ಪ್ರಚಂಡ ಗೆಲುವಿನಿಂದ ಜವಾಬ್ದಾರಿ ಹೆಚ್ಚಿದೆ: ಎನ್‍ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ

ಈ ದೇಶ ಪರಿಶ್ರಮವನ್ನು, ಧರ್ಮ ನಿಷ್ಠೆಯನ್ನು ಪೂಜಿಸುತ್ತದೆ. ಇದೆಲ್ಲವನ್ನೂ ಪಾಲಿಸಿ ಮುನ್ನಡೆಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Last Updated : May 25, 2019, 07:56 PM IST
ಪ್ರಚಂಡ ಗೆಲುವಿನಿಂದ ಜವಾಬ್ದಾರಿ ಹೆಚ್ಚಿದೆ: ಎನ್‍ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ title=

ನವದೆಹಲಿ: ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದ ಸಂಸದೀಯ ಮಂಡಳಿ ನಾಯಕನಾಗಿ ನರೇಂದ್ರ ಮೋದಿ ಅವರನ್ನು ಇಂದು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 

ಸಂಸತ್‍ನ ಸೆಂಟ್ರಲ್‍ ಹಾಲ್‍ನಲ್ಲಿ ನಡೆಯುತ್ತಿರುವ ಎನ್‍ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಬಳಿಕ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವಿನಿಂದಾಗಿ ಜವಾಬ್ದಾರಿ ಹೆಚ್ಚಿದೆ. ದೇಶದ ಜನತೆ ಸೇವೆಯನ್ನು ಸ್ವೀಕರಿಸುತ್ತಾರೆ, ಆದರೆ ಅಹಂಕಾರವನ್ನಲ್ಲ. ಭಾರತದ ಮತದಾರರು ಯಾವುದೇ ಪಕ್ಷವನ್ನು ನೋಡಿ ಮತ ಹಾಕಿಲ್ಲ, ಸೇವೆಯನ್ನು, ಮಾಡಿದ ಕೆಲಸವನ್ನು ನೋಡಿ ಮತ ಹಾಕಿದ್ದಾರೆ. ಅದಕ್ಕಾಗಿಯೇ ಇಂದು ನಾನು ಇಲ್ಲಿ ಚುನಾಯಿತನಾಗಿ ನಿಂತಿದ್ದೇನೆ. ಪ್ರತಿಯೊಬ್ಬ ಸಂಸದನೂ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡಬೇಕು, ಸಮಾನ ಮನಸ್ಕರಾಗಿ ಕೆಲಸ ಮಾಡಬೇಕು ಎಂದು ನುಡಿದರು.

ಈ ದೇಶ ಪರಿಶ್ರಮವನ್ನು, ಧರ್ಮ ನಿಷ್ಠೆಯನ್ನು ಪೂಜಿಸುತ್ತದೆ. ಇದೆಲ್ಲವನ್ನೂ ಪಾಲಿಸಿ ಮುನ್ನಡೆಯುವ ಜವಾಬ್ದಾರಿ ನಮ್ಮ ಮೇಲಿದೆ. ದೇಶದ ಜನತೆ ನಮಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ನಾವು ಕೇವಲ ನಮ್ಮನ್ನು ಬೆಂಬಲಿಸುವವರನ್ನು ಮಾತ್ರವಲ್ಲ, ಎಲ್ಲರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ.  ಹಾಗಾಗಿ ಎಲ್ಲಾ ಸಂಸದರೂ ಇದಕ್ಕಾಗಿ ಶ್ರಮಿಸಬೇಕಿದೆ. ಎಂದು ನುಡಿದರು.

ಇದಕ್ಕೂ ಮುನ್ನ ಸಭೆಗೆ ಆಗಮಿಸಿದ ಪ್ರಧಾನಿ ಮೋದಿಯನ್ನು ಗೃಹ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದರು. ಬಳಿಕ ಎನ್ಡಿಎ ಸಂಸದೀಯ ಮಂಡಳಿ ನಾಯಕನಾಗಿ ಆಯ್ಕೆಗೆ ಅಕಾಲಿದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಮೊದಲು ಮೋದಿ ಹೆಸರನ್ನು ಪ್ರಸ್ತಾಪಿಸಿದರು. ಬಳಿಕ ಜೆಡಿ(ಯು) ಅಧ್ಯಕ್ಷ ನಿತೀಶ್ ಕುಮಾರ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಎಲ್ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಶ್ವಾನ್, ತಮಿಳುನಾಡು ಸಿಎಂ ಪಳನಿಸ್ವಾಮಿ, ನಾಗಾಲ್ಯಾಂಡ್ ಮುಖ್ಯಮಂತ್ರಿ ನಫಿಯೊ ರಿಯೊ, ಮೇಘಾಲಯ ಮುಖ್ಯಮಂತ್ರಿ ಕೊನಾರ್ಡ್ ಸಂಗ್ಮಾ ಅವರು ಬೆಂಬಲ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ 303 ಸಂಸದರನ್ನು ಹೊಂದಿದೆ. ಉಳಿದಂತೆ ಎನ್‍ಡಿಎ ಮಿತ್ರ ಪಕ್ಷಗಳಾದ ಶಿವಸೇನೆ 18, ಜೆಡಿಯು 16, ಎಲ್‍ಜೆಪಿ 6 ಮತ್ತು ಅಕಾಲಿದಳ ಇಬ್ಬರು ಸಂಸದರನ್ನು ಹೊಂದಿದೆ. 
 

Trending News