close

News WrapGet Handpicked Stories from our editors directly to your mailbox

ಪ್ರಧಾನಿ ಮೋದಿ ಕೈಗೊಂಡ 50 ಪ್ರಮುಖ ನಿರ್ಧಾರಗಳಿಂದ ಭಾರತದ ಭವಿಷ್ಯವೇ ಬದಲಾಗಿದೆ: ಅಮಿತ್ ಶಾ

ಪ್ರಧಾನಿ ಮೋದಿ ಅವರು ಬಿಜೆಪಿಯ ಮತ ಬ್ಯಾಂಕ್ ಅನ್ನು ಗಮನದಲ್ಲಿಟ್ಟುಕೊಂಡು ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬದಲಾಗಿ ಅವರು ಯಾವಾಗಲೂ ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಅಮಿತ್ ಷಾ ಹೇಳಿದರು.

Updated: Sep 17, 2019 , 02:42 PM IST
ಪ್ರಧಾನಿ ಮೋದಿ ಕೈಗೊಂಡ 50 ಪ್ರಮುಖ ನಿರ್ಧಾರಗಳಿಂದ ಭಾರತದ ಭವಿಷ್ಯವೇ ಬದಲಾಗಿದೆ: ಅಮಿತ್ ಶಾ

ನವದೆಹಲಿ:  ಕಳೆದ ಐದು ವರ್ಷಗಳಲ್ಲಿ 50 ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭವಿಷ್ಯವನ್ನೇ ಬದಲಾಯಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಖಿಲ ಭಾರತ ನಿರ್ವಹಣಾ ಸಂಘ(ಎಐಎಂಎ)ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾ, ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ, 2013ರಲ್ಲಿ ಪ್ರತಿದಿನ ಭ್ರಷ್ಟಾಚಾರದ ಸುದ್ದಿಗಳು, ದೇಶದ ಗಡಿಗಳಲ್ಲಿ ಅಸುರಕ್ಷತೆ ಮತ್ತು ಭಾರತೀಯ ಸೈನಿಕರನ್ನು ಶಿರಚ್ಚೇದದಂತಹ ಸುದ್ದಿಗಳೇ ಹೆಚ್ಚಾಗಿದ್ದವು ಎಂದು ಟೀಕಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ, ಪ್ರತಿಯೊಬ್ಬ ಸಚಿವರೂ ತಮ್ಮನ್ನು ಪ್ರಧಾನ ಮಂತ್ರಿ ಎಂದೇ ಪರಿಗಣಿಸುತ್ತಿದ್ದರು. ಆದರೆ ಪ್ರಧಾನ ಮಂತ್ರಿಯನ್ನು ಪ್ರಧಾನಿ ಎಂದು ಭಾವಿಸಲಿಲ್ಲ. ಹೀಗಾಗಿ ದೇಶ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು ಎಂದರು.

ಪ್ರಧಾನಿ ಮೋದಿ ಅವರು ಬಿಜೆಪಿಯ ಮತ ಬ್ಯಾಂಕ್ ಅನ್ನು ಗಮನದಲ್ಲಿಟ್ಟುಕೊಂಡು ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬದಲಾಗಿ ಅವರು ಯಾವಾಗಲೂ ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಅಮಿತ್ ಷಾ ಹೇಳಿದರು.

ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತೀಯ ಪಡೆಗಳು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಯ ಬಗ್ಗೆ ಮಾತನಾಡಿದ ಶಾ, ಈ ಘಟನೆಗಳು ಜನರಿಗೆ ಸಂತೋಷ ತಂದುಕೊಟ್ಟಿವೆ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಕಷ್ಟು ಧೈರ್ಯ ಬೇಕು ಎಂಬ ಅಂಶವನ್ನು ಯಾರೂ ಮರೆಯಬಾರದು. ಪ್ರಧಾನಿ ಮೋದಿ ತೆಗೆದುಕೊಂಡ ಕಠಿಣ ನಿರ್ಧಾರಗಳಿಂದಾಗಿ ಜಾಗತಿಕ ಸಮುದಾಯವು ಭಾರತವನ್ನು ನೋಡುವ ವಿಧಾನವನ್ನೇ ಬದಲಿಸಿದೆ ಎಂದು ನುಡಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರದ ಬಗ್ಗೆಯೂ ಮಾತನಾಡಿದ ಶಾ, "ಆಗಸ್ಟ್ 5 ರಂದು ಪ್ರಧಾನಿ ಈ ನಿರ್ಧಾರ ತೆಗೆದುಕೊಂಡ ಬಳಿಕ ಸೆಪ್ಟೆಂಬರ್ 17 ರವರೆಗೆ ಕಾಶ್ಮೀರದಲ್ಲಿ ಒಂದೇ ಒಂದು ಗುಂಡು ಹಾರಿಸಲಾಗಿಲ್ಲ.ಕಾಶ್ಮೀರದಲ್ಲಿಗ ಶಾಂತಿ ನೆಲೆಸಿದೆ" ಎಂದು ಅಮಿತ್ ಶಾ ಹೇಳಿದರು.