'ಹೈದರಾಬಾದ್ ಎನ್ಕೌಂಟರ್ ಪ್ರಕರಣವನ್ನು ಪೊಲೀಸರು ನ್ಯಾಯ ಎಂದು ಹೇಳಿಲ್ಲ'

ZEE ನ್ಯೂಸ್ ಜೊತೆ ನಡೆಸಿದ ವಿಶೇಷ ಸಂವಾದದಲ್ಲಿ ಮಾತನಾಡಿರುವ ಖ್ಯಾತ ಹಿರಿಯ ವಕೀಲ ಉಜ್ವಲ್ ನಿಕಮ್, ಹೈದ್ರಾಬಾದ್ ಎನ್ಕೌಂಟರ್ ಅನ್ನು ಜನರು ಎಷ್ಟೇ ನ್ಯಾಯವೆಂದು ತಿಳಿದರು, ಪೊಲೀಸರು ಮಾತ್ರ ಅದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದಿದ್ದಾರೆ. ತೆಲಂಗಾಣ ಪೊಲೀಸರು ಒಂದು ಬಾರಿಯೂ ಕೂಡ ಆರೋಪಿಗಳ ಎನ್ಕೌಂಟರ್ ನಡೆಸಿ ನ್ಯಾಯವನ್ನು ನೀಡುವ ಕಾರ್ಯ ಮಾಡಿದ್ದೇವೆ ಎಂದು ಹೇಳಿಕೊಂಡಿಲ್ಲ ಎಂದು ನಿಕಮ್ ಹೇಳಿದ್ದಾರೆ.

Updated: Dec 6, 2019 , 07:21 PM IST
'ಹೈದರಾಬಾದ್ ಎನ್ಕೌಂಟರ್ ಪ್ರಕರಣವನ್ನು ಪೊಲೀಸರು ನ್ಯಾಯ ಎಂದು ಹೇಳಿಲ್ಲ'

ನವದೆಹಲಿ: ಹೈದ್ರಾಬಾದ್ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದ ಆರೋಪಿಗಳ ಎನ್ಕೌಂಟರ್ ಪ್ರಕರಣಕ್ಕೆ ಸಾರ್ವಜನಿಕರು ಎಷ್ಟೇ ನ್ಯಾಯ ನ್ಯಾಯ ಎಂದು ಹೇಳಿ ಸಂಭ್ರಮಿಸುತ್ತಿದ್ದರೂ ಕೂಡ ಖ್ಯಾತ ವಕೀಲ ಉಜ್ವಲ್ ನಿಕಮ್ ಮಾತ್ರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ZEE ನ್ಯೂಸ್ ಜೊತೆ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಉಜ್ವಲ್ ನಿಕಮ್, ಸಾರ್ವಜನಿಕರು ಈ ಎನ್ಕೌಂಟರ್ ಅನ್ನು ಎಷ್ಟೇ ನ್ಯಾಯವೆಂದು ಭಾವಿಸಿದರೂ ಕೂಡ, ತೆಲಂಗಾಣ ಪೊಲೀಸರು ಮಾತ್ರ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದಿದ್ದಾರೆ. ತೆಲಂಗಾಣ ಪೊಲೀಸರು ಒಂದು ಬಾರಿಯೂ ಕೂಡ ಆರೋಪಿಗಳ ಎನ್ಕೌಂಟರ್ ನಡೆಸಿ ನ್ಯಾಯವನ್ನು ನೀಡುವ ಕಾರ್ಯ ಮಾಡಿದ್ದೇವೆ ಎಂದು ಹೇಳಿಕೊಂಡಿಲ್ಲ ಎಂದು ನಿಕಮ್ ಹೇಳಿದ್ದಾರೆ. ಆರೋಪಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ತಮ್ಮ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ಪೊಲೀಸರು ಸತತವಾಗಿ ಪುನರುಚ್ಛರಿಸುತ್ತಲೇ ಇದ್ದಾರೆ ಎಂದು ನಿಕಮ್ ಹೇಳಿದ್ದಾರೆ.

ಒಂದು ವೇಳೆ ಪೊಲೀಸರು ಇದೇ ನ್ಯಾಯ ಎಂದು ಭಾವಿಸಿ ಎನ್ಕೌಂಟರ್ ನಡೆಸಿದ್ದಾರೆ ಎಂದಾದರೆ ಅದು ಶುದ್ಧ ತಪ್ಪು ಮತ್ತು ಇದರಿಂದ ನಾವೇ ನಮ್ಮದೇ ಆದ ಕಾನೂನು ವ್ಯವಸ್ಥೆಯನ್ನು ನಿಷ್ಕ್ರೀಯಗೊಳಿಸಿದಂತಾಗುತ್ತದೆ. ಜನರ ಭಾವನೆಯಲ್ಲಿ ಇದು ಎಷ್ಟೇ ನ್ಯಾಯವಾದರೂ ಕೂಡ ಇದರಿಂದ ತಪ್ಪು ಪರಂಪರೆಗೆ ಮುನ್ನುಡಿ ಬರೆದಂತಾಗುತ್ತದೆ ಎಂದು ನಿಕಮ್ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಸರ್ವೋಚ್ಛ ನ್ಯಾಯಾಲಯದ ಬಾರ್ ಕೌನ್ಸಿಲ್ ನ ಮಾಜಿ ಅಧ್ಯಕ್ಷ ಹಾಗೂ ವರಿಷ್ಠ ವಕೀಲ ವಿಕಾಸ್ ಸಿಂಗ್, “ದೇಶದಲ್ಲಿ ಕಾನೂನಿನ ಶಾಸನ ಇರಲೇಬೇಕು ಹಾಗೂ ಎನ್ಕೌಂಟರ್ ಮೂಲಕ ನಡೆಸಲಾದ ಆರೋಪಿಗಳ ಹತ್ಯೆಯ ಕುರಿತು ತನಿಖೆ ನಡೆಯಲೇಬೇಕು" ಎಂದಿದ್ದಾರೆ.

ಹೈದ್ರಾಬಾದ್ ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಾದ್ ನಗರ್ ನ ಚರ್ನಪಲ್ಲಿ ಬಳಿ ಪೊಲೀಸರಿಂದ ಶಸ್ತ್ರಾಸ್ತ್ರ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ರೇಪ್ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ಪೊಲೀಸರು ಮಟ್ಟಹಾಕಿದ್ದರು. ತನಿಖೆಯ ಭಾಗವಾಗಿ ಪ್ರಕರಣದ ದೃಶ್ಯಾವಳಿಗಳನ್ನು ಮರುಸೃಷ್ಟಿಸಿ ಪ್ರಕರಣದ ತನಿಖೆ ನಡೆಸಲು ಪೊಲೀಸರು ಆರೋಪಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು ಎಂಬುದು ಇಲ್ಲೇ ಉಲ್ಲೇಖನೀಯ.