)
Tamil Nadu government job scam: ಈ ವರ್ಷ ತಮಿಳುನಾಡು ಸರ್ಕಾರದ ಪುರಸಭೆ ಆಡಳಿತ ಮತ್ತು ನೀರು ಸರಬರಾಜು ಇಲಾಖೆಗಳಲ್ಲಿ ನೇಮಕಾತಿಗಳನ್ನ ನಡೆಸಲಾಯಿತು. ಇದಕ್ಕಾಗಿ ಅಣ್ಣಾ ವಿಶ್ವವಿದ್ಯಾಲಯವು ಲಿಖಿತ ಪರೀಕ್ಷೆಯನ್ನೂ ಸಹ ನಡೆಸಿತು. ಈ ವರ್ಷ ಆಗಸ್ಟ್ 6ರಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನ ನೀಡಿದ್ದರು. ಈ ನೇಮಕಾತಿಯಲ್ಲಿ ಭಾರೀ ಹಗರಣ ಬೆಳಕಿಗೆ ಬಂದಿದೆ. ನೇಮಕಗೊಂಡ 2,538 ಜನರ ಪೈಕಿ 150 ಮಂದಿ ತಲಾ 35 ಲಕ್ಷ ರೂ. ಲಂಚ ನೀಡುವ ಮೂಲಕ ಸರ್ಕಾರಿ ಉದ್ಯೋಗಗಳನ್ನ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಪರಿಸ್ಥಿತಿಯಲ್ಲಿ ಡಿಎಂಕೆ ಸರ್ಕಾರದ ಅಡಿಯಲ್ಲಿ ಪ್ರಮುಖ ವಂಚನೆಗಳು ಮತ್ತು ವ್ಯವಸ್ಥಿತ ಭ್ರಷ್ಟಾಚಾರಗಳು ಮತ್ತೆ ಮತ್ತೆ ಬಹಿರಂಗಗೊಳ್ಳುತ್ತಿವೆ ಎಂದು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ತಮ್ಮ ಟ್ವಿಟರ್ ಖಾತೆಯಲ್ಲಿ ಅಣ್ಣಾಮಲೈ ಪೋಸ್ಟ್ ಹಂಚಿಕೊಂಡಿದ್ದು, ʼಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಒಂದರ ನಂತರ ಒಂದರಂತೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಪಾಲುದಾರನಾಗಿ ಮಾರ್ಪಟ್ಟಿದೆ. ಜಾರಿ ನಿರ್ದೇಶನಾಲಯವು ಈಗ ಮತ್ತೊಂದು ದೊಡ್ಡ ಮೆಗಾ ಹಗರಣವನ್ನ ಬಹಿರಂಗಪಡಿಸಿದೆ. ಪುರಸಭೆ ಆಡಳಿತ ಮತ್ತು ನೀರು ಸರಬರಾಜು ವಲಯದಲ್ಲಿ 2,538 ಹುದ್ದೆಗಳಿಗೆ ಲಂಚ ಸ್ವೀಕರಿಸುವ ಮೂಲಕ ನೇಮಕಾತಿಗಳನ್ನ ನಡೆಸಲಾಗಿದೆ. 2024ರ ಆರಂಭದಲ್ಲಿ ನಡೆದ 2,538 ನೇಮಕಾತಿಗಳಲ್ಲಿ ತಲಾ 35 ಲಕ್ಷ ರೂ.ಗಳಂತೆ ಒಟ್ಟು 888 ಕೋಟಿ ರೂ. ಲಂಚವನ್ನ ಸ್ವೀಕರಿಸಲಾಗಿದೆʼ ಎಂದು ಹೇಳಿದ್ದಾರೆ.
ಸರ್ಕಾರಿ ಕೆಲಸಕ್ಕೆ 35 ಲಕ್ಷ ರೂಪಾಯಿ ಲಂಚ
2,538 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ 1.12 ಲಕ್ಷ ಜನರ ಪೈಕಿ ಕಷ್ಟಪಟ್ಟು ಅಧ್ಯಯನ ಮಾಡಿ, ಶ್ರದ್ಧೆಯಿಂದ ತಯಾರಿ ನಡೆಸಿದ್ದ ಸಾವಿರಾರು ಅರ್ಹ ಯುವಕರು 35 ಲಕ್ಷ ರೂ. ಲಂಚ ನೀಡಲು ಅಸಮರ್ಥತೆಯಿಂದ ತಿರಸ್ಕರಿಸಲ್ಪಟ್ಟಿದ್ದಾರೆ. ಡಿಎಂಕೆ ಸರ್ಕಾರದ ಅತೃಪ್ತ ದುರಾಸೆ ಯುವಕರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪುಡಿಮಾಡಿದೆ. ಅಕ್ರಮವಾಗಿ ನೇಮಕಗೊಂಡವರಿಗೆ ಆಗಸ್ಟ್ 6ರಂದು ನೇಮಕಾತಿ ಆದೇಶಗಳನ್ನ ಮುಖ್ಯಮಂತ್ರಿ ಸ್ಟಾಲಿನ್ ನೀಡಿದ್ದಾರೆಂದು ಅಣ್ಣಾಮಲೈ ಕಿಡಿಕಾರಿದ್ದಾರೆ.
ಪುರಸಭೆ ಆಡಳಿತ ಇಲಾಖೆಯೊಳಗೆ ಆಳವಾಗಿ ಬೇರೂರಿರುವ ಭ್ರಷ್ಟಾಚಾರ ಹಗರಣವನ್ನ ಜಾರಿ ನಿರ್ದೇಶನಾಲಯ ಬಹಿಲಿಗೆಳೆದಿದೆ. ಪುರಸಭೆ ಆಡಳಿತ ಸಚಿವ ಕೆ.ಎನ್.ನೆಹರು ಅವರ ಸಹೋದರ ರವಿಚಂದ್ರನ್ ಒಡೆತನದ ಟ್ರೂ ವ್ಯಾಲ್ಯೂ ಹೋಮ್ಸ್ನ ಬ್ಯಾಂಕ್ ವಂಚನೆ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯದ ತನಿಖೆಯ ಸಮಯದಲ್ಲಿ ಇದು ಬೆಳಕಿಗೆ ಬಂದಿದೆ. ಡಿಎಂಕೆ ಸರ್ಕಾರದ ಅಡಿಯಲ್ಲಿ ಪ್ರಮುಖ ವಂಚನೆಗಳು ಮತ್ತು ವ್ಯವಸ್ಥಿತ ಭ್ರಷ್ಟಾಚಾರಗಳು ಪದೇ ಪದೇ ಬಹಿರಂಗಗೊಂಡಿವೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಸಂಬಂಧಿತ ಇಲಾಖೆಗಳು ತಕ್ಷಣವೇ ಇದ ಹೊಣೆ ಹೊತ್ತುಕೊಳ್ಳಬೇಕು. ನ್ಯಾಯಾಂಗ ಇಲಾಖೆಯ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು. ವಂಚನೆಗೆ ಕಾರಣರಾದವರನ್ನ ಹೊಣೆಗಾರರನ್ನಾಗಿ ಮಾಡುವುದು ಮತ್ತು ತಮಿಳುನಾಡಿನ ಜನರಿಗೆ ನ್ಯಾಯ ಒದಗಿಸಬೇಕೆಂದು ಅಣ್ಣಾಮಲೈ ಆಗ್ರಹಿಸಿದ್ದಾರೆ.