)
ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ನಾರಾಯಣ್ ದತ್ ತಿವಾರಿ ಅವರು 93ನೇ ವಯಸ್ಸಿನಲ್ಲಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರು ಎರಡು ರಾಜ್ಯಗಳ ಮುಖ್ಯಮಂತ್ರಿಯಾಗಿದ್ದ ದೇಶದ ಏಕೈಕ ರಾಜಕಾರಣಿ.
ಎನ್.ಡಿ. ತಿವಾರಿ ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 1976-77, 1984-85, 1988-89 ರವರೆಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ತಿವಾರಿ 2002 ರಿಂದ 2007 ರವರೆಗೆ ಉತ್ತರಾಖಂಡದ ಸಿಎಂ ಆಗಿದ್ದರು. ರಾಜೀವ್ ಗಾಂಧಿಯವರ ಸಂಪುಟದಲ್ಲಿ ವಿದೇಶಾಂಗ ಸಚಿವರೂ ಆಗಿದ್ದರು. ಎನ್ಡಿ ತಿವಾರಿ 2007 ರಿಂದ 2009 ರವರೆಗೆ ಆಂಧ್ರಪ್ರದೇಶದ ರಾಜ್ಯಪಾಲರೂ ಆಗಿದ್ದರು. ಆದರೆ, ಹಗರಣದ ನಂತರ, ಅವರು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.
ಎನ್ ಡಿ ತಿವಾರಿ 18 ಅಕ್ಟೋಬರ್ 1925 ರಂದು ನೈನಿತಾಲ್ನ ಬಲೋಟಿ ಗ್ರಾಮದಲ್ಲಿ ಜನಿಸಿದ್ದು, ತಮ್ಮ ಆರಂಭಿಕ ಅಧ್ಯಯನದ ನಂತರ, ಅವರು ಅಲಹಾಬಾದ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅಲ್ಲಿಂದ ಅವರು ರಾಜ್ಯಶಾಸ್ತ್ರದಲ್ಲಿ ಎಂಎ ಮತ್ತು ನಂತರ ಎಲ್ಎಲ್ಬಿ ಪದವಿ ಪಡೆದರು. ಅವರು 1947 ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು 1947 ರಿಂದ 1949 ರವರೆಗೆ ಅಖಿಲ ಭಾರತ ವಿದ್ಯಾರ್ಥಿ ಕಾಂಗ್ರೆಸ್ನ ಕಾರ್ಯದರ್ಶಿಯಾಗಿದ್ದರು.
1952 ರಲ್ಲಿ ಮೊದಲ ಬಾರಿಗೆ ಶಾಸಕ:
1952 ರಲ್ಲಿ ಮೊದಲ ಬಾರಿಗೆ ಎನ್.ಡಿ. ತಿವಾರಿ ನೈನಿತಾಲ್ನಿಂದ ಶಾಸಕರಾದರು. ಅವರು ಪ್ರಜಾ ಸಮಾಜವಾದಿ ಪಕ್ಷದ ಟಿಕೆಟ್ನಲ್ಲಿ ಚುನಾವಣೆಯಲ್ಲಿ ಗೆದ್ದರು. 1957 ರಲ್ಲಿ, ಅವರು ಮತ್ತೊಮ್ಮೆ ನೈನಿತಾಲ್ನಿಂದ ಚುನಾವಣೆಯಲ್ಲಿ ಗೆದ್ದು, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದರು. ೧೯೬೩ ರಲ್ಲಿ ಅವರು ಕಾಂಗ್ರೆಸ್ ಸೇರಿ, ೧೯೬೫ ರಲ್ಲಿ ಕಾಶಿಪುರದಿಂದ ಶಾಸಕರಾದರು.
೧೯೯೪ ರಲ್ಲಿ ಅವರು ಕಾಂಗ್ರೆಸ್ ತೊರೆದು ಹೊಸ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್ ಅವರೊಂದಿಗೆ ಕಾಂಗ್ರೆಸ್ (ತಿವಾರಿ) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು. ಆದರೆ, ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದಾಗ, ಅವರು ಕಾಂಗ್ರೆಸ್ಗೆ ಮರಳಿದರು.