯವಿತ್ತೇ? ನಂಗೆ ಬೆದರಿಕೆ ಬಗ್ಗೆ ಮಾಹಿತಿಯನ್ನೂ ಸಹ ಅವರು ನೀಡಲಿಲ್ಲ. ಕೇವಲ ಮೂರೂ ದಿನದಲ್ಲಿ ರಾಜ್ಯದಲ್ಲಿ ತಲ್ಲಣವನ್ನೇ ಸೃಷ್ಟಿ ಮಾಡಿದರು" ಎಂದು ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. 

Trending News