Live Now

Independence Day 2025 Live Updates: ರಾಷ್ಟ್ರವನ್ನುದ್ದೇಶಿಸಿ ʼನಮೋʼ ಮಾತು, ಇಂದಿರಾ ಗಾಂಧಿ ದಾಖಲೆ ಮುರಿದ ಪ್ರಧಾನಿ ಮೋದಿ

Independence Day 2025 Live Updates: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾಗಿವೆ. ನಾವು 79 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಇಂದು ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಹೇಗೆ ನಡೆಯುತ್ತಿದೆ ಎಂಬುದನ್ನು ನಿಮಿಷದಿಂದ ನಿಮಿಷಕ್ಕೆ ಇಲ್ಲಿ ತಿಳಿದುಕೊಳ್ಳೋಣ.

Independence Day 2025 Live Updates: ರಾಷ್ಟ್ರವನ್ನುದ್ದೇಶಿಸಿ ʼನಮೋʼ ಮಾತು, ಇಂದಿರಾ ಗಾಂಧಿ ದಾಖಲೆ ಮುರಿದ ಪ್ರಧಾನಿ ಮೋದಿ
15 August 2025 01:35 PM (IST)

Independence Day 2025 Live: ಮರಳು ಕಲಾಕೃತಿಯಲ್ಲಿ 'ಆಪರೇಷನ್ ಸಿಂಧೂರ್'

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದ ಸುದರ್ಶನ್ ಪಟ್ನಾಯಕ್, 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ʼಆಪರೇಷನ್ ಸಿಂಧೂರ್‌ʼ ಕಾರ್ಯಾಚರಣೆಗೆ ಸಂಬಂಧಿತ ಮರಳು ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಒಡಿಶಾ ರಾಜ್ಯದ ಪುರಿ ಕಡಲತೀರದ ಬಳಿ ʼಆಪರೇಷನ್ ಸಿಂಧೂರ್‌ʼ ಕಾರ್ಯಾಚರಣೆಯ ಮರಳು ಕಲಾಕೃತಿ ಮೂಡಿ ಬಂದಿದೆ.

15 August 2025 12:17 PM (IST)

Independence Day 2025 Live: ಮಂಗಳೂರಿನಲ್ಲಿ ದಿನೇಶ್ ಗುಂಡೂರಾವ್ ಧ್ವಜಾರೋಹಣ

79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  ಅವರು ಮಂಗಳೂರಿನಲ್ಲಿ ಇಂದು ಧ್ವಜಾರೋಹಣ ನೆರವೇರಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ನಾಡಿನ ಜನತೆಗೆ 79ನೇ ಸ್ವಾತಂತ್ರೋತ್ಸವದ ಶುಭಾಶಯ ಕೋರಿದರು.

 

15 August 2025 11:58 AM (IST)

Independence Day 2025 Live: ಬಸವಣ್ಣನವರ ಧೈಯದಂತೆ ನಮ್ಮ ಸರ್ಕಾರ ನಡೆಯುತ್ತಿದೆ- ಸಿಎಂ ಸಿದ್ದರಾಮಯ್ಯ

ವಿಶ್ವಗುರು ಬಸವಣ್ಣನವರ ಧೈಯದಂತೆ ನಮ್ಮ ಸರ್ಕಾರ ನಡೆಯುತ್ತಿದೆ. ನಮ್ಮಸರ್ಕಾರ ಜನ ಕಲ್ಯಾಣ ಕಾರ್ಯಕ್ರಮಗಳನ್ನ ಜಾರಿಗೆ ತಂದಿದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ. 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ  ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ, ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನ ಮೆರೆಯಲಾಗದು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಕ್ಕೆ ಬೆಲೆಕಟ್ಟಲಾಗದು. ಪಂಚ ಗ್ಯಾರಂಟಿಗಳಿಂದ 96 ಸಾವಿರ ಕೋಟಿಗೂ ಹೆಚ್ಚು ಹಣ ನೀಡಿದ್ದೇವೆ. ಶಕ್ತಿ ಯೋಜನೆಯು ಲಕ್ಷಾಂತರ ಮಹಿಳೆಯರಿಗೆ ಸಹಾಯಕವಾಗಿದೆ. ಈ ಯೋಜನೆಗಾಗಿ 5,900 ಹೊಸ ಬಸ್‌ಗಳನ್ನ ಖರೀದಿ ಮಾಡಿದ್ದೇವೆ ಎಂದು ತಿಳಿಸಿದರು. 

15 August 2025 11:49 AM (IST)

Independence Day 2025 Live: ಇಂದಿರಾ ಗಾಂಧಿ ದಾಖಲೆ ಮುರಿದ ಪ್ರಧಾನಿ ಮೋದಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರೋತ್ಸವದಂದು ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನ ಮುರಿದಿದ್ದಾರೆ. ಸತತವಾಗಿ ಅತಿಹೆಚ್ಚು ಬಾರಿ ಸ್ವಾತಂತ್ರೋತ್ಸವದಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿಗಳ ಸಾಲಿನಲ್ಲಿ ಜವಾಹರಲಾಲ್ ನೆಹರು ನಂತರದ ಸ್ಥಾನಕ್ಕೆ ಏರಿದ್ದಾರೆ. ಇಂದಿರಾ ಅವರು 1966ರ ಜನವರಿಯಿಂದ 1977ರ ಮಾರ್ಚ್‌ವರೆಗೆ ಹಾಗೂ 1980ರ ಜನವರಿಯಿಂದ 1984ರ ಅಕ್ಟೋಬರ್‌ವರೆಗೆ ಅಧಿಕಾರದಲ್ಲಿದ್ದರು. ಅವರು ಪ್ರಧಾನಿಯಾಗಿ ಒಟ್ಟು 16 ಬಾರಿ ಹಾಗೂ ಸತತವಾಗಿ 11 ಬಾರಿ ಆಗಸ್ಟ್ 15ರಂದು ಧ್ವಜಾರೋಹಣ ಭಾಷಣ ಮಾಡಿದ್ದರು. 

 

15 August 2025 11:21 AM (IST)

Independence Day 2025 Live: 1 ಗಂಟೆ 43 ನಿಮಿಷ ಭಾಷಣ ಮಾಡಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ  

ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಕೆಂಪು ಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬರೋಬ್ಬರಿ 1 ಗಂಟೆ 43 ನಿಮಿಷಗಳ ಕಾಲ (103 ನಿಮಿಷ) ಭಾಷಣ ಮಾಡಿದ್ದಾರೆ. ಈ ಮೂಲಕ ದೀರ್ಘ ಭಾಷಣ ಮಾಡಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ 98 ನಿಮಿಷಗಳ ಭಾಷಣ ಮಾಡಿ ದಾಖಲೆ ಬರೆದಿದ್ದ ಪ್ರಧಾನಿ ಮೋದಿ, ಈ ಬಾರಿ 103 ನಿಮಿಷಗಳ ಕಾಲ ಮಾತನಾಡುವ ಮೂಲಕ ತಮ್ಮದೇ ದಾಖಲೆಯನ್ನ ಬ್ರೇಕ್‌ ಮಾಡಿದ್ದಾರೆ.  

2024ರ ಮೊದಲು ಮೋದಿ ಅವರ ದೀರ್ಘ ಸ್ವಾತಂತ್ರ್ಯ ದಿನಾಚರಣೆಯ ಭಾಷಣ 2016ರಲ್ಲಿ ಆಗಿತ್ತು (96 ನಿಮಿಷಗಳು). 2017ರಲ್ಲಿ 56 ನಿಮಿಷಗಳ ಕಾಲ ಭಾಷಣ ಮಾಡಿದ್ದರು. ಮೋದಿಗಿಂತಲೂ ಮೊದಲು1947ರಲ್ಲಿ ಜವಾಹರಲಾಲ್ ನೆಹರು 72 ನಿಮಿಷ ಮತ್ತು 1997ರಲ್ಲಿ ಐ.ಕೆ.ಗುಜ್ರಾಲ್ 71 ನಿಮಿಷಗಳ ದೀರ್ಘ ಭಾಷಣ ಮಾಡಿದ್ದರು. 1954ರಲ್ಲಿ ನೆಹರು ಮತ್ತು 1966ರಲ್ಲಿ ಇಂದಿರಾ ಗಾಂಧಿ ಇಬ್ಬರೂ ಕ್ರಮವಾಗಿ 14 ನಿಮಿಷ ಮಾತನಾಡಿದ್ದರು. ಇದು ದಾಖಲೆಯ ಅತ್ಯಂತ ಕಡಿಮೆ ಅವಧಿಯ ಭಾಷಣವಾಗಿತ್ತು.

ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಸಹ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಅತ್ಯಂತ ಕಡಿಮೆ ಅವಧಿಯ ಭಾಷಣ ಮಾಡಿದ್ದರು.  2012 ಮತ್ತು 2013ರಲ್ಲಿ ಸಿಂಗ್ ಅವರ ಭಾಷಣಗಳು ಕ್ರಮವಾಗಿ 32 ಮತ್ತು 35 ನಿಮಿಷಗಳ ಕಾಲ ಮಾತ್ರ ನಡೆದಿತ್ತು. 2002 ಮತ್ತು 2003ರಲ್ಲಿ ವಾಜಪೇಯಿ ಅವರ ಭಾಷಣ 25 ಮತ್ತು 30 ನಿಮಿಷಗಳಿಗೆ ಅಂತ್ಯವಾಗಿತ್ತು.

15 August 2025 10:20 AM (IST)

Independence Day 2025 Live: ದೇಶದಾದ್ಯಂತ  79ನೇ ಸ್ವಾತಂತ್ರೋತ್ಸವ ಸಂಭ್ರಮ

ದೇಶದಾದ್ಯಂತ  79ನೇ ಸ್ವಾತಂತ್ರೋತ್ಸವ ಸಂಭ್ರಮ ಮನೆ ಮಾಡಿದೆ. ಕರ್ನಾಟಕ ಸೇರಿದಂತೆ ಸ್ವಾತಂತ್ರೋತ್ಸವ ಸಂಭ್ರಮ ಕಳೆಗಟ್ಟಿದೆ.  

15 August 2025 10:05 AM (IST)

Independence Day 2025 Live: ನಾವು ನಮ್ಮದೇ ಬಾಹ್ಯಾಕಾಶ ನಿಲ್ದಾಣ  ನಿರ್ಮಿಸುತ್ತೇವೆ - ಪ್ರಧಾನಿ ಮೋದಿ

ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಇಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 79ನೇ ಸ್ವಾತಂತ್ರೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿರುವ ಅವರು, 'ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಸಾಧನೆಯ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಗ್ರೂಪ್ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ವಾಪಸ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಭಾರತಕ್ಕೆ ಮರಳಲಿದ್ದಾರೆ. ವಾಣಿಜ್ಯ ಉದ್ದೇಶಿತ ಆಕ್ಸಿಯಂ -4 ಮಿಷನ್‌ನ ಭಾಗವಾಗಿ ಇತ್ತೀಚೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳು 18 ದಿನಗಳ ಅಂತರಿಕ್ಷಯಾನ ಮುಗಿಸಿ ಭೂಮಿಗೆ ವಾಪಸ್ಸಾಗಿದ್ದಾರೆ. 

ಎಲ್ಲಾ ಕ್ಷೇತ್ರಗಳಂತೆ ಬಾಹ್ಯಾಕಾಶ ವಲಯದಲ್ಲೂ ಸ್ವಾವಲಂಬಿಯಾಗಲು ಶ್ರಮಿಸುತ್ತಿರುವ ಭಾರತವು 'ಗಗನಯಾನ' ಉಡಾವಣೆಗೆ ಸಜ್ಜಾಗುತ್ತಿದೆ. 'ಗಗನಯಾನ' ಮಾನವನನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಯೋಜನೆಯ ನೌಕೆಯಾಗಿದೆ. ನಾವು ನಮ್ಮದೇ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುತ್ತೇವೆ ಎಂದು ಇದೇ ವೇಳೆ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರವು ಇತ್ತೀಚಿನ ದಿನಗಳಲ್ಲಿ ತಂದಿರುವ ಸುಧಾರಣಾ ಕ್ರಮಗಳಿಂದಾಗಿ 300ಕ್ಕೂ ಅಧಿಕ ನವೋದ್ಯಮಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಕ್ರಿಯಗೊಂಡಿವೆ. ಸಾವಿರಾರು ಯುವಕರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಯುವಕರ ಸಾಮರ್ಥ್ಯ. ನಾವು ನಮ್ಮ ಯುವ ಸಮೂಹದ ಮೇಲೆ ಇರಿಸಿರುವ ವಿಶ್ವಾಸದ ಸಂಕೇತ ಅಂತಾ ತಿಳಿಸಿದ್ದಾರೆ.  

twsrc%5Etfw">August 15, 2025

15 August 2025 09:56 AM (IST)

Independence Day 2025 Live: ಮಾಣಿಕ್​ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ

79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯನವರು ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಸಿಎಂ ಅವರು ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭ ಕೋರಿದರು. ಅಲ್ಲದೇ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡು, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ - ಬಲಿದಾನಗೈದ ಮಹಾನ್ ಚೇತನಗಳನ್ನು ಸ್ಮರಿಸಿದರು. ಅತ್ತ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದರೆ, ಇತ್ತ ಬೆಂಗಳೂರಿನ ಮಾಣಿಕ್​ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು. 

15 August 2025 09:55 AM (IST)

Independence Day 2025 Live: ಜಗತ್ತಿಗೆ ಯುಪಿಐನ ಶಕ್ತಿಯನ್ನು ತೋರಿಸಿದ್ದೇವೆ

ಸೈಬರ್ ಭದ್ರತೆಯಿಂದ ಹಿಡಿದು ಕೃತಕ ಬುದ್ಧಿಮತ್ತೆಯವರೆಗೆ ಎಲ್ಲವೂ ನಮ್ಮದಾಗಿರುವುದು ಇಂದಿನ ಅಗತ್ಯವಲ್ಲವೇ? ನಮ್ಮ ಜನರ ಶಕ್ತಿ ಇದರಲ್ಲಿ ಭಾಗಿಯಾಗಬೇಕು. ಇಂದು ಅದು ಸಾಮಾಜಿಕ ಮಾಧ್ಯಮವಾಗಲಿ ಅಥವಾ ವಿಶ್ವದ ಇತರ ವೇದಿಕೆಗಳಾಗಲಿ, ನಾವು ವಿಶ್ವದ ವೇದಿಕೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಯುಪಿಐನ ಶಕ್ತಿಯನ್ನು ಜಗತ್ತಿಗೆ ತೋರಿಸಿದ್ದೇವೆ. ಡಿಜಿಟಲ್ ವಹಿವಾಟಿನಲ್ಲಿ ಭಾರತ ಮಾತ್ರ ಶೇ.50ರಷ್ಟು ಕೊಡುಗೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

15 August 2025 09:29 AM (IST)

Independence Day 2025 Live:ಯುವಜನರಿಗೆ 1 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆ

ದೇಶದ ಯುವಕರಿಗಾಗಿ ಪ್ರಧಾನಿ ನರೇಂದ್ರ ಮೋದಿ 1 ಲಕ್ಷ ಕೋಟಿ ರೂ. ಮೌಲ್ಯದ ಹೊಸ ಯೋಜನೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ʼಪ್ರಧಾನ ಮಂತ್ರಿ ವಿಕಾಸಿತ್ ಭಾರತ್ ಯೋಜನೆʼ ಎಂದು ಹೆಸರಿಸಲಾಗಿದೆ ಹೇಳಿದ್ದಾರೆ. ಯುವಕರು ಹೊಸ ಆಲೋಚನೆಗಳೊಂದಿಗೆ ಮುಂದೆ ಬಂದರೆ ಅವರನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ. GST ಕುರಿತು ರಾಜ್ಯಗಳೊಂದಿಗೆ ಚರ್ಚೆ ನಡೆಸಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ದೀಪಾವಳಿಗೆ ಮೊದಲು ಹೊಸ ಸುಧಾರಣೆಗಳು. ಇವುಗಳನ್ನು ಸಾಮಾನ್ಯ ಜನರಿಗೆ ದೀಪಾವಳಿ ಉಡುಗೊರೆಯಾಗಿ ನೀಡಲಾಗುವುದು ಎಂದು ಇದೇ ವೇಳೆ ಪ್ರಧಾನಿ ಮೋದಿ ತಿಳಿಸಿದ್ದಾರೆ. 

 

15 August 2025 09:13 AM (IST)

Independence Day 2025 Live: ಟ್ರಂಪ್‌ಗೆ ಟಕ್ಕರ್‌ ನೀಡಿದ ಪ್ರಧಾನಿ ಮೋದಿ

"ನಮ್ಮ ರೈತರು, ಮೀನುಗಾರರು, ಭಾರತದ ಜಾನುವಾರು ಸಾಕಣೆದಾರರ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ನೀತಿಯನ್ನ ನಾವು ಒಪ್ಪುವುದಿಲ್ಲವೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಪರೋಕ್ಷವಾಗಿ ಪ್ರಧಾನಿ ಮೋದಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅಮೆರಿಕವು ಭಾರತದ ಡೈರಿ ಮತ್ತು ಕೃಷಿ ಕ್ಷೇತ್ರಕ್ಕೂ ಎಂಟ್ರಿಯಾಗಲು ಬಯಸಿದೆ. ಭಾರತಕ್ಕೆ ಅಮೆರಿಕದಿಂದ ಡೈರಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ ಸೇರಿದಂತೆ ಎಲ್ಲವನ್ನೂ ನೇರವಾಗಿ ರಫ್ತು ಮಾಡಲು ಬಯಸಿದೆ. ಅಮೆರಿಕದಲ್ಲಿ ನಾನ್ ವೆಜ್ ತಿನ್ನುವ ಹಸುಗಳಿವೆ. ಹೀಗಾಗಿ ಹಸುವಿನ ಹಾಲಿಗೆ ಪಾವಿತ್ರ್ಯತೆ ಹೊಂದಿರುವ ಭಾರತದಲ್ಲಿ ಅಮೆರಿಕದ ಹಸುವಿನ ಹಾಲು ಬಂದರೆ ದೊಡ್ಡ ಸಂಕಷ್ಟ ಎದುರಾಗಲಿದೆ. ಹೀಗಾಗಿ ಪ್ರಧಾನಿ ಮೋದಿಯವರು ಅಮೆರಿಕದ ಡೈರಿ ಉತ್ಪನ್ನಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದಿನ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಪುನರುಚ್ಚಿಸಿದ್ದಾರೆ.  

 

15 August 2025 09:10 AM (IST)

Independence Day 2025 Live: ವೂಕಲ್ ಫಾರ್ ಲೋಕಲ್ ಮಂತ್ರ  

ನಾವು ಸ್ವದೇಶಿ ಉತ್ಪನ್ನಗಳನ್ನು ಬಲವಂತದಿಂದ ಅಲ್ಲ ಬದಲಾಗಿ ತಾಕತ್ತಾಗಿ ಬಳಸಬೇಕು. ʼವೂಕಲ್ ಫಾರ್ ಲೋಕಲ್​​ʼ ಅನ್ನು ಎಲ್ಲಾ ಭಾರತೀಯರ ಮಂತ್ರವಾಗಿ ಮಾಡಬೇಕು. ಭಾರತದ ಜನರ ಬೆವರಿನಿಂದ ತಯಾರಿಸಿದ ಮತ್ತು ನಮ್ಮ ಜನರ ಕಠಿಣ ಪರಿಶ್ರಮದ ತಯಾರಿಸಿದ ವಸ್ತುಗಳನ್ನು ಮಾತ್ರ ನಾವು ಖರೀದಿಸಬೇಕು. ಆಗ ದೇಶವು ಕೆಲವೇ ದಿನಗಳಲ್ಲಿ ಬದಲಾಗುತ್ತದೆ. ದೇಶದ ಯುವಕರಿಗೆ ತಮ್ಮ ಆಲೋಚನೆಗಳನ್ನು ಎಂದಿಗೂ ಸಾಯಲು ಬಿಡಬೇಡಿ. ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. 

 

15 August 2025 09:03 AM (IST)

Independence Day 2025 Live: ಈ ದೀಪಾವಳಿಗೆ ದೇಶದ ಜನತೆಗೆ ದೊಡ್ಡ ಗಿಫ್ಟ್​ ನೀಡುತ್ತೇವೆಂದ ಪ್ರಧಾನಿ ಮೋದಿ 

ಈ ಬಾರಿಯ ದೀಪಾವಳಿ ಹಬ್ಬಕ್ಕೆ ದೇಶದ ಜನತೆಗೆ ದೊಡ್ಡ ಉಡುಗೊರೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಸ್ವಾತಂತ್ರ್ಯ ದಿನದ ಅಂಗವಾಗಿ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ಜಿಎಸ್​ಟಿ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಘೋಷಿಸಿದರು. ತೆರಿಗೆ ಸ್ಲ್ಯಾಬ್​​ಗಳನ್ನು ತರ್ಕಬದ್ಧಗೊಳಿಸುವುದು. ಅಗತ್ಯ ಮತ್ತು ದಿನನಿತ್ಯದ ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸಲಾಗುತ್ತದೆ. ಈ ದೀಪಾವಳಿ ಹಬ್ಬಕ್ಕೆ ಸಾಮಾನ್ಯ ಜನರ ಜೀವನ ಸುಲಭಗೊಳಿಸುವ ಮತ್ತು ನಮ್ಮ ಆರ್ಥಿಕತೆಯನ್ನ ಬಲಪಡಿಸುವ ಹೊಸ, ಸರಳೀಕೃತ GST ರಚನೆಯನ್ನ ನೀವು ಕಾಣುತ್ತೀರಿ. ಈ ಬದಲಾವಣೆಗಳು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಕಳೆದ ಎಂಟು ವರ್ಷಗಳಲ್ಲಿ ನಾವು GST ಮೂಲಕ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿದ್ದೇವೆ. ಎಂಟು ವರ್ಷಗಳ ನಂತರ ನಾವು ಅದನ್ನು ಪರಿಶೀಲಿಸುವುದು ಈ ಸಮಯದ ಅಗತ್ಯವಾಗಿದೆ. ನಾವು ಅದನ್ನು ಪರಿಶೀಲಿಸಿದ್ದೇವೆ. ಈ ಬಗ್ಗೆ ರಾಜ್ಯಗಳೊಂದಿಗೆ ಸಹ ಮಾತನಾಡಿದ್ದೇವೆ. ನಮ್ಮ ಕೈಗಾರಿಕೆಗಳು ದೊಡ್ಡ ಲಾಭವನ್ನು ಪಡೆಯುತ್ತವೆ. ದೈನಂದಿನ ವಸ್ತುಗಳು ಅಗ್ಗವಾಗುತ್ತವೆ, ಇದು ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

15 August 2025 08:50 AM (IST)

Independence Day 2025 Live: ಭಾರತದ ನೀರು ಭಾರತೀಯರಿಗೆ ಮಾತ್ರ, ಶತ್ರುಗಳಿಗಲ್ಲ - ಪ್ರಧಾನಿ ಮೋದಿ 

ಭಾರತದಲ್ಲಿ ಹುಟ್ಟುವ ನೀರಿನ ಹಕ್ಕು ಕೇವಲ ಭಾರತೀಯರು ಹಾಗೂ ಇಲ್ಲಿನ ರೈತರಿಗಿದೆ, ಶತ್ರುಗಳಿಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶತ್ರುರಾಷ್ಟ್ರ ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಹುಟ್ಟುವ ನದಿಗಳ ನೀರಿನ ಮೇಲೆ ಕೇವಲ ಭಾರತೀಯರು ಹಾಗೂ ಇಲ್ಲಿನ ರೈತರಿಗೆ ಮಾತ್ರ ಹಕ್ಕಿದೆ ಅಂತಾ ಹೇಳಿದ್ದಾರೆ. ಇಷ್ಟು ವರ್ಷ ಭಾರತದಲ್ಲಿ ಹುಟ್ಟುವ ನೀರು ಶತ್ರುಗಳ ಹೊಲಗಳಿಗೆ ನೀರುಣಿಸುತ್ತಿತ್ತು. ನಮ್ಮ ಭೂಮಿ ನೀರಿಲ್ಲದೆ ಬರಿದಾಗುತ್ತಿತ್ತು. ಕಳೆದ ಏಳು ದಶಕಗಳಿಂದ ನನ್ನ ದೇಶದ ರೈತರಿಗೆ ಊಹಿಸಲಾಗದ ನಷ್ಟವನ್ನುಂಟು ಮಾಡಿರುವ ಒಪ್ಪಂದ ಯಾಕೆ ಬೇಕು? ಎಂದು ಪ್ರಶ್ನಿಸಿದರು. ರೈತರು ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ನಾವು ಈ ಸಿಂಧೂ ಜಲ ಒಪ್ಪಂದಕ್ಕೆ ಮತ್ತೆ ಒಪ್ಪಿಗೆ ನೀಡುವುದಿಲ್ಲ. ಭಯೋತ್ಪಾದನೆ ಮತ್ತು ಅದನ್ನು ಪೋಷಿಸುವವರನ್ನ ನಾವು ಇನ್ಮುಂದೆ ಬೇರೆ ಬೇರೆ ಎಂದು ಪರಿಗಣಿಸುವುದಿಲ್ಲ. ಉಗ್ರರಿಗೆ ಸಹಾಯ ಮಾಡುವವರನ್ನು ಕೂಡ ಉಗ್ರರಂತೆಯೇ ಕಾಣುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

15 August 2025 08:38 AM (IST)

Independence Day 2025 Live: ಹೊಸ ಅಣೆಕಟ್ಟುಗಳ ನಿರ್ಮಾಣ

ದೇಶದ ಅಭಿವೃದ್ಧಿ ವಿಷಯದಲ್ಲಿ ನಾವು ಅನೇಕ ಸವಾಲನ್ನು ಸ್ವೀಕರಿಸಿದ್ದೇವೆ. ಕಳೆದ 11 ವರ್ಷಗಳಲ್ಲಿ ಸೌರಶಕ್ತಿ ಹೆಚ್ಚಾಗಿದೆ. ಜಲವಿದ್ಯುತ್ ವಿಸ್ತರಿಸಲು ಮತ್ತು ಶುದ್ಧ ಶಕ್ತಿಯನ್ನು ಪಡೆಯಲು ನಾವು ಹೊಸ ಅಣೆಕಟ್ಟುಗಳನ್ನು ನಿರ್ಮಿಸುತ್ತಿದ್ದೇವೆ. ಇಂದು ಭಾರತವು ಮಿಷನ್ ಗ್ರೀನ್ ಹೈಡ್ರೋಜನ್‌ನಲ್ಲಿ ಸಾವಿರಾರು ಕೋಟಿಗಳನ್ನು ಹೂಡಿಕೆ ಮಾಡುತ್ತಿದೆ. ಪರಮಾಣು ಶಕ್ತಿಯಲ್ಲಿ 10 ಹೊಸ ಪರಮಾಣು ರಿಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿವೆ. 2047ರ ವೇಳೆಗೆ ಪರಮಾಣು ಶಕ್ತಿ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸುವ ಸಂಕಲ್ಪದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಪರಮಾಣು ಶಕ್ತಿ ಕ್ಷೇತ್ರದಲ್ಲಿ ನಾವು ದೊಡ್ಡ ಬದಲಾವಣೆಗಳನ್ನು ತರುತ್ತೇವೆ. ಖಾಸಗಿ ವಲಯಕ್ಕೆ ನಾವು ಪರಮಾಣು ಶಕ್ತಿಯ ಬಾಗಿಲುಗಳನ್ನು ತೆರೆದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

15 August 2025 08:31 AM (IST)

Independence Day 2025 Live: ನ್ಯೂಕ್ಲಿಯರ್ ಬೆದರಿಕೆ ಸಹಿಸುವುದಿಲ್ಲ

ʼಆಪರೇಷನ್ ಸಿಂಧೂರ್‌ʼನಲ್ಲಿ ಭಾರತ ಎಷ್ಟು ಸ್ವಾವಲಂಬಿಯಾಗಿದೆ ಎಂದು ನಾವು ನೋಡಿದ್ದೇವೆ. ಶತ್ರುಗಳಿಗೆ ಕ್ಷಣಾರ್ಧದಲ್ಲಿ ನಾಶಮಾಡುವ ಭಾರತದ ಶಕ್ತಿ ಏನೆಂದು ತಿಳಿದಿರಲಿಲ್ಲ. ಕಳೆದ 10 ವರ್ಷಗಳಿಂದ ʼನಾವು ಮೇಕ್ ಇನ್ ಇಂಡಿಯಾʼವನ್ನು ಒಂದು ಧ್ಯೇಯವಾಗಿ ತೆಗೆದುಕೊಳ್ಳುತ್ತಿದ್ದೇವೆ. 21ನೇ ಶತಮಾನವು ತಂತ್ರಜ್ಞಾನದ ಶತಮಾನವಾಗಿದೆ.

ಭಾರತವು ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ, ಭವಿಷ್ಯದಲ್ಲಿ ನಮಗೆ ತೊಂದರೆ ಮಾಡಲು ಶತ್ರುಗಳು ಆಲೋಚಿಸಿದರೂ ನಮ್ಮ ಸೇನೆಯು ಅದಕ್ಕೆ ತಕ್ಕ ಉತ್ತರ ನೀಡುತ್ತದೆ. ನಮ್ಮ ಇಂಧನ ಅಗತ್ಯಗಳಿಗಾಗಿ ನಾವು ಅನೇಕ ದೇಶಗಳನ್ನು ಅವಲಂಬಿಸಿದ್ದೇವೆ. ನಾವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಇತರ ದೇಶಗಳಿಂದ ಪೆಟ್ರೋಲ್, ಡೀಸೆಲ್ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳಬೇಕಾಗಿದೆʼ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

15 August 2025 08:24 AM (IST)

Independence Day 2025 Live: ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ 

ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ಗುಡುಗಿರುವ ಪ್ರಧಾನಿ ನರೇಂದ್ರ ಮೋದಿ, "ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಭಾರತ ನಿರ್ಧರಿಸಿದೆ..." ನಮ್ಮ ತಂಟೆಗೆ ಬಂದರೆ ತಕ್ಕ ಶಾಸ್ತಿ ಮಾಡದೆ ಬಿಡುವುದಿಲ್ಲ. ನಾವು ಭಯೋತ್ಪಾದನೆ ಮಟ್ಟಹಾಕಲು, ಉಗ್ರತ್ವವನ್ನ ಬುಡಸಮೇತ ಕಿತ್ತುಹಾಕಲು ಶ್ರಮಿಸುತ್ತಿದ್ದೇವೆʼ ಎಂದು ಹೇಳಿದ್ದಾರೆ. 

15 August 2025 08:13 AM (IST)

Independence Day 2025 Live: ʼಆಪರೇಷನ್‌ ಸಿಂಧೂರ್‌ʼ ಮೂಲಕ ಉಗ್ರರಿಗೆ ತಕ್ಕ ಶಾಸ್ತಿ

ಇಡೀ ಜಗತ್ತು ಪಹಲ್ಗಾಮ್ ಹತ್ಯಾಕಾಂಡದಿಂದ ಆಘಾತಕ್ಕೊಳಗಾಯಿತು... ಇಡೀ ಭಾರತವೇ ಆಕ್ರೋಶಗೊಂಡಿತ್ತು. ಉಗ್ರರನ್ನ ಸೆದೆಬಡಿಯಲು ʼಆಪರೇಷನ್ ಸಿಂಧೂರ್ʼ ಆ ಆಕ್ರೋಶದ ಅಭಿವ್ಯಕ್ತಿಯಾಗಿದೆ.... ಪಾಕಿಸ್ತಾನದಲ್ಲಿ ವಿನಾಶವು ತುಂಬಾ ದೊಡ್ಡದಾಗಿದೆ. ಪ್ರತಿದಿನ ಭಯೋತ್ಪಾದನೆಯ ಹೊಸ ಹೊಸ ಮಾಹಿತಿ ಹೊರಬರುತ್ತಿದೆ... ನಾವು ಉಗ್ರತ್ವಕ್ಕೆ ತಕ್ಕ ಶಾಸ್ತಿ ಮಾಡದೇ ಬಿಡುವುದಿಲ್ಲ. ʼಕೆಂಪು ಕೋಟೆಯ ಕೋಟೆಯಿಂದ ʼʼಆಪರೇಷನ್ ಸಿಂಧೂರ್‌ʼನ ವೀರರಿಗೆ ನಮಸ್ಕರಿಸಲು ನನಗೆ ಅವಕಾಶ ಸಿಗುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ. ನಮ್ಮ ಧೈರ್ಯಶಾಲಿ ಜವಾನರು ಶತ್ರುಗಳನ್ನ ಕಲ್ಪನೆಗೂ ಮೀರಿ ಶಿಕ್ಷಿಸಿದರು. ಏಪ್ರಿಲ್ 22ರಂದು ಗಡಿಯಾಚೆಯಿಂದ ಭಯೋತ್ಪಾದಕರು ಪಹಲ್ಗಾಮ್‌ಗೆ ಬಂದು ನಮ್ಮವರ ಧರ್ಮವನ್ನು ಕೇಳಿ ಗುಂಡು ಹಾರಿಸಿ ಕೊಂದರು... ಇದರಿಂದ ಇಡೀ ಭಾರತವೇ ಆಕ್ರೋಶಗೊಂಡಿತ್ತು. ಇಡೀ ಜಗತ್ತು ಸಹ ಇಂತಹ ಹತ್ಯಾಕಾಂಡದಿಂದ ಆಘಾತಕ್ಕೊಳಗಾಯಿತು. ʼಆಪರೇಷನ್ ಸಿಂಧೂರ್‌ʼ ಆ ಆಕ್ರೋಶದ ಅಭಿವ್ಯಕ್ತಿಯಾಗಿದೆ. ನಂತರ ನಾವು ನಮ್ಮ ಸಶಸ್ತ್ರ ಪಡೆಗಳಿಗೆ ಮುಕ್ತ ಹಸ್ತವನ್ನು ನೀಡಿದ್ದೇವೆ. ಅವರು ತಂತ್ರ, ಗುರಿ ಮತ್ತು ಸಮಯವನ್ನು ನಿರ್ಧರಿಸುತ್ತಾರೆ. ನಮ್ಮ ಪಡೆಗಳು ಹಲವಾರು ದಶಕಗಳಿಂದ ಎಂದಿಗೂ ಮಾಡದ ಕೆಲಸವನ್ನು ಮಾಡಿದರು. ನಾವು ಶತ್ರುಗಳ ನೆಲಕ್ಕೆ ನೂರಾರು ಕಿಲೋಮೀಟರ್ ಪ್ರವೇಶಿಸಿ ಅವರ ಭಯೋತ್ಪಾದಕ ಕೇಂದ್ರ ಕಚೇರಿಗಳನ್ನ ನೆಲಸಮಗೊಳಿಸಿದ್ದೇವೆ... ಪಾಕಿಸ್ತಾನಕ್ಕೆ ಮುಟ್ಟಿ ನೋಡುಕೊಳ್ಳುವಂತಹ ಶಾಸ್ತಿ ಮಾಡಲಾಗಿದೆ. ಬಾಲ ಬಿಚ್ಚಿದರೆ ನಾವು ಅವರ ಬಾಲವನ್ನೇ ಕತ್ತರಿಸಿಹಾಕುತ್ತೇವೆʼ ಎಂದು ಪ್ರಧಾನಿ ಮೋದಿ ಶತ್ರು ರಾಷ್ಟ್ರದ ವಿರುದ್ಧ ಗುಡುಗಿದ್ದಾರೆ. 

15 August 2025 08:11 AM (IST)

Independence Day 2025 Live:  ʼಆಪರೇಷನ್ ಸಿಂಧೂರ್‌ʼನ ಧೈರ್ಯಶಾಲಿ ಸೈನಿಕರಿಗೆ ನಮನ

"ಕಳೆದ ಕೆಲವು ದಿನಗಳಿಂದ ನಾವು ನೈಸರ್ಗಿಕ ವಿಕೋಪಗಳು, ಭೂಕುಸಿತಗಳು, ಮೇಘಸ್ಫೋಟಗಳು ಮತ್ತು ಇತರ ಹಲವು ವಿಪತ್ತುಗಳನ್ನು ಎದುರಿಸುತ್ತಿದ್ದೇವೆ. ಸಂತ್ರಸ್ತ ಜನರೊಂದಿಗೆ ನಮ್ಮ ಸಹಾನುಭೂತಿ ಇದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ರಕ್ಷಣಾ ಕಾರ್ಯಾಚರಣೆಗಳು, ಪರಿಹಾರ ಪ್ರಯತ್ನಗಳು ಮತ್ತು ಪುನರ್ವಸತಿ ಕಾರ್ಯಗಳಲ್ಲಿ ಸಂಪೂರ್ಣ ಶಕ್ತಿಯಿಂದ ಒಟ್ಟಾಗಿ ಕೆಲಸ ಮಾಡುತ್ತಿವೆ. ಇಂದು ಕೆಂಪು ಕೋಟೆಯ ಕೋಟೆಯಿಂದ ʼಆಪರೇಷನ್ ಸಿಂಧೂರ್‌ʼನ ಧೈರ್ಯಶಾಲಿ ಸೈನಿಕರಿಗೆ ನಮನ ಸಲ್ಲಿಸುವ ಅವಕಾಶ ನನಗೆ ಸಿಕ್ಕಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

15 August 2025 08:06 AM (IST)

Independence Day 2025 Live: ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕೊಡುಗೆ ಸ್ಮರಿಸಿದ ಪ್ರಧಾನಿ ಮೋದಿ

ʼಇಂದು ಕೆಂಪು ಕೋಟೆಯ ಕೋಟೆಯಿಂದ ದೇಶಕ್ಕೆ ಮಾರ್ಗದರ್ಶನ ನೀಡುವ ಮತ್ತು ದೇಶಕ್ಕೆ ನಿರ್ದೇಶನ ನೀಡುವ ಸಂವಿಧಾನದ ನಿರ್ಮಾಪಕರಿಗೆ ನಾನು ಗೌರವಯುತ ಗೌರವ ಸಲ್ಲಿಸುತ್ತೇನೆ. ಇಂದು ನಾವು ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ 125ನೇ ಜನ್ಮ ದಿನಾಚರಣೆಯನ್ನು ಸಹ ಆಚರಿಸುತ್ತಿದ್ದೇವೆ. ಭಾರತದ ಸಂವಿಧಾನಕ್ಕಾಗಿ ತ್ಯಾಗ ಮಾಡಿದ ದೇಶದ ಮೊದಲ ಮಹಾನ್ ವ್ಯಕ್ತಿ ಡಾ.ಶ್ಯಾಮ ಪ್ರಸಾದ್ ಮುಖರ್ಜಿ. ಅವರು ಸಂವಿಧಾನಕ್ಕಾಗಿ ತ್ಯಾಗ ಮಾಡಿದ್ದಾರೆ. 370ನೇ ವಿಧಿಯ ಗೋಡೆಯನ್ನು ಕೆಡವುವ ಮೂಲಕ ನಾವು ʼಒಂದು ದೇಶ, ಒಂದು ಸಂವಿಧಾನʼದ ಮಂತ್ರವನ್ನು ಜೀವಂತಗೊಳಿಸಿದಾಗ, ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರಿಗೆ ನಿಜವಾದ ಗೌರವ ಸಲ್ಲಿಸಿದ್ದೇವೆ. ಇಂದು ಕೆಂಪು ಕೋಟೆಯಲ್ಲಿ ಅನೇಕ ವಿಶೇಷ ಗಣ್ಯರು ಇದ್ದಾರೆ. ದೂರದ ಹಳ್ಳಿಗಳ ಪಂಚಾಯತ್ ಸದಸ್ಯರು, ಡ್ರೋನ್ ದೀದಿಯ ಪ್ರತಿನಿಧಿಗಳು, ಲಖ್ಪತಿ ದೀದಿಯ ಪ್ರತಿನಿಧಿಗಳು, ಕ್ರೀಡಾ ಪ್ರಪಂಚದ ಜನರು, ರಾಷ್ಟ್ರಕ್ಕೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳು ಇಲ್ಲಿದ್ದಾರೆ. ಒಂದು ರೀತಿ ನನ್ನ ಕಣ್ಣ ಮುಂದೆ ಒಂದು ಬಲಿಷ್ಠ ಭಾರತವನ್ನು ನಾನು ನೋಡುತ್ತಿದ್ದೇನೆ. ಇಂದು ಕೆಂಪು ಕೋಟೆಯು ತಂತ್ರಜ್ಞಾನದ ಮೂಲಕ ಭಾರತದೊಂದಿಗೆ ಸಂಪರ್ಕ ಹೊಂದಿದೆʼ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

15 August 2025 08:01 AM (IST)

Independence Day 2025 Live: ಆಪರೇಷನ್ ಸಿಂಧೂರ್ ವೀರರಿಗೆ ನನ್ನ ನಮನ- ಪ್ರಧಾನಿ ಮೋದಿ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಅನೇಕ ಜನರ ತ್ಯಾಗದಿಂದ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸ್ವಾತಂತ್ರ್ಯಕ್ಕಾಗಿ ಗೌರವ ಸಲ್ಲಿಸಿದ ಹುತಾತ್ಮರಿಗೆ ಗೌರವ ಸಲ್ಲಿಸಿದ್ದೇವೆ. ಇದೇ ವೇಳೆ ಆಪರೇಷನ್ ಸಿಂಧೂರ್‌ನ ವೀರರಿಗೆ ಮೋದಿ ನಮನ ಸಲ್ಲಿಸಿದರು. ಪಹಲ್ಗಾಮ್‌ನಲ್ಲಿ ಪತ್ನಿಯರ ಕಣ್ಣೆದುರೇ ಗಂಡಂದಿರನ್ನು ಕೊಲ್ಲಲಾಯಿತು. ಆಪರೇಷನ್ ಸಿಂಧೂರ್ ಭಯೋತ್ಪಾದನೆಯ ವಿರುದ್ಧದ ಸಮರವಾಗಿತ್ತು. ಉಗ್ರರರನ್ನು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಯುದ್ಧ ತಂತ್ರಗಳ ಮೂಲಕ ಯಶಸ್ವಿಯಾಗಿ ಆಪರೇಷನ್‌ ಸಿಂಧೂರ್‌ ನಡೆಸಲಾಯಿತು. ದೇಶದ ಜನರ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದರು. 

15 August 2025 08:00 AM (IST)

Independence Day 2025 Live: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಮೋದಿ ನಮನ

ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ನಡೆಯುತ್ತಿದೆ. ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿದರು. ಪ್ರಧಾನಿಯಾಗಿ ಮೋದಿ 12 ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

15 August 2025 07:58 AM (IST)

Independence Day 2025 Live: 140 ಕೋಟಿ ಸಂಕಲ್ಪಗಳ ಸ್ವಾತಂತ್ರ್ಯ ಹಬ್ಬ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ನಂತರ ಅವರು ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. "ಈ ಮಹಾನ್ ಸ್ವಾತಂತ್ರ್ಯ ಹಬ್ಬವು 140 ಕೋಟಿ ಸಂಕಲ್ಪಗಳ ಹಬ್ಬ..." ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

 

15 August 2025 07:54 AM (IST)

Independence Day 2025 Live: 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

ದೇಶದಾದ್ಯಂತ 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಕೇಂದ್ರ ಸರ್ಕಾರವು ʼನವ ಭಾರತ್ ಥೀಮ್‌ʼನೊಂದಿಗೆ 79ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಆಯೋಜಿಸುತ್ತಿದೆ. ಪ್ರಧಾನಿ ಮೋದಿ 12ನೇ ಬಾರಿಗೆ ಧ್ವಜಾರೋಹಣ ಮಾಡಿದ್ದಾರೆ. ಈ ಆಚರಣೆಗಳಲ್ಲಿ 25,000 ಜನರು ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 15,000 ಸಿಬ್ಬಂದಿಯೊಂದಿಗೆ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

15 August 2025 07:50 AM (IST)

Independence Day 2025 Live: ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ

ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮೊದಲು ಅವರು ಮೂರು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು. ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.

15 August 2025 07:26 AM (IST)

Independence Day 2025 Live: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಮೋದಿ ನಮನ 
ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದೆ. ಪ್ರಧಾನಿ ಮೋದಿ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿದರು. ಶೀಘ್ರದಲ್ಲೇ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಪ್ರಧಾನಿಯಾಗಿ ಮೋದಿ 12 ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. 

15 August 2025 07:15 AM (IST)

Independence Day Celebration 2025:12ನೇ ಬಾರಿಗೆ ಧ್ವಜಾರೋಹಣ ಮಾಡಲಿರುವ ಮೋದಿ
79ನೇ ಸ್ವಾತಂತ್ರ್ಯೋತ್ಸವಕ್ಕೆ ಕೆಂಪು ಕೋಟೆ ಸಜ್ಜಾಗಿದೆ. ಕೇಂದ್ರ ಸರ್ಕಾರ ನವ ಭಾರತ್ ಥೀಮ್‌ನೊಂದಿಗೆ 79ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಆಯೋಜಿಸುತ್ತಿದೆ. ಪ್ರಧಾನಿ ಮೋದಿ 12ನೇ ಬಾರಿಗೆ ಧ್ವಜಾರೋಹಣ ಮಾಡಲಿದ್ದಾರೆ. ಈ ಆಚರಣೆಗಳಲ್ಲಿ 25,000 ಜನರು ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 15,000 ಸಿಬ್ಬಂದಿಯೊಂದಿಗೆ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

15 August 2025 07:13 AM (IST)

Independence Day 2025 Live: ದೇಶದ ಜನತೆಗೆ ಪ್ರಧಾನಿ ಮೋದಿಯವರ ಮನವಿ!
ಭಾರತ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪು ಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬೆಳಿಗ್ಗೆ 7:21 ಕ್ಕೆ ಕೆಂಪು ಕೋಟೆಯನ್ನು ತಲುಪಲಿದ್ದಾರೆ. ಬೆಳಿಗ್ಗೆ 7:30 ಕ್ಕೆ ರಾಷ್ಟ್ರಧ್ವಜ ಹಾರಿಸಲಾಗುವುದು, ನಂತರ ರಾಷ್ಟ್ರಗೀತೆ ಮೊಳಗಿಸಲಾಗುವುದು. ನಂತರ, ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದು, ರಾಷ್ಟ್ರೀಯ ಏಕತೆ ಮತ್ತು ತಾಂತ್ರಿಕ ಪ್ರಗತಿಯ ಮೇಲೆ ಕೇಂದ್ರೀಕರಿಸಲಿದ್ದಾರೆ. 

Add Zee News as a Preferred Source

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More