ಮಹಾರಾಷ್ಟ್ರ: ಶಿವಸೇನಾ-NCP-ಕಾಂಗ್ರೆಸ್ ಅಘಾಡಿಯಲ್ಲಿ ಭಾರಿ ಬಿರುಕು

ಭೀಮಾ ಕೊರೆಗಾಂವ್ ಪ್ರಕರಣದ ತನಿಖೆಯನ್ನು ಕೇಂದ್ರಕ್ಕೆ ಹಸ್ತಾಂತರಿಸಿದ ಕುರಿತು ಕೂಡ ಸಿಎಂ ಉದ್ಧವ್ ಠಾಕ್ರೆ ಉತ್ತರ ನೀಡಿದ್ದು, NCP ಅವರ ಈ ಕ್ರಮವನ್ನು ಪ್ರಶ್ನಿಸಿದೆ.

Updated: Feb 18, 2020 , 01:15 PM IST
ಮಹಾರಾಷ್ಟ್ರ: ಶಿವಸೇನಾ-NCP-ಕಾಂಗ್ರೆಸ್ ಅಘಾಡಿಯಲ್ಲಿ ಭಾರಿ ಬಿರುಕು

ಮುಂಬೈ:ಮಹಾರಾಷ್ಟ್ರದ ಶಿವಸೇನಾ-NCP-ಕಾಂಗ್ರೆಸ್ ಮೈತ್ರಿಕೂಟದ ಮಹಾ ವಿಕಾಸ್ ಆಘಾಡಿ ಸರ್ಕಾರದಲ್ಲಿ ಎಲ್ಲವು ಸರಿಯಾಗಿ ನಡೆದಿಲ್ಲ ಎಂಬ ಸೂಚನೆಗಳು ಇದೀಗ ಬರಲಾರಂಭಿಸಿವೆ. ಮೂಲಗಳು ನೀಡಿರುವ ವರದಿಯ ಪ್ರಕಾರ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ NRCಗೆ ಸಂಬಂಧಿಸಿದಂತೆ ಶಿವಸೇನಾ ಹಾಗೂ NCP ಪಕ್ಷಗಳ ನಡುವೆ ತಿಕ್ಕಾಟ ಆರಂಭವಾಗಿದೆ ಎನ್ನಲಾಗಿದೆ. ಈ ವೇಳೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ NRCಯನ್ನು ಬೆಂಬಲಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಸಿಎಂ ಉದ್ಧವ್ ಠಾಕ್ರೆ "ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ NRC ಎರಡೂ ಕೂಡ ಬೇರೆ ಬೇರೆ ವಿಷಯಗಳಾಗಿದ್ದು, NPR ಕೂಡ ಇವುಗಳಿಗಿಂತ ಭಿನ್ನವಾಗಿದೆ. ಹೀಗಾಗಿ CAA ಜಾರಿಗೊಂಡರೆ ಯಾರೂ ಚಿಂತಿಸುವ ಅಗತ್ಯವಿಲ್ಲ. NRC ಇದುವರೆಗೆ ಜಾರಿಗೊಂಡಿಲ್ಲ ಹಾಗೂ ಮಹಾರಾಷ್ಟ್ರದಲ್ಲಿ ಅದನ್ನು ಜಾರಿಗೊಳಿಸಲು ತಾವು ಬಿಡುವುದಿಲ್ಲ" ಎಂದಿದ್ದಾರೆ.

ಇದಕ್ಕೂ ಮುಂದುವರೆದು ಮಾತನಾಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ "ಒಂದು ವೇಳೆ NRC ಜಾರಿಗೊಂಡರೆ ಇದು ಹಿಂದೂ ಹಾಗೂ ಮುಸ್ಲಿಮರ ಜೊತೆಗೆ ಬುಡಕಟ್ಟು ಜನಾಂಗದ ಜನರ ಮೇಲೂ ಪ್ರಭಾವ ಬೀರಲಿದೆ. ಕೇಂದ್ರ ಸರ್ಕಾರ NRC ಕುರಿತು ಇದುವರೆಗೆ ಯಾವುದೇ ತೀರ್ಮಾನವಾಗಲಿ ಅಥವಾ ಚರ್ಚೆಯಾಗಲಿ ನಡೆಸಿಲ್ಲ. NPR ಕುರಿತು ಹೇಳುವುದಾದರೆ ಇದು ಜನಗಣತಿಯ ಭಾಗವಾಗಿದ್ದು, ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಈ ಪ್ರಕ್ರಿಯೆಯಿಂದ ಯಾವುದೇ ವ್ಯತ್ಯಾಸ ಬೀರುವುದಿಲ್ಲ ಎಂದು ನನಗೆ ಅನಿಸುತ್ತದೆ" ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಶಿವಸೇನೆಯ ಜೊತೆಗೆ ಅಧಿಕಾರದಲ್ಲಿರುವ NCP ಹಾಗೂ ಕಾಂಗ್ರೆಸ್ ಪಕ್ಷಗಳು ಈಗಾಗಲೇ CAA ಹಾಗೂ NCR ಜಾರಿಗೆ ತಮ್ಮ ವಿರೋಧ ವ್ಯಕ್ತಪಡಿಸಿವೆ.

ಭೀಮಾ ಕೊರೆಗಾಂವ್ ತನಿಖೆ ಕೇಂದ್ರಕ್ಕೆ ಹಸ್ತಾಂತರಿಸಿದ್ದಕ್ಕಾಗಿ NCP ಅಸಮಾಧಾನ ಹೊರಹಾಕಿದೆ
ಈ ಸಂದರ್ಭದಲ್ಲಿ ಭೀಮಾ-ಕೋರೆಗಾಂವ್ ತನಿಖೆಯ ಕುರಿತು ಮಾತನಾಡಿರುವ ಉದ್ಧವ್ ಠಾಕ್ರೆ, ಈ ಪ್ರಕರಣದ ತನಿಖೆಯನ್ನು ಇದುವರೆಗೆ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿಲ್ಲ. ಯಲಗಾರ್ ಪರಿಷತ್ ಹಾಗೂ ಭೀಮಾ ಕೊರೆಗಾಂವ್ ಎರಡು ಬೇರೆ ಬೇರೆ ಪ್ರಕರಣಗಳಾಗಿವೆ. ತಾವು ಕೇವಲ ಯಲಗಾರ್ ಪರಿಷತ್ ತನಿಖೆಯನ್ನು ಮಾತ್ರ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಭೀಮಾ-ಕೋರೆಗಾಂವ್ ತನಿಖೆಯನ್ನು ಹಸ್ತಾಂತರಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.