ಇಂದು 3ನೇ ಹಂತದಲ್ಲಿ 13 ರಾಜ್ಯಗಳ 117 ಕ್ಷೇತ್ರಗಳಲ್ಲಿ ಮತದಾನ ಆರಂಭ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸ್ಪರ್ಧಿಸಿರುವ ಗಾಂಧಿನಗರ ಮತ್ತು ಕಾಂಗ್ರೆಸ್‌‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಿರುವ  ಕೇರಳದ ವಯನಾಡುವಿನಲ್ಲಿ ಇಂದು ಮತದಾನ.

Last Updated : Apr 23, 2019, 07:42 AM IST
ಇಂದು 3ನೇ ಹಂತದಲ್ಲಿ 13 ರಾಜ್ಯಗಳ 117 ಕ್ಷೇತ್ರಗಳಲ್ಲಿ ಮತದಾನ ಆರಂಭ title=

ನವದೆಹಲಿ: ದೇಶಾದ್ಯಂತ 13 ರಾಜ್ಯಗಳ ಒಟ್ಟು 117 ಕ್ಷೇತ್ರಗಳಿಗೆ ಮಂಗಳವಾರ ಪ್ರಸಕ್ತ ಲೋಕಸಭಾ ಚುನಾವಣೆಯ 3ನೇ ಹಂತದ  ಮತದಾನ ಆರಂಭವಾಗಿದೆ. 

3ನೇ ಹಂತದಲ್ಲಿ ಅಸ್ಸಾಂ - 4, ಬಿಹಾರ - 5, ಛತ್ತೀಸ್​ಘಡ - 7, ಗುಜರಾತ್ - 26, ಗೋವಾ - 2, ಜಮ್ಮು ಮತ್ತು ಕಾಶ್ಮೀರ - 1, ಕರ್ನಾಟಕ - 14, ಕೇರಳ - 20,  ಮಹಾರಾಷ್ಟ್ರ - 14, ಒಡಿಶಾ - 6, ಉತ್ತರ ಪ್ರದೇಶ - 10, ಪಶ್ಚಿಮ ಬಂಗಾಳ - 5, ದಾದ್ರಾ ಮತ್ತು ನಗರ್ ಹಾವಲಿಯ 1 ಹಾಗೂ ದಮನ್ ಮತ್ತು ದಿಯುವಿನ 1 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ‌.

3ನೇ ಹಂತದ ಮಹತ್ವದ ವಿಷಯ ಎಂದರೆ ಮಂಗಳವಾರ ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರ ಅಗ್ನಿಪರೀಕ್ಷೆ ನಡೆಯಲಿದೆ. 'ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ದಕ್ಷಿಣ ಭಾರತವನ್ನು ಕಡೆಗಣಿಸುತ್ತಿದೆ. ದಕ್ಷಿಣ ಭಾರತೀಯರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಆದುದರಿಂದ ದಕ್ಷಿಣ ಭಾರತದ ಜನರೊಂದಿಗೆ ನಾನು ಇದ್ದೇನೆ ಎಂಬ ಸಂದೇಶ ನೀಡಲು ಈ ಭಾರೀ ಕೇರಳದ ವಯನಾಡುವಿನಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ' ಎಂದಿದ್ದರು ಕಾಂಗ್ರೆಸ್‌‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ. ಮಂಗಳವಾರ ರಾಹುಲ್ ಗಾಂಧಿ ಪ್ರತಿನಧಿಸುತ್ತಿರುವ ವಯನಾಡಿನಲ್ಲಿ‌ ಮತದಾನ ನಡೆಯಲಿದೆ.

ಬಿಜೆಪಿಯ ಅಗ್ರ ನಾಯಕ ಲಾಲ ಕೃಷ್ಣ ಅಡ್ವಾಣಿ ಅವರಿಗೆ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿ ಅವರು ಪ್ರತಿನಿಧಿಸುತ್ತಿದ್ದ ಗುಜರಾತಿನ ಗಾಂಧಿನಗರದಿಂದ ಕಣಕ್ಕಿಳಿದಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸ್ಪರ್ಧಿಸಿರುವ ಗಾಂಧಿನಗರ ಸೇರಿದಂತೆ ಗುಜರಾತಿನ ಎಲ್ಲಾ 26 ಲೋಕಸಭಾ ಕ್ಷೇತ್ರಗಳಿಗೂ ಮಂಗಳವಾರ ಮತದಾನವಾಗಲಿದೆ.

3ನೇ ಹಂತದಲ್ಲಿ ಉತ್ತರ ಪ್ರದೇಶದ 10 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗಲಿದ್ದು ಇಲ್ಲಿನ ಬಹಳ ಪ್ರಮುಖ ಕ್ಷೇತ್ರಗಳೆಂದರೆ ಮೈನ್ ಪುರಿ, ರಾಂಪುರ ಮತ್ತು ಫಿಲಿಭಿತ್. ಮೈನ್ ಪುರಿ ಸಮಾಜವಾದಿ ಪಕ್ಷದ ಭದ್ರಕೋಟೆ. ಇಲ್ಲಿ ಸಮಾಜವಾದಿ ಪಕ್ಷ ಬರೊಬ್ವರಿ 8 ಭಾರಿ ಜಯಭೇರಿ ಸಾಧಿಸಿದೆ. ಯಾದವ್ ಸಮುದಾಯದ ದಟ್ಟ ಪ್ರಭಾವ ಇರುವ ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಗ್ರ ನಾಯಕ ಮುಲಾಯಂ ಸಿಂಗ್ ಯಾದವ್ ಕೂಡ ಗೆದ್ದಿದ್ದರು. 2004ರಲ್ಲಿ ಮೈನ್ ಪುರಿಯ‌ ಜೊತೆಗೆ ಅಜಂ ಘಡ ಲೋಕಸಭಾ ಕ್ಷೇತ್ರದಲ್ಲೂ ಕಣಕ್ಕಿಳಿದಿದ್ದ ಮುಲಾಯಂ ಸಿಂಗ್ ಎರಡೂ ಕಡೆ ಗೆಲುವು ಸಾಧಿಸಿದ್ದರು. ಬಳಿಕ ಅಜಂ ಘಡ ಕ್ಷೇತ್ರ ಇಟ್ಟುಕೊಂಡು ಮೈನ್ ಪುರಿ ಬಿಟ್ಟುಕೊಟ್ಟಿದ್ದರು. ಈ ಭಾರಿ ತಮ್ಮ ಚುನಾವಣಾ ರಾಜಕೀಯ ಮೈನ್ ಪುರಿ ಕ್ಷೇತ್ರದಿಂದಲೇ ಆಗಬೇಕೆಂದು ಇಲ್ಲಿಂದ ಕಣಕ್ಕಿಳಿದಿದ್ದಾರೆ. ಯಾದವ್ ಸಮುದಾಯದ ಅಭೂತಪೂರ್ವ ಬೆಂಬಲ, ಕಡೆಯ ಚುನಾವಣೆ ಎಂಬ ಅನುಕಂಪಗಳ ಜೊತೆಗೆ ಈ ಭಾರಿ ಅವರಿಗೆ ಮಹಾಘಟಬಂಧನದ ಮಹಾನೆರವು ಲಭಿಸಲಿದೆ. ಮುಲಾಯಂ ಸಿಂಗ್ ಯಾದವ್ ಪರವಾಗಿ ಅವರ ಎರಡೂವರೆ ದಶಕಗಳ ರಾಜಕೀಯ ವೈರಿ ಬಿಎಸ್​ಪಿ ನಾಯಕಿ ಮಾಯವಾತಿ ಪ್ರಚಾರ ಮಾಡಿದ್ದಾರೆ. ಹಳೆಯ ದ್ವೇಷ ಮರೆತು ಮುಲಾಯಂ ಸಿಂಗ್ ಯಾದವ್ ಅವರನ್ನ ಕೊಂಡಾಡಿದ್ದಾರೆ. ಈ ನಡುವೆ ಬಿಜೆಪಿ ಮೋದಿ ಅಲೆಯನ್ನು ನೆಚ್ಚಿಕೊಂಡಿದೆ.

ಉತ್ತರ ಪ್ರದೇಶದ ಮುಸ್ಲೀಮರ ಪ್ರಶ್ನಾತೀತ ನಾಯಕ ಅಜಂ ಖಾನ್ ಮತ್ತೆ ರಾಂಪುರದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇವರ ಎದುರಾಳಿಯಾಗಿ ಹಿಂದೆ ಇದೇ ಅಜಂ ಖಾನ್ ಅವರ ಜೊತೆ ಸಮಾಜವಾದಿ ಪಕ್ಷದಲ್ಲಿದ್ದು ಇತ್ತೀಚೆಗೆ ಬಿಜೆಪಿ ಸೇರಿದ ಹಿರಿಯ ನಟಿ ಜಯಪ್ರದಾ ಸ್ಪರ್ಧಿಸಿದ್ದಾರೆ. ಇದಲ್ಲದೆ ಸುಲ್ತಾನ ಪುರ ಕ್ಷೇತ್ರದ ಸುಲ್ತಾನನಾಗಿದ್ದ ವರುಣ್ ಗಾಂಧಿ ಈ ಭಾರಿ ತಾವು ಪ್ರತಿನಿಧಿಸುತ್ತಿದ್ದ ಸುಲ್ತಾನ್ ಪುರ ಬಿಟ್ಟು ತಮ್ಮ ತಾಯಿ ಸ್ಪರ್ಧೆ ಮಾಡುತ್ತಿದ್ದ ಫಿಲಿಭಿತ್ ನಿಂದ ಕಣಕ್ಕಿಳಿದಿದ್ದಾರೆ. ಮೋದಿ, ಅಮಿತ್ ಶಾ ಅವರನ್ನು ಲೆಕ್ಕಕ್ಕೇ‌ ಇಟ್ಟಿಲ್ಲದ ವರುಣ್ ಗಾಂಧಿ ಸ್ವಂತ ಬಲದ ಮೇಲೆ ಚುನಾವಣೆ ಗೆಲ್ಲುವ ವಿಶ್ವಾಸಹೊಂದಿದ್ದಾರೆ. ತಮ್ಮ ಪ್ರಚಾರದುದ್ದಕ್ಕೂ ಎಲ್ಲೂ ಮೋದಿ ಮತ್ತು ಅಮಿತ್ ಶಾ‌ ಹೆಸರೇಳುತ್ತಿಲ್ಲ‌. ಮೋದಿ ಸರ್ಕಾರದ ಸಾಧನೆಗಳ ಬಗ್ಗೆಯೂ ಮಾತನಾಡುತ್ತಿಲ್ಲ. ಮೋದಿ - ಅಮಿತ್ ಶಾ ಹೆಸರೇಳದೆ ಚುನಾವಣೆ ನಡೆಸುತ್ತಿರುವ ದೇಶದ ಏಕೈಕ ಬಿಜೆಪಿ‌ ಅಭ್ಯರ್ಥಿ ವರುಣ್ ಗಾಂಧಿ.

ಮಹಾರಾಷ್ಟ್ರದ 14 ಕ್ಷೇತ್ರಗಳ ಪೈಕಿ ಬಾರಾಮತಿ ಬಹಳ ಪ್ರಮುಖ ಕ್ಷೇತ್ರ. ತಾವು ಪ್ರತಿನಿಧಿಸುತ್ತಿದ್ದ ಬಾರಾಮತಿ ಕ್ಷೇತ್ರವನ್ನು ಎನ್ ಸಿ ಪಿ ನಾಯಕ ಶರದ್ ಪವಾರ್ ಈ ಭಾರಿ ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಅದಲ್ಲದೆ ಅವರು ಚುನಾವಣಾ ರಾಜಕಾರಣದಿಂದಲೂ ಹಿಂದೆ ಸರಿದಿದ್ದಾರೆ. ಶರದ್ ಪವಾರ್ ಅವರ ಪ್ರಭಾವದ ಜೊತೆಗೆ ಈ ಭಾರಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಮಾಡಿಕೊಂಡಿರುವುದು ಸುಪ್ರಿಯಾ ಸುಳೆ ಅವರಿಗೆ ಪ್ಲಸ್ ಪಾಯಿಂಟ್. ಬಿಜೆಪಿಯಿಂದ ಇಲ್ಲಿ ಕಂಚನ್ ಪೌಲ್ ಕಣದಲ್ಲಿದ್ದಾರೆ.
 

Trending News