ಮಮತಾ ಬ್ಯಾನರ್ಜಿಯನ್ನು ಪ್ರಧಾನಿ ಮೋದಿ, ಅಮಿತ್ ಶಾ ಟಾರ್ಗೆಟ್ ಮಾಡಿದ್ದಾರೆ: ಮಾಯಾವತಿ

ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಇತರ ನಾಯಕರು ಉದ್ದೇಶಪೂರ್ವಕವಾಗಿ ಮಮತಾ ಬ್ಯಾನರ್ಜಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ.

Updated: May 16, 2019 , 12:19 PM IST
ಮಮತಾ ಬ್ಯಾನರ್ಜಿಯನ್ನು ಪ್ರಧಾನಿ ಮೋದಿ, ಅಮಿತ್ ಶಾ ಟಾರ್ಗೆಟ್ ಮಾಡಿದ್ದಾರೆ: ಮಾಯಾವತಿ

ಲಕ್ನೋ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರವಾಗಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಬ್ಯಾಟಿಂಗ್ ಮಾಡಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಸ್ಥಿತಿ ಹಾಗೂ ಹಿಂಸಾಚಾರದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ, ಗುರುವಾರ ರಾತ್ರಿ 10ರಿಂದ ಬಹಿರಂಗ ಪ್ರಚಾರಕ್ಕೆ ನಿಷೇಧ ಹೇರಿದ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿಯನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ.

"ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಇತರ ನಾಯಕರು ಉದ್ದೇಶಪೂರ್ವಕವಾಗಿ ಮಮತಾ ಬ್ಯಾನರ್ಜಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ಅತ್ಯಂತ ಅಪಾಯಕಾರಿ ಮತ್ತು ಅನ್ಯಾಯದ ಬೆಳವಣಿಗೆ. ಅಲ್ಲದೆ, ಈ ನಡೆ ದೇಶದ ಪ್ರಧಾನಿಗೆ ಒಪ್ಪುವುದಿಲ್ಲ" ಎಂದು ಮಾಯಾವತಿ ಗುರುವಾರ ಹೇಳಿದ್ದಾರೆ.

"ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ಬಹಿರಂಗ ಪ್ರಚಾರವನ್ನು ಇಂದು ರಾತ್ರಿ 10 ಗಂಟೆಯಿಂದ ನಿಷೇಧಿಸಿದ್ದಾರೆ. ಏಕೆಂದರೆ ಇಂದು ಬೆಳಿಗ್ಗೆಯಿಂದ ಪ್ರಧಾನಿ ಮೋದಿ 2 ಸಮಾವೇಶಗಳನ್ನು ನಡೆಸಲಿದ್ದಾರೆ. ಪಶಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಬಹಿರಂಗ ಚುನಾವಣಾ ಪ್ರಚಾರವನ್ನು ನಿಷೇಧಿಸುವುದಾಗಿದ್ದರೆ ಇಂದು ರಾತ್ರಿ 10 ಗಂಟೆಯಿಂದ ಏಕೆ, ಬೆಳಿಗ್ಗೆಯಿಂದಲೇ ನಿಷೇಧ ಹೇರಬಹುದಿತ್ತಲ್ಲವೇ? ಇದು ನಿಜಕ್ಕೂ ಅನ್ಯಾಯ. ಚುನಾವಣಾ ಆಯೋಗ ಬಿಜೆಪಿ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ" ಎಂದು ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.