ಜಮ್ಮು ಪ್ರದೇಶದಲ್ಲಿ ಮತ್ತೆ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ

Updated: Aug 18, 2019 , 03:11 PM IST
ಜಮ್ಮು ಪ್ರದೇಶದಲ್ಲಿ ಮತ್ತೆ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ
Photo: ians

ನವದೆಹಲಿ: ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಶನಿವಾರ ಪುನರಾರಂಭಿಸಿದ 24 ಗಂಟೆಗಳ ನಂತರ ಮತ್ತೆ ಜಮ್ಮು ಪ್ರದೇಶದಲ್ಲಿ ಸ್ಥಗಿತಗೊಳಿಸಲಾಗಿದೆ. ಜಮ್ಮು, ಸಾಂಬಾ, ಕಥುವಾ, ಉಧಂಪುರ್ ಮತ್ತು ರಿಯಾಶಿ ಜಿಲ್ಲೆಗಳಲ್ಲಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

12 ದಿನಗಳ ಅಂತರದ ನಂತರ, ಈ ಪ್ರದೇಶದಲ್ಲಿ 2 ಜಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಶನಿವಾರ ಪುನರಾರಂಭಿಸಲಾಯಿತು. ಆದರೆ ಪುನಃಸ್ಥಾಪನೆಯಾದ ಕೆಲವೇ ದಿನಗಳಲ್ಲಿ, ರಾಜೌರಿ ಸಮೀಪದ ಪ್ರದೇಶಗಳಲ್ಲಿ ಕೆಲವು ಭಾರತ ವಿರೋಧಿ ಮೆಸೇಜ್ ಗಳನ್ನು ಪ್ರಸಾರ ಮಾಡುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತು. ಆದ್ದರಿಂದ, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಸೇವೆಯನ್ನು ಸ್ಥಗಿತಗೊಳಿಸಲಾಯಿತು.  

ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳುತ್ತಿಲ್ಲ. ಭದ್ರತಾ ಸಿಬ್ಬಂದಿಗಳು ಕಟ್ಟುನಿಟ್ಟಿನ ಜಾಗರೂಕತೆಯನ್ನು ಕಾಯ್ದುಕೊಳ್ಳುತ್ತಲೇ ಇದ್ದರೂ, ಕೆಲವು ಪ್ರದೇಶಗಳಲ್ಲಿ ಭಾಗಶಃ ಮತ್ತು ಸಂಪೂರ್ಣವಾಗಿ ನಿರ್ಬಂಧಗಳನ್ನು ಸರಾಗಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಈಗಿನಂತೆ, 35 ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಕಡಿಮೆ ವೇಗದ ಇಂಟರ್ನೆಟ್ ಕಾರ್ಯನಿರ್ವಹಿಸುತ್ತಿದ್ದರೆ, ಸೂಕ್ತ ಸಮಯದಲ್ಲಿ ಹೆಚ್ಚಿನ ವೇಗದ ಅಂತರ್ಜಾಲದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಶ್ರೀನಗರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮನೆ ವಿತರಣೆಯನ್ನು ಖಚಿತಪಡಿಸುವುದಾಗಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಈಗ ಮೂಲಗಳ ಪ್ರಕಾರ ರಾಜೌರಿ, ಪೂಂಚ್, ದೋಡಾ, ಕಿಶ್ತ್ವಾರ್, ರಾಂಬನ್ ಮತ್ತು ಕೆಲವು ಪಕ್ಕದ ಪ್ರದೇಶಗಳಲ್ಲಿ ಚಲನೆಗಳ ಮೇಲಿನ ನಿರ್ಬಂಧವನ್ನು ತೆಗೆದುಹಾಕಲಾಗಿದೆ.ಕಣಿವೆಯ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಸೋಮವಾರ ಮತ್ತೆ ತೆರೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮೂಲಗಳ ಪ್ರಕಾರ ಕಾಶ್ಮೀರ ಕಣಿವೆಯಲ್ಲಿನ ಸುಮಾರು 190 ಶಾಲೆಗಳು ಸೋಮವಾರ ಮತ್ತೆ ತೆರೆಯಲಿವೆ ಎನ್ನಲಾಗಿವೆ.