Konark Sun Temple: ಒಡಿಶಾದ ಪುರಿ ಜಿಲ್ಲೆಯ ಬಂಗಾಳ ಕೊಲ್ಲಿಯ ತೀರದಲ್ಲಿ ನೆಲೆಗೊಂಡಿರುವ ಪ್ರಖ್ಯಾತ ಕೊನಾರ್ಕ್ ಸೂರ್ಯ ದೇವಾಲಯವು ದೇಶದ ಅತ್ಯಂತ ಐತಿಹಾಸಿಕ ಮತ್ತು ವೈಭವಶಾಲಿ ಸ್ಮಾರಕಗಳಲ್ಲಿ ಒಂದಾಗಿದೆ. 13ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯದ ಪ್ರಮುಖ ಭಾಗವಾದ ನೃತ್ಯ ಮಂಟಪ — ಜಗಮೋಹನ್ — ಕಳೆದ 122 ವರ್ಷಗಳಿಂದ ಸಂಪೂರ್ಣ ಮುಚ್ಚಲ್ಪಟ್ಟಿತ್ತು. ಈಗ, ಈ ಮಂಟಪವನ್ನು ಮತ್ತೆ ತೆರೆಯುವ ಪ್ರಕ್ರಿಯೆ ಆರಂಭವಾಗಿದ್ದು, ಅದರ ಒಳಗಿನ ರಹಸ್ಯಗಳು ಮತ್ತು ವೈಶಿಷ್ಟ್ಯಗಳು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿವೆ.
19ನೇ ಶತಮಾನದ ಕೊನೆಯಲ್ಲಿ, ಈ ದೇವಾಲಯದ ಗೋಡೆಗಳು ಮತ್ತು ಛಾವಣಿಯಲ್ಲಿ ಬಿರುಕುಗಳು ಕಾಣಿಸಿಕೊಂಡಾಗ, ಬ್ರಿಟಿಷ್ ಅಧಿಕಾರಿಗಳು ದೇವಾಲಯ ಕುಸಿಯುವ ಭಯಕ್ಕೆ ಒಳಗಾದರು. ದೇವಾಲಯವನ್ನು ರಕ್ಷಿಸಲು ಅವರು ತುರ್ತು ಕ್ರಮವಾಗಿ ಮಂಟಪದ ನಾಲ್ಕು ಪ್ರವೇಶದ್ವಾರಗಳನ್ನೇ ಮುಚ್ಚಿ, ಒಳಗಿನ ಭಾಗವನ್ನು ಸಂಪೂರ್ಣವಾಗಿ ಮರಳು ಮತ್ತು ಇಟ್ಟಿಗೆಗಳಿಂದ ತುಂಬಿಸಿ ಬೆಂಬಲ ಒದಗಿಸಿದರು. ತಾತ್ಕಾಲಿಕ ಪರಿಹಾರವಾಗಿ ತೆಗೆದುಕೊಂಡ ಈ ಕ್ರಮವೇ ನಂತರ ಶಾಶ್ವತವಾಗಿಬಿಟ್ಟಿತ್ತು.
13ನೇ ಶತಮಾನದ ಕಲಾತ್ಮಕ ಕೌಶಲ್ಯವನ್ನು ಪ್ರತಿಬಿಂಬಿಸುವ ಈ ನೃತ್ಯ ಮಂಟಪವು ಸುಮಾರು 128 ಅಡಿ ಎತ್ತರವಿದ್ದು, ನಾಟಕ-ನೃತ್ಯ ಪ್ರದರ್ಶನಗಳಿಗಾಗಿ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಸೂರ್ಯ ದೇವರ ವಿಗ್ರಹವನ್ನೂ ಸ್ಥಾಪಿಸಲಾಗಿದ್ದು, ಆ ಕಾಲದಲ್ಲಿ ಇದು ಸಂಸ್ಕೃತಿ, ವಿಜ್ಞಾನ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಕೇಂದ್ರವಾಗಿತ್ತು. ಆದರೆ ಶತಮಾನಗಳ ಕಾಲ ಸಮುದ್ರದ ಉಪ್ಪು ಗಾಳಿ, ಚಂಡಮಾರುತಗಳು, ಮತ್ತು ಆರ್ದ್ರತೆಯಿಂದಾಗಿ ದೇವಾಲಯದ ರಚನೆ ಗಣನೀಯವಾಗಿ ಹಾಳಾಗಲು ಆರಂಭಿಸಿತು.
1903ರಲ್ಲಿ ಬ್ರಿಟಿಷರು ಮಂಟಪವನ್ನು ಮುಚ್ಚಿದ ನಂತರ, ಅದನ್ನು ಮತ್ತೆ ತೆರೆಯುವ ವಿಚಾರ ಗಂಭೀರವಾಗಿ ಚರ್ಚೆಗೊಳ್ಳದೇ ಬಿಟ್ಟಿತ್ತು. ಆದರೆ ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮತ್ತೊಮ್ಮೆ ಮುಂದಾಗಿ ಮಂಟಪವನ್ನು ತೆರೆಯುವ ಮತ್ತು ನವೀಕರಿಸುವ ಕೆಲಸವನ್ನು ಪ್ರಾರಂಭಿಸಿದೆ. ಸುಮಾರು 50 ವರ್ಷಗಳ ಹಿಂದೆ ಇದೇ ರೀತಿಯ ಪ್ರಯತ್ನ ನಡೆದಿದ್ದರೂ, ಆರ್ದ್ರತೆ ಮತ್ತು ಪರಿಸರದ ಪರಿಣಾಮದಿಂದ ದೇವಾಲಯಕ್ಕೆ ಹೆಚ್ಚು ಹಾನಿ ಆಗಿರುವುದರಿಂದ ಈಗ ಸಂಪೂರ್ಣ ವೈಜ್ಞಾನಿಕ ವಿಧಾನದಲ್ಲಿ ಪುನರ್ ಸಂರಕ್ಷಣೆ ನಡೆಯಲಿದೆ.
ಕೊನಾರ್ಕ್ ಸೂರ್ಯ ದೇವಾಲಯದ ಈ ಮಂಟಪದಲ್ಲಿ ಏನೆಲ್ಲ ರಹಸ್ಯಗಳು ಮಡಗಿವೆ? ಏನೆಲ್ಲ ಕಲಾಕೃತಿಗಳು ಅಡಗಿವೆ? 122 ವರ್ಷಗಳ ನಂತರ ಇದು ಮೊದಲ ಬಾರಿಗೆ ತೆರೆದುಕೊಳ್ಳುತ್ತಿರುವುದರಿಂದ, ಇತಿಹಾಸಪ್ರಿಯರಲ್ಲಿ ದೊಡ್ಡ ಕುತೂಹಲ ಮೂಡಿದೆ.









