ಜುಲೈನಲ್ಲಿ 272 ಬಾರಿ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ; ಸುಂದರ್ಬಾನಿಯಲ್ಲಿ ಮತ್ತೆ ಗುಂಡಿನ ಚಕಮಕಿ
ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಸೇನೆಯೂ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಿದೆ.
ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಸುಂದರ್‌ಬಾನಿ ಸೆಕ್ಟರ್‌ನಲ್ಲಿರುವ ಪ್ರದೇಶ ಮತ್ತು ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಬುಧವಾರ ತಡರಾತ್ರಿ 10: 15 ರಿಂದ ಪಾಕಿಸ್ತಾನದ ಸೇನೆ ಈ ದಾಳಿ ಆರಂಭಿಸಿದ್ದು, ಗುರುವಾರ ಬೆಳಿಗ್ಗೆಯೂ ಈ ದಾಳಿ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.
ಅದೇ ಸಮಯದಲ್ಲಿ, ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಭಾರತದ ಸೇನಾಪಡೆ ದಾಳಿ ನಡೆಸಿದ್ದು, ಸೂಕ್ತ ಉತ್ತರ ನೀಡುತ್ತಿದೆ. ಪಾಕ್ ಗುಂಡಿನ ದಾಳಿಗೆ ಭಾರತೀಯ ಸೇನೆಯೂ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 4 ರಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿತ್ತು. ಕರೆನ್ ವಲಯದಲ್ಲಿ ಪಾಕಿಸ್ತಾನದ ಗುಂಡಿನ ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಪಾಕಿಸ್ತಾನದ ಬಿಎಟಿ (ಬಾರ್ಡರ್ ಆಕ್ಷನ್ ತಂಡ) ದ 5 ರಿಂದ 7 ಸೈನಿಕರನ್ನು ಮಣಿಸಿತ್ತು. ಆ ಸಮಯದಲ್ಲಿ, ಕರೆನ್ ವಲಯದಲ್ಲಿ ಪಾಕಿಸ್ತಾನಿ ಬ್ಯಾಟ್ ತಂಡಕ್ಕೆ ನುಸುಳಲು ಮಾಡಿದ ಪ್ರಯತ್ನವನ್ನು ಭಾರತೀಯ ಸೇನೆಯು ವಿಫಲಗೊಳಿಸಿತ್ತು.
ಭಾರತೀಯ ಸೇನೆಯು ಕೈಗೊಂಡ ಕ್ರಮದಲ್ಲಿ ಪಾಕಿಸ್ತಾನದ ಅನೇಕ ಮಿಲಿಟರಿ ಪೋಸ್ಟ್‌ಗಳು ಸಹ ನಾಶವಾದವು. ಪಾಕಿಸ್ತಾನ ಸೇನೆಯು ಅಪ್ರಚೋದಿತ ದಾಳಿ ಮೂಲಕ ನಿರಂತರವಾಗಿ ಭಾರತದ ಒಳನುಸುಳಲು ಪ್ರಯತ್ನಿಸುತ್ತಿದೆ. ಗಮನಾರ್ಹವಾಗಿ, ಜುಲೈ ತಿಂಗಳಲ್ಲಿ ಪಾಕಿಸ್ತಾನದಿಂದ ಒಟ್ಟು 272 ಕದನ ವಿರಾಮ ಉಲ್ಲಂಘನೆಗಳು ನಡೆದಿವೆ. ಈ ವರ್ಷ ಪಾಕಿಸ್ತಾನದಿಂದ ಒಟ್ಟು 1,593 ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದೆ.