ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ!

ನನ್ನ ಹೇಳಿಕೆಗೆ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ. ನಾನು ಸತ್ಯ ಹೇಳಿದ್ದೇನೆ. ಅದಕ್ಕಾಗಿ ಬೇಕಿದ್ದರೆ ನಾನು ಸಾಯುತ್ತೇನೆ, ಆದರೆ ನಾನು ಕ್ಷಮೆಯಾಚಿಸುವುದಿಲ್ಲ- ರಾಹುಲ್ ಗಾಂಧಿ

Yashaswini V Yashaswini V | Updated: Dec 14, 2019 , 02:54 PM IST
ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ!

ನವದೆಹಲಿ: ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ (Congress) ಆಯೋಜಿಸಿದ್ದ 'ಭಾರತ್ ಬಚಾವೊ ರ್ಯಾಲಿ'ಯಲ್ಲಿ ಪಕ್ಷದ ಮುಖಂಡ ರಾಹುಲ್ ಗಾಂಧಿ(Rahul Gandhi) ತಮ್ಮ 'ರೇಪ್ ಕ್ಯಾಪಿಟಲ್' ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ನಾನು ಸಂಸತ್ತಿನಲ್ಲಿ ಹೇಳಿದ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಆದರೆ ಸತ್ಯ ಹೇಳಿದ್ದಕ್ಕೆ ನಾನು ಎಂದಿಗೂ ಕ್ಷಮೆ ಯಾಚಿಸುವುದಿಲ್ಲ. ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಮೇಲೆ ವಾಗ್ಧಾಳಿ ನಡೆಸಿದರು.

ಸಮಾವೇಶ ಉದ್ದೇಶಿಸಿ ಭಾಷಣ ಪ್ರಾರಂಭಿಸಿದ ರಾಹುಲ್ ಗಾಂಧಿ, 'ಮುಕುಲ್ ವಾಸ್ನಿಕ್ ನೀವು ಎಲ್ಲಿದ್ದೀರಿ? ಸಣ್ಣ ಮೈದಾನದಲ್ಲಿ ನೀವು ಎಷ್ಟು ಸಿಂಹಗಳನ್ನು ಹೇಗೆ ಸಂಗ್ರಹಿಸಿದ್ದೀರಿ. ನೋಡಿ, ಅವರು ಪ್ರೀತಿಯಿಂದ ಒಟ್ಟಿಗೆ ನಿಂತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಯಾರಿಗೂ ಹೆದರುವುದಿಲ್ಲ. ಒಂದು ಇಂಚು ಹಿಮ್ಮುಖವಾಗುವುದಿಲ್ಲ. ದೇಶಕ್ಕಾಗಿ ತಮ್ಮ ಪ್ರಾಣವನ್ನು ನೀಡಲು ಅವರು ಸಿದ್ಧರಾಗಿದ್ದಾರೆ' ಎಂದು ಹೇಳಿದರು.

'ರೇಪ್ ಕ್ಯಾಪಿಟಲ್' ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ನನ್ನ ಹೇಳಿಕೆಗೆ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ. ನಾನು ಸತ್ಯ ಹೇಳಿದ್ದೇನೆ. ಅದಕ್ಕಾಗಿ ಬೇಕಿದ್ದರೆ ನಾನು ಸಾಯುತ್ತೇನೆ, ಆದರೆ ನಾನು ಕ್ಷಮೆಯಾಚಿಸುವುದಿಲ್ಲ. ಯಾವುದೇ ಕಾಂಗ್ರೆಸ್ಸಿಗರೂ ಕ್ಷಮೆಯಾಚಿಸುವುದಿಲ್ಲ ಎಂದು ತೀಕ್ಷ್ಣ ಮಾತುಗಳ ಮೂಲಕ ರಾಹುಲ್ ಗಾಂಧಿ ಬಿಜೆಪಿಗೆ ತಿರುಗೇಟು ನೀಡಿದರು.

ದೇಶದ ಆತ್ಮವಾಗಿರುವ ಆರ್ಥಿಕತೆಯು ಇಂದು ಇಲ್ಲವಾಗಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ಹಿಂದೆ ಜಗತ್ತು ನಮ್ಮನ್ನು ನೋಡುತ್ತಿತ್ತು. ಭಾರತದಲ್ಲಿ ಏನು (ಆರ್ಥಿಕ ಪ್ರಗತಿ) ನಡೆಯುತ್ತಿದೆ? ವಿವಿಧ ಧರ್ಮಗಳು, ಜಾತಿಗಳು ಮತ್ತು ಸಿದ್ಧಾಂತಗಳನ್ನು ಹೊಂದಿರುವ ಈ ದೇಶವು ಶೇಕಡಾ 9ರಷ್ಟು ಜಿಡಿಪಿಯಲ್ಲಿ ಹೇಗೆ ಮುಂದೆ ಹೋಗುತ್ತಿದೆ? ಎಂಬ ಬಗ್ಗೆ ಚರ್ಚೆ ಮಾಡುತ್ತಿತ್ತು.‌ ಭಾರತ ಮತ್ತು ಚೀನಾವು ವಿಶ್ವದ ಭವಿಷ್ಯ. ಆದರೆ ಈಗ ಏನು ನಡೆಯುತ್ತಿದೆ ನೋಡಿ. ಈರುಳ್ಳಿ ಕೊಳ್ಳುವುದೇ ಕಷ್ಟವಾಗಿದೆ. ಇಂದು ಈರುಳ್ಳಿ ಪ್ರತಿ ಕೆ.ಜಿ.ಗೆ 200 ರೂಪಾಯಿ ಆಗಿದೆ. ಪ್ರಧಾನಿ ಮೋದಿ ದೇಶದ ಆರ್ಥಿಕತೆಯನ್ನು ನಾಶಪಡಿಸಿದರು. ಅವರು (ಪಿಎಂ ನರೇಂದ್ರ ಮೋದಿ) ರಾತ್ರಿ 8 ಗಂಟೆಗೆ ಟಿವಿಯಲ್ಲಿ ಬಂದು, ನಾನು 500 ಮತ್ತು 1000 ರೂಪಾಯಿಗಳ ನೋಟು ರದ್ದುಗೊಳಿಸಲಿದ್ದೇನೆ ಎಂದು ಹೇಳಿದ್ದರು. ಡೆಮೋನಿಟೈಸೇಶನ್ ಅನ್ನು ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಂದು ಕರೆಯಲಾಯಿತು. ಆದರೆ ಇದು ದೇಶದ ಅರ್ಥಿಕತೆಗೆ ದೊಡ್ಡ ಪೆಟ್ಟು. ಪೋಷಕರು ಮತ್ತು ಯುವಕರ ಮನೆ ಮತ್ತು ಜೇಬಿನಿಂದ ಹಣವನ್ನು ಹಿಂತೆಗೆದುಕೊಂಡು ಅದಾನಿ ಮತ್ತು ಅನಿಲ್ ಅಂಬಾನಿಗೆ ಲಕ್ಷ ಕೋಟಿ ರೂಪಾಯಿಗಳನ್ನು ಹಸ್ತಾಂತರಿಸಿದರು. ಅದರ ನಂತರ ಗಬ್ಬರ್ ಸಿಂಗ್ ತೆರಿಗೆಯನ್ನು ತರಲಾಯಿತು ಎಂದು ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈಗ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ಈ ಹಿಂದೆ ದೇಶದಲ್ಲಿ ಜಿಡಿಪಿ ಬೆಳವಣಿಗೆಯ ದರವು ಶೇಕಡಾ 9 ರಷ್ಟಿತ್ತು. ಈಗ 4ಕ್ಕೆ ಇಳಿದಿದೆ‌. ಇದೇ ರೀತಿಯಲ್ಲಿ ಸಾಗಿದರೆ ಜಿಡಿಪಿ ಶೇಕಡಾ 2.5ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಹೇಳಿದರು.