)
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ವಿಬಿ-ಜಿ ರಾಮ್ ಜಿಗೆ ಅನುಮೋದನೆ ನೀಡಿದ್ದಾರೆ.ಈ ಅಂಕಿತದೊಂದಿಗೆ ಈಗ ಈ ಮಸೂದೆ ಈಗ ಕಾನೂನು ರೂಪದಲ್ಲಿ ಜಾರಿಗೆ ಬಂದಿದೆ.ಈ ಹೊಸ ಕಾನೂನು ಈಗ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷಕ್ಕೆ 125 ದಿನಗಳ ಶಾಸನಬದ್ಧ ವೇತನ ಉದ್ಯೋಗವನ್ನು ಖಾತರಿಪಡಿಸುತ್ತದೆ,
ಮುಂದಿನ ವರ್ಷ (2026) ಏಪ್ರಿಲ್ 1 ರಿಂದ ಈ ಮಸೂದೆಯನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.ಈ ಪ್ರಸ್ತಾವಿತ ಕಾನೂನು 20 ವರ್ಷ ಹಳೆಯದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ನರೇಗಾ) ಬದಲಾಯಿಸುತ್ತದೆ.ಈ ಮಸೂದೆಯಡಿಯಲ್ಲಿ ಶಾಸನಬದ್ಧ ಉದ್ಯೋಗ ಖಾತರಿಯನ್ನು ಈಗ 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ಈ ಮಸೂದೆಯು MNREGA ಯನ್ನು ಬದಲಿಸಲಿದೆ ಮತ್ತು 2047 ರ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಆದಾಯ ಭದ್ರತೆಯನ್ನು ಬಲಪಡಿಸುವ ಮತ್ತು ಸಮಗ್ರ ಮತ್ತು ಸಮತೋಲಿತ ಬೆಳವಣಿಗೆಯನ್ನು ಉತ್ತೇಜಿಸಲು ಬಾಳಿಕೆ ಬರುವ ಮತ್ತು ಉತ್ಪಾದಕ ಸ್ವತ್ತುಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.
125 ದಿನಗಳ ಉದ್ಯೋಗ:
ಗ್ರಾಮೀಣ ಕುಟುಂಬಗಳಿಗೆ ಕನಿಷ್ಠ 125 ದಿನಗಳ ಉದ್ಯೋಗವನ್ನು ಒದಗಿಸುವುದು ಸರ್ಕಾರದ ಶಾಸನಬದ್ಧ ಜವಾಬ್ದಾರಿಯಾಗಿದೆ.ವಾರಕ್ಕೊಮ್ಮೆ ಅಥವಾ ಗರಿಷ್ಠ 15 ದಿನಗಳ ಒಳಗೆ ವೇತನ ಪಾವತಿ ಕಡ್ಡಾಯವಾಗಿದೆ. ನಿಗದಿತ ಸಮಯದೊಳಗೆ ಪಾವತಿಗಳನ್ನು ಮಾಡದಿದ್ದರೆ ವೇತನ ಪಾವತಿಯಲ್ಲಿನ ವಿಳಂಬಕ್ಕೆ ಪರಿಹಾರ ನೀಡುವ ನಿಬಂಧನೆಯೂ ಇದರಲ್ಲಿ ಇದೆ ಎನ್ನಲಾಗಿದೆ.ಇನ್ನೊಂದೆಡೆಗೆ ನರೇಗಾ ಹೆಸರಿನಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕಿರುವುದಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.ಇದೆ ವೇಳೆ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಹತ್ಯೆಗೈದಿದ್ದಾರೆ.ಆದರೆ ಈಗ ಮೋದಿ ಸರ್ಕಾರವು ಅವುಗಳನ್ನು ಜೀವಂತವಾಗಿರಿಸಿದೆ ಎಂದು ಹೇಳಿದ್ದಾರೆ.
ನೂತನ ಉದ್ಯೋಗ ಖಾತ್ರಿ ಯೋಜನೆಯನ್ನು ಅಭಿವೃದ್ಧಿ ಹೊಂದಿದ ಭಾರತ 2047 ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.ಇದರಲ್ಲಿ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ, ಜೀವನೋಪಾಯ ಮತ್ತು ಕೃಷಿ ಉತ್ಪಾದಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.ಈ ಮಸೂದೆಯು ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸುತ್ತದೆ.ಅಷ್ಟೇ ಅಲ್ಲದೆ ಇದು ಸ್ಥಳೀಯ ಯೋಜನೆ, ಕಾರ್ಮಿಕರ ರಕ್ಷಣೆ ಮತ್ತು ಯೋಜನೆಗಳ ಏಕೀಕರಣಕ್ಕೂ ಒತ್ತು ನೀಡುತ್ತದೆ..