ದೆಹಲಿ ಸರ್ಕಾರದ ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆಯಲ್ಲಿ ಕರ್ತಾರ್ಪುರ್ ಸಾಹಿಬ್ ಗುರುದ್ವಾರ

ಹಿರಿಯ ನಾಗರಿಕರಿಗಾಗಿ ಉಚಿತ ಯಾತ್ರಾ ಯೋಜನೆಯಲ್ಲಿ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರವನ್ನು ಸೇರಿಸಲು ದೆಹಲಿ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ದೆಹಲಿ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ತಾತ್ವಿಕವಾಗಿ ಅನುಮೋದನೆ ನೀಡಿತು.

Updated: Nov 8, 2019 , 08:00 PM IST
ದೆಹಲಿ ಸರ್ಕಾರದ ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆಯಲ್ಲಿ ಕರ್ತಾರ್ಪುರ್ ಸಾಹಿಬ್ ಗುರುದ್ವಾರ

ನವದೆಹಲಿ: ಹಿರಿಯ ನಾಗರಿಕರಿಗಾಗಿ ಉಚಿತ ಯಾತ್ರಾ ಯೋಜನೆಯಲ್ಲಿ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರವನ್ನು ಸೇರಿಸಲು ದೆಹಲಿ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ದೆಹಲಿ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ತಾತ್ವಿಕವಾಗಿ ಅನುಮೋದನೆ ನೀಡಿತು.

ಮಾಧ್ಯಮಗಳೊಂದಿಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, "ಕರ್ತಾರ್‌ಪುರ್ ಸಾಹಿಬ್ ದೆಹಲಿ-ಅಮೃತಸರ-ವಾಗಾ ಗಡಿ-ಆನಂದಪುರ ಸಾಹಿಬ್ ಕಾರಿಡಾರ್‌ನ ಭಾಗವಾಗಲಿದೆ. ಇದು ಪ್ರಧಾನ ಅನುಮೋದನೆ, ನಾವು ವಿವರಗಳಿಗಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಹೇಳಿದರು.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯ ಕರ್ತಾರ್ಪುರ್ ಸಾಹಿಬ್ ಗುರುದ್ವಾರ ಭಾರತದ ಗಡಿಯಿಂದ 4.5 ಕಿ.ಮೀ ದೂರದಲ್ಲಿದೆ. ಈ ದೇವಾಲಯಕ್ಕೆ ವರ್ಷಪೂರ್ತಿ ಭಾರತೀಯ ಯಾತ್ರಾರ್ಥಿಗಳಿಗೆ ಕಾರಿಡಾರ್ ಮೂಲಕ ಪ್ರವೇಶಿಸಲು ಅವಕಾಶ ಸಿಗಲಿದೆ.

ವಿಶೇಷವೆಂದರೆ, ದೆಹಲಿ ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ವರ್ಷಕ್ಕೆ 1,100 ಹಿರಿಯ ನಾಗರಿಕರಿಗೆ ಉಚಿತ ತೀರ್ಥಯಾತ್ರೆ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಇದರ ವೆಚ್ಚವನ್ನು ದೆಹಲಿ ಸರ್ಕಾರವೇ ಭರಿಸಲಿದೆ.

‘ಮುಖಮಂತ್ರಿ ತೀರ್ಥ ಯಾತ್ರೆ ಯೋಜನೆ’ ಎಂಬ ಹೆಸರಿನ ಯೋಜನೆ ದೆಹಲಿಯ 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮಾತ್ರ ಲಭ್ಯವಿರುತ್ತದೆ. ಹಿರಿಯ ನಾಗರಿಕರು ಈ ಯೋಜನೆಯ ಲಾಭವನ್ನು ಪಡೆಯಬಹುದು. 70 ವರ್ಷಕ್ಕಿಂತ ಮೇಲ್ಪಟ್ಟ ಜನರು ಸಹ ಅವರೊಂದಿಗೆ ಅಟೆಂಡೆಂಟ್ ಜೊತೆಗೆ ಹೋಗಬಹುದು.

ದೆಹಲಿ-ಮಥುರಾ-ವೃಂದಾವನ್-ಆಗ್ರಾ-ಫತೇಪುರ್ ಸಿಕ್ರಿ-ದೆಹಲಿ, ದೆಹಲಿ-ವೈಷ್ಣೋ ದೇವಿ-ಜಮ್ಮು-ದೆಹಲಿ, ದೆಹಲಿ-ಹರಿದ್ವಾರ-ರಿಷಿಕೇಶ-ನೀಲಕಂಠ-ದೆಹಲಿ, ಮತ್ತು ದೆಹಲಿ-ಅಜ್ಮೀರ್-ಪುಷ್ಕರ್-ದೆಹಲಿ ಈ ಯೋಜನೆಯ ವ್ಯಾಪ್ತಿಗೆ ಬರುವ ಇತರ ಮಾರ್ಗಗಳು.

ಈ ವರ್ಷದ ಜುಲೈನಲ್ಲಿ ಸಿಎಂ ಕೇಜ್ರಿವಾಲ್ ದೆಹಲಿ-ಅಮೃತಸರ-ವಾಗಾ ಗಡಿ-ಆನಂದಪುರ ಸಾಹಿಬ್-ದೆಹಲಿ ತೀರ್ಥಯಾತ್ರೆಗಾಗಿ ಭಕ್ತರ ಮೊದಲ ರೈಲನ್ನು ಫ್ಲ್ಯಾಗ್ ಮಾಡಿದರು. ಈ ಸಮಾರಂಭದಲ್ಲಿ ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಮತ್ತು ದೆಹಲಿ ತೀರ್ಥ ಯಾತ್ರಾ ವಿಕಾಸ್ ಸಮಿತಿಯ ಅಧ್ಯಕ್ಷ ಕಮಲ್ ಬನ್ಸಾಲ್ ಉಪಸ್ಥಿತರಿದ್ದರು.