ಸಣ್ಣ ವ್ಯಾಪಾರಿಗಳಿಗೆ ಸಂತಸದ ಸುದ್ದಿ: ರಾಷ್ಟ್ರೀಯ ಪಿಂಚಣಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ವಾರ್ಷಿಕ ವರಮಾನ 1.5 ಕೋಟಿ ರೂ.ಗಳನ್ನು ಮೀರದ ವ್ಯಾಪಾರಿಗಳು ಮತ್ತು ಸ್ವ ಉದ್ಯೋಗಿಗಳಿಗೆ ಅನುಕೂಲವಾಗುವಂತಹ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ.  

Last Updated : Sep 12, 2019, 07:18 PM IST
ಸಣ್ಣ ವ್ಯಾಪಾರಿಗಳಿಗೆ ಸಂತಸದ ಸುದ್ದಿ: ರಾಷ್ಟ್ರೀಯ ಪಿಂಚಣಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ title=

ನವದೆಹಲಿ: ವಾರ್ಷಿಕ ವರಮಾನ 1.5 ಕೋಟಿ ರೂ.ಗಳನ್ನು ಮೀರದ ವ್ಯಾಪಾರಿಗಳು ಮತ್ತು ಸ್ವ ಉದ್ಯೋಗಿಗಳಿಗೆ ಅನುಕೂಲವಾಗುವಂತಹ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ.

ಇದು ಸ್ವಯಂಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆಯಾಗಿದ್ದು 18 ರಿಂದ 40 ವರ್ಷ ವಯಸ್ಸಿನವರು ಇದರ ಲಾಭ ಪಡೆಯಬಹುದು. ಈ ಯೋಜನೆಯಡಿ ನೊಂದಾಯಿತರಾದ ಸಣ್ಣ ವ್ಯಾಪಾರಿಗಳು ಮತ್ತು ಸ್ವ ಉದ್ಯೋಗಿಗಳಿಗೆ 60 ವರ್ಷ ದಾಟಿದ ಮೇಲೆ ಮಾಸಿಕ 3,000 ರೂ.ಗಳ ಕನಿಷ್ಠ ಆಶ್ವಾಸಿತ ಪಿಂಚಣಿಗೆ ಅವಕಾಶವಿದೆ. ಕೇಂದ್ರ ಸರ್ಕಾರವು ಮಾಸಿಕ ಕೊಡುಗೆಯಲ್ಲಿ ಶೇ.50 ರಷ್ಟು ನೀಡಲಿದ್ದು, ಉಳಿದ ಶೇ.50 ಭಾಗವನ್ನು ಫಲಾನುಭವಿಗಳು ಭರಿಸಿದ ಹಣದಿಂದ ನೀಡಲಾಗುವುದು.

"ಈ ಯೋಜನೆಯನ್ನು ರಾಷ್ಟ್ರಾದ್ಯಂತ ಜಾರಿಗೆ ತರಲಾಗಿದ್ದು, ದೇಶಾದ್ಯಂತ 3.50 ಲಕ್ಷ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಮೂಲಕ ನಿರೀಕ್ಷಿತ ಫಲಾನುಭವಿಗಳಿಗೆ ನೊಂದಾವಣೆಗೆ ಅವಕಾಶ ಮಾಡಿಕೊಡಲಾಗಿದೆ" ಎಂದು ಕೇಂದ್ರ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ. 

ಜನರು www.maandhan.in/vyapari ವೆಬ್ಸೈಟ್ ಗೆ ಭೇಟಿ ನೀಡಿ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಅರ್ಹ ವ್ಯಾಪಾರಿಗಳು ತಮ್ಮ ಹತ್ತಿರದ ಸಿಎಸ್‌ಸಿಗಳಿಗೆ ಭೇಟಿ ನೀಡಿಯೂ ಸಹ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದು.

ಈ ಯೋಜನೆಯ ನೋಂದಣಿಗೆ ಅಗತ್ಯ ದಾಖಲಾತಿಗಳು
* ರಾಷ್ಟ್ರೀಯ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಯಸುವವರು ಆಧಾರ್ ಕಾರ್ಡ್ ಮತ್ತು ಉಳಿತಾಯ ಬ್ಯಾಂಕ್ / ಜನ-ಧನ್ ಖಾತೆ ಪಾಸ್‌ಬುಕ್ ಹೊಂದಿರಬೇಕು.
* 18 ರಿಂದ 40 ವರ್ಷದೊಳಗಿನವರಾಗಿರಬೇಕು. 
* 40 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ಇರುವವರಿಗೆ ಮಾತ್ರ ಜಿಎಸ್‌ಟಿಐಎನ್ ಅಗತ್ಯವಿದೆ. * * ಈ ಯೋಜನೆಯಡಿ ನೋಂದಾವಣೆ ಉಚಿತವಾಗಿರುತ್ತದೆ. 
* ಇದು ಸ್ವಯಂ ಪ್ರಮಾಣೀಕರಣದ ಮೇಲೆ ಆಧಾರಿತವಾಗಿದೆ.

ಈ ಯೋಜನೆಯು 2019-20ರಲ್ಲಿ 25 ಲಕ್ಷ ಚಂದಾದಾರರನ್ನು ಮತ್ತು 2023-2024 ರ ವೇಳೆಗೆ 2 ಕೋಟಿ ಚಂದಾದಾರರನ್ನು ಹೊಂದುವ ಗುರಿ ಹೊಂದಿದೆ. ಪಿಂಚಣಿ ಯೋಜನೆಯಡಿ ದೇಶದಲ್ಲಿ ಅಂದಾಜು 3 ಕೋಟಿ ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Trending News