Indus Waters Treaty: ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದರಲ್ಲಿ ಭಾರತವು ಪಾಕಿಸ್ತಾನದೊಡನೆ 1960ರಲ್ಲಿ ಕೈಗೊಂಡ ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದವನ್ನು (IWT) ತಕ್ಷಣವೇ ಅಮಾನತಿನಲ್ಲಿಡುವ ನಿರ್ಧಾರ ಕೈಗೊಂಡಿತು. ಈ ನಿರ್ಧಾರವನ್ನು ಎಪ್ರಿಲ್ 24, 2025ರಂದು ಭಾರತದ ಜಲ ಸಂಪನ್ಮೂಲ ಕಾರ್ಯದರ್ಶಿಗಳಾದ ದೇಬಶ್ರೀ ಮುಖರ್ಜಿ ಅವರು ಘೋಷಿಸಿದರು. ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದನಾ ದಾಳಿ ನಡೆದು, 26 ಸಾರ್ವಜನಿಕರು ಪ್ರಾಣ ಕಳೆದುಕೊಂಡ ಬಳಿಕ, ಭಾರತ ಈ ನಿರ್ಧಾರ ಕೈಗೊಂಡಿದೆ. ಭಾರತದ ಈ ನಿರ್ಧಾರವನ್ನು 'ಯುದ್ಧದ ಕ್ರಮ' ಎಂದು ಪಾಕಿಸ್ತಾನ ಆರೋಪಿಸಿದ್ದು, 1972ರ ಶಿಮ್ಲಾ ಒಪ್ಪಂದವನ್ನು ಪಾಕಿಸ್ತಾನ ರದ್ದುಗೊಳಿಸಿತು. ಇದರ ಪರಿಣಾಮವಾಗಿ ಪರಮಾಣು ಶಕ್ತಿಗಳಾದ ಎರಡು ದೇಶಗಳ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಏನು ಈ ಸಿಂಧೂ ನದಿ ಹಂಚಿಕೆ ಒಪ್ಪಂದ?
1960ರಲ್ಲಿ ಭಾರತದ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರ ನಡುವೆ ವಿಶ್ವಬ್ಯಾಂಕಿನ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದ ಜಗತ್ತಿನ ಅತ್ಯಂತ ಯಶಸ್ವಿ ನೀರು ಹಂಚಿಕೆಯ ಒಪ್ಪಂದ ಎಂದು ಪರಿಗಣಿತವಾಗಿದೆ. ಈ ಒಪ್ಪಂದ ಭಾರತದಲ್ಲಿ ಉಗಮವಾಗಿ ಪಾಕಿಸ್ತಾನದತ್ತ ಹರಿಯುವ ನದಿಗಳನ್ನು ನಿರ್ವಹಿಸುವ ವ್ಯವಸ್ಥೆಯಾಗಿತ್ತು. ಈ ನದಿಗಳು ಉಭಯ ದೇಶಗಳ ಕೃಷಿ ಮತ್ತು ಜೀವನೋಪಾಯಕ್ಕೆ ಅನಿವಾರ್ಯವಾಗಿದೆ.
ಒಪ್ಪಂದದ ವಿನ್ಯಾಸ
ಭಾರತ ಪೂರ್ವದ ಮೂರು ನದಿಗಳಾದ ರಾವಿ, ಬಿಯಾಸ್, ಮತ್ತು ಸಟ್ಲೆಜ್ ಮೇಲೆ ಅಧಿಕಾರ ಹೊಂದಿದೆ. ಪಾಕಿಸ್ತಾನ ಪಶ್ಚಿಮದ ನದಿಗಳಾದ ಸಿಂಧೂ, ಝೇಲಮ್ ಮತ್ತು ಚೆನಾಬ್ ಮೇಲೆ ಅಧಿಕಾರ ಹೊಂದಿದ್ದು, ಈ ನದಿ ವ್ಯವಸ್ಥೆಯ ಒಟ್ಟು 80% ನೀರಿನ ಪ್ರಮಾಣ ಪಾಕಿಸ್ತಾನದ ಪಾಲಿಗೆ ಲಭಿಸುತ್ತದೆ. ಈ ಒಪ್ಪಂದದ ಪ್ರಕಾರ, ಭಾರತ ಪಶ್ಚಿಮದ ನದಿಗಳನ್ನು ನೀರಾವರಿ, ಆಂತರಿಕ ಬಳಕೆ ಮತ್ತು ಜಲ ವಿದ್ಯುತ್ ಉತ್ಪಾದನಾ ಉದ್ದೇಶಗಳಿಗೆ ಬಳಸಬಹುದಾದರೂ, ನದಿಗಳ ಹರಿವನ್ನು ಹೆಚ್ಚಾಗಿ ಬದಲಾಯಿಸುವಂತಿಲ್ಲ. ಈ ಒಪ್ಪಂದದ ಅನುಸಾರವಾಗಿ ಶಾಶ್ವತ ಸಿಂಧೂ ಆಯೋಗವನ್ನು ಸ್ಥಾಪಿಸಿ, ವಿವಾದಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ಅದಕ್ಕೆ ವಹಿಸಲಾಯಿತು. ಹೆಚ್ಚುವರಿ ವಿವಾದಗಳನ್ನು ತಟಸ್ಥ ತಜ್ಞರು ಅಥವಾ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯ ಮೂಲಕ ಪರಿಹರಿಸುವ ಅವಕಾಶವನ್ನು ಇದು ಹೊಂದಿತ್ತು.
ಭಾರತ ಯಾಕೆ ಒಪ್ಪಂದವನ್ನು ರದ್ದುಪಡಿಸಿತು?
ಭಾರತವು ಪಾಕಿಸ್ತಾನಕ್ಕೆ ಬರೆದಿರುವ ಪತ್ರದಲ್ಲಿ, ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಹಲವಾರು ವಿಚಾರಗಳು ಬದಲಾಗಿವೆ ಎಂದಿದೆ. ಬದಲಾದ ಅಂಶಗಳಲ್ಲಿ ಹೆಚ್ಚಾದ ಜನಸಂಖ್ಯೆ, ಶುದ್ಧ ವಿದ್ಯುತ್ ಶಕ್ತಿಗೆ ಹೆಚ್ಚಿನ ಬೇಡಿಕೆ ಮತ್ತು ಗಡಿಯಾದ್ಯಂತ ಭಯೋತ್ಪಾದನೆಗೆ ಪಾಕಿಸ್ತಾನ ನಿರಂತರ ಬೆಂಬಲ ನೀಡುವುದು ಸೇರಿವೆ. ಈ ಪ್ರಮುಖ ಬದಲಾವಣೆಗಳ ಕಾರಣ ಭಾರತ ಈ ಒಪ್ಪಂದದ ಬದಲಾವಣೆಯ ಸಮಯ ಬಂದಿದೆ ಎಂದಿದೆ. 2023ರಲ್ಲಿ ಭಾರತ ಪಾಕಿಸ್ತಾನಕ್ಕೆ ನದಿ ಹಂಚಿಕೆ ಒಪ್ಪಂದದ ಆರ್ಟಿಕಲ್ XII(3)ರ ಅಡಿಯಲ್ಲಿ ಒಪ್ಪಂದದಲ್ಲಿ ಬದಲಾವಣೆಗಳನ್ನು ತರುವ ಅಗತ್ಯವಿದೆ ಎಂದು ಪತ್ರ ಬರೆದಿತ್ತು. ಭಾರತ ಅದೇ ಮೊದಲ ಬಾರಿಗೆ ಒಪ್ಪಂದದಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂದು ತಿಳಿಸಿತ್ತು. ಭಾರತ ಹಲವು ಬಾರಿ ಮನವಿ ಮಾಡಿಕೊಂಡರೂ, ಪಾಕಿಸ್ತಾನ ಭಾರತಕ್ಕೆ ರಚನಾತ್ಮಕವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಭಾರತ ತನ್ನ ಹೇಳಿಕೆಯಲ್ಲಿ ಒಪ್ಪಂದವನ್ನು 'ಸ್ಥಗಿತ'ಗೊಳಿಸುವುದಾಗಿ ಹೇಳಿದ್ದು ಸೂಕ್ತ ಪದವಾಗಿದೆ. ಭಾರತ ಬಳಸಿರುವ 'abeyance' ಪದ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಗುರುತಿಸಿಲ್ಲವಾದರೂ, ಭಾರತದ ಹೇಳಿಕೆಯ ಪ್ರಕಾರ ಒಪ್ಪಂದವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ. ಅಂದರೆ ಇದು ಒಪ್ಪಂದದ ಸಂಪೂರ್ಣ ರದ್ದತಿಯಲ್ಲ. ಈ ಒಪ್ಪಂದದ ಮೂಲಕ ವಿಶ್ವಬ್ಯಾಂಕ್ ಏನು ಮಾಡಲು ಪ್ರಯತ್ನಿಸಿತ್ತು? ಇದನ್ನು ನಾವು ನಿಖರವಾಗಿ ತಿಳಿಯಲು ಪ್ರಯತ್ನ ನಡೆಸೋಣ.
ನೀರಾವರಿ ಯೋಜನೆಗಳಲ್ಲಿ ಹಿಂದಿನ ವಿವಾದಗಳು
ಜಮ್ಮು-ಕಾಶ್ಮೀರದಲ್ಲಿ ಭಾರತದ ಕಿಶನ್‌ಗಂಗಾ ಮತ್ತು ರ್‍ಯಾಟಲ್ ಜಲ ವಿದ್ಯುತ್ ಯೋಜನೆಗಳು ದೀರ್ಘ ಕಾಲದಿಂದ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ವಿವಾದದ ವಿಚಾರವಾಗಿದೆ. ಈ ಯೋಜನೆಗಳು ಪಾಕಿಸ್ತಾನದ ಬಳಕೆಗೆ ಸಿಗಬೇಕಾದ ನೀರಿನ ಮೇಲೆ ಭಾರತಕ್ಕೆ ಹೆಚ್ಚಿನ ನಿಯಂತ್ರಣ ಒದಗಿಸುತ್ತದೆ ಎನ್ನುವುದು ಪಾಕಿಸ್ತಾನದ ವಾದವಾಗಿದೆ. ಆದರೆ ಈ ಯೋಜನೆಗಳು ಸಿಂಧೂ ನದಿ ಹಂಚಿಕೆ ಒಪ್ಪಂದಕ್ಕೆ ಅನುಗುಣವಾಗಿವೆ ಎಂದು ಭಾರತ ವಾದಿಸುತ್ತದೆ. 2013ರಲ್ಲಿ ಮಧ್ಯಸ್ಥಿಕೆಯ ಶಾಶ್ವತ ನ್ಯಾಯಾಲಯ ಭಾರತಕ್ಕೆ ಕಿಶನ್‌ಗಂಗಾ ಯೋಜನೆಯನ್ನು ಮುಂದುವರಿಸಲು ಅನುಮತಿ ನೀಡಿ, ಆದರೆ ಅಣೆಕಟ್ಟು ಕನಿಷ್ಟ ಸಂಗ್ರಹಣಾ ಮಟ್ಟಕ್ಕೆ ತಲುಪಿದರೂ ಭಾರತ 'ಡ್ರಾಡೌನ್ ಫ್ಲಶಿಂಗ್' ವಿಧಾನವನ್ನು (ಜಲಾಶಯದ ತಳಭಾಗದಿಂದ ನೀರನ್ನು ಬಿಡುಗಡೆಗೊಳಿಸಿ, ಹೂಳು ತೆಗೆಯುವ ವ್ಯವಸ್ಥೆ) ಅನುಸರಿಸುವಂತಿಲ್ಲವೆಂದು ತೀರ್ಪು ನೀಡಿತು.
ಬಳಿಕ ಪಾಕಿಸ್ತಾನವು ರ್‍ಯಾಟಲ್ ಯೋಜನೆಗೆ ಸಂಬಂಧಿಸಿದಂತೆಯೂ ಇದೇ ಕಳವಳಗಳನ್ನು ವ್ಯಕ್ತಪಡಿಸಿ, ಒಪ್ಪಂದದ ಅಧಿಕೃತ ಪಾಲುದಾರನಾದ ವಿಶ್ವಬ್ಯಾಂಕ್ ಅನ್ನು ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿತು. ವಿಶ್ವಬ್ಯಾಂಕ್ ಉಭಯ ದೇಶಗಳಿಗೂ ತಟಸ್ಥ ತಜ್ಞರನ್ನು (ಒಪ್ಪಂದದ ವಿವಾದ ಪರಿಹಾರದ ಎರಡನೇ ಹಂತದ ಅನುಸಾರ) ನೇಮಿಸಿ, ನೆರವಾಗಲು ಪ್ರಯತ್ನಿಸಿತು. ಆದರೆ ಎರಡು ವಿಧಾನಗಳು ಏಕಕಾಲದಲ್ಲಿ ಜಾರಿಗೆ ಬರಲು ಸಾಧ್ಯವಿಲ್ಲವೆಂದು ಭಾರತ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಮೂಲ ಒಪ್ಪಂದದ ಪ್ರಕಾರ, ಮೊದಲ ಹಂತವಾಗಿ ಸಿಂಧೂ ಆಯೋಗದ ಮೂಲಕ ಮಾತುಕತೆ, ಎರಡನೇ ಹಂತದಲ್ಲಿ ತಟಸ್ಥ ತಜ್ಞರ ನೇಮಕ ಮತ್ತು ಬಳಿಕವಷ್ಟೇ ಮಧ್ಯಸ್ಥಿಕೆ ನಡೆಸಬೇಕಿತ್ತು. ಆದ್ದರಿಂದ ಈ ಹಂತಗಳನ್ನು ಬಿಟ್ಟು ಮುಂದುವರಿಯುವುದು ತಪ್ಪು ಎನ್ನುವುದು ಭಾರತದ ಸ್ಪಷ್ಟ ಅಭಿಪ್ರಾಯವಾಗಿತ್ತು. ಈ ಕಾರಣಕ್ಕಾಗಿ ಭಾರತ ಮಧ್ಯಸ್ಥಿಕೆಯ ಪ್ರಕ್ರಿಯೆಗೆ ಒಳಪಡದಿರಲು ನಿರ್ಧರಿಸಿ ಈ ನಡೆಯನ್ನು ವಿರೋಧಿಸಿತು.
ಒಪ್ಪಂದವನ್ನು ಏಕಪಕ್ಷೀಯವಾಗಿ ಅಮಾನತುಗೊಳಿಸಬಹುದೇ?
ತಾಂತ್ರಿಕವಾಗಿ ಸಿಂಧೂ ನದಿ ಹಂಚಿಕೆ ಒಪ್ಪಂದವನ್ನು ಒಂದೇ ದೇಶ ಬದಲಿಸಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ. ಆರ್ಟಿಕಲ್ XII ಯಾವುದೇ ಬದಲಾವಣೆಯನ್ನು ಪರಸ್ಪರ ಒಪ್ಪಿಗೆಯ ಮೂಲಕವೇ ಜಾರಿಗೆ ತರಬೇಕು ಎನ್ನುತ್ತದೆ. ಆದರೆ ಅಂತಾರಾಷ್ಟ್ರೀಯ ಕಾನೂನು, ಅದರಲ್ಲೂ ಒಪ್ಪಂದಗಳ ಕಾನೂನಿನ ಕುರಿತಂತೆ ವಿಯೆನ್ನಾ ಸಮಾವೇಶದ ಆರ್ಟಿಕಲ್ 62ರ ಪ್ರಕಾರ, ಸಂದರ್ಭಗಳಲ್ಲಿ ಏನಾದರೂ ಮಹತ್ವದ ಬದಲಾವಣೆ ಕಂಡುಬಂದರೆ, ಆಗ ಒಪ್ಪಂದವನ್ನು ರದ್ದುಗೊಳಿಸಲು ಸಾಧ್ಯವಾಗುತ್ತದೆ. ಭಾರತ ವಿಯೆನ್ನಾ ಕನ್ವೆನ್ಷನ್ ಅನ್ನು ಅನುಮೋದಿಸದಿದ್ದರೂ, ಇದು ಜಾಗತಿಕವಾಗಿ ಒಪ್ಪಿತವಾದ ನಿಯಮವೂ ಹೌದು. ಆದರೆ ಸಂದರ್ಭಗಳಲ್ಲಿ 'ಮೂಲಭೂತ ಬದಲಾವಣೆಗಳಾಗಿವೆ ಎಂದು ಸಾಬೀತುಪಡಿಸುವುದು ಕಷ್ಟಕರವೆಂದು ಹಿಂದಿನ ಪ್ರಕರಣಗಳು ತೋರಿಸಿವೆ. ಉದಾಹರಣೆಗೆ ರಾಜಕೀಯ ಮತ್ತು ಹವಾಮಾನ ಬದಲಾವಣೆಗಳು ಒಪ್ಪಂದದ ಮೂಲ ಉದ್ದೇಶಕ್ಕೆ ಧಕ್ಕೆ ಉಂಟು ಮಾಡದಿದ್ದರೆ, ಅದನ್ನು ಕಾರಣವನ್ನಾಗಿ ನೀಡಲು ಸಾಧ್ಯವಿಲ್ಲವೆಂದು ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿತ್ತು. ಭಾರತದ ನಡೆ ಬಹುಮಟ್ಟಿಗೆ ಒಂದು ರಾಜತಾಂತ್ರಿಕ ಸಂದೇಶವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಪೂರ್ಣ ಕಾನೂನು ಕ್ರಮದ ಬದಲಿಗೆ ಪಾಕಿಸ್ತಾನದ ಮೇಲೆ ಒತ್ತಡ ತಂತ್ರ ಎನ್ನಲಾಗಿದೆ.
ಪಾಕಿಸ್ತಾನದ ಮೇಲಿನ ಪರಿಣಾಮಗಳೇನು?
ಭಾರತ ಸಿಂಧೂ ನದಿ ವ್ಯವಸ್ಥೆಯ ಮೇಲೆ ಅಪಾರ ಅವಲಂಬನೆ ಹೊಂದಿದೆ. ಪಾಕಿಸ್ತಾನದ 80%ಕ್ಕೂ ಹೆಚ್ಚಿನ ಕೃಷಿ ಮತ್ತು ಮೂರನೇ ಒಂದರಷ್ಟು ಜಲ ವಿದ್ಯುತ್ ವ್ಯವಸ್ಥೆ ಪಶ್ಚಿಮದ ನದಿಗಳ ನೀರಿನ ಮೇಲೆ ಅವಲಂಬಿತವಾಗಿದೆ. ಭಾರತದ ಬಳಿ ಇಷ್ಟೊಂದು ಭಾರೀ ಪ್ರಮಾಣದ ನೀರನ್ನು ಸಂಗ್ರಹಿಸಲು ವ್ಯವಸ್ಥೆಗಳಿಲ್ಲದಿದ್ದರೂ, ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಭಾರತ ನೀರಿನ ಹರಿವನ್ನು ನಿಯಂತ್ರಿಸಿ, ಪಾಕಿಸ್ತಾನಕ್ಕೆ ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಭಾರತ ತನ್ನ ಜಲ ವಿದ್ಯುತ್ ಯೋಜನೆಗಳ ವಿನ್ಯಾಸವನ್ನು ಬದಲಿಸಲು ಅಥವಾ ಸಂಗ್ರಹಿಸಿದ ನೀರನ್ನು ಇದ್ದಕ್ಕಿದ್ದಂತೆ ಬಿಡುಗಡೆಗೊಳಿಸುವ ಡ್ರಾಡೌನ್ ಫ್ಲಶಿಂಗ್‌ನಂತಹ ವಿಧಾನಗಳನ್ನು ಅನುಸರಿಸಬಹುದು. ಹಾಗಾದರೆ ಯಾವುದೇ ಮುನ್ನೆಚ್ಚರಿಕೆ ನೀಡದೆ ನೀರು ಬಿಡುಗಡೆಗೊಳಿಸುವುದರಿಂದ ಪಾಕಿಸ್ತಾನಕ್ಕೆ ಹಾನಿಯಾದೀತು.
ಈ ಕಾರ್ಯತಂತ್ರ ಮಿಲಿಟರಿ ಕ್ರಮ ಅಲ್ಲದಿದ್ದರೂ, ಭಾರತ ಕೈಗೊಳ್ಳಬಹುದಾದ ಅತ್ಯಂತ ಕಠಿಣ ಮಿಲಿಟರೇತರ ಕ್ರಮಗಳಲ್ಲಿ ಒಂದಾಗಿದೆ. ಆದರೆ ಭಯೋತ್ಪಾದನೆಯ ಕುರಿತು ಭಾರತದ ಕಳವಳಗಳನ್ನು ನಿವಾರಿಸಲು ಪಾಕಿಸ್ತಾನ ಪ್ರಾಮಾಣಿಕವಾಗಿ ಪ್ರಯತ್ನ ನಡೆಸದಿದ್ದರೆ, ಭಾರತದ ಕ್ರಮಗಳಿಗೆ ಅಂತಾರಾಷ್ಟ್ರೀಯ ವಿರೋಧವೂ ಹೆಚ್ಚೇನೂ ವ್ಯಕ್ತವಾಗುವ ಸಾಧ್ಯತೆಗಳಿಲ್ಲ. ದಶಕಗಳ ಕಾಲ ಯುದ್ಧಗಳ ನಡುವೆಯೂ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಶಾಂತಿಯುತ ಸಹಕಾರದ ಸಂಕೇತವಾಗಿ ಚಾಲ್ತಿಯಲ್ಲಿತ್ತು. ಆದರೆ ಹಲವಾರು ವರ್ಷಗಳ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ನೀರು, ಭಯೋತ್ಪಾದನಾ ವಿಚಾರಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ವೈಫಲ್ಯದಿಂದ ಭಾರತ ಈ ಒಪ್ಪಂದದಿಂದ ಹೊರ ನಡೆದಿರುವುದು ತೀಕ್ಷ್ಣವಾದ ನಡೆಯಾಗಿದೆ. ಪೂರ್ಣ ಪ್ರಮಾಣದಲ್ಲಿ ಭಾರತ ಒಪ್ಪಂದವನ್ನು ರದ್ದುಗೊಳಿಸದಿದ್ದರೂ, ಈ 'ಅಮಾನತು' ನವದೆಹಲಿ ನೀರಿನ ಹಂಚಿಕೆ ಸೇರಿದಂತೆ ತನ್ನ ಹಿತರಕ್ಷಣೆಗೆ ತಾನು ಎಲ್ಲಾ ರಾಜತಾಂತ್ರಿಕ ನಡೆಗಳನ್ನು ಅನುಸರಿಸಲು ಸಿದ್ಧವಾಗಿದ್ದೇನೆಂಬ ಸಂದೇಶ ರವಾನಿಸಿದೆ. ಇದರ ಪರಿಣಾಮವಾಗಿ ಇನ್ನಷ್ಟು ಮಾತುಕತೆಗಳು ನಡೆಯುತ್ತವೆಯೋ ಅಥವಾ ಚಕಮಕಿ ನಡೆಯುತ್ತದೋ ಎನ್ನುವುದು ಇಸ್ಲಾಮಾಬಾದಿನ ಮುಂದಿನ ನಡೆಯನ್ನು ಅನುಸರಿಸಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್ ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









