)
Private Bus Caught Fire : ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನಟೇಕುರು ಗ್ರಾಮದ ಬಳಿ ಹೈದರಾಬಾದ್ನಿಂದ ಬೆಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ಗೆ ಬೆಂಕಿ ತಾಗಿದ್ದು 20 ಜನ ಮೃತಪಟ್ಟಿದ್ದಾರೆ. 40 ಜನ ಪ್ರಯಾಣ ಮಾಡುತ್ತಿದ್ದ ಬಸ್ಸಿನಲ್ಲಿ ಕೆಲವರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ. ಹಲವು ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಶುಕ್ರವಾರ(ಅ.24) ಮುಂಜಾನೆ ಕರ್ನೂಲ್ನಿಂದ ಹೈದಾರಾಬಾದಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ಇಲ್ಲಿನ ಚಿನ್ನಟೇಕೂರು ಬಳಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಾಗ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕ್ಷಣಮಾತ್ರದಲ್ಲಿ ಬಸ್ಸಿಗೆ ಆವರಿಸಿ ಪ್ರಯಾಣಿಕರು ಕೆಳಗೆ ಇಳಿಯಲು ಸಾಧ್ಯವಾಗಿಲ್ಲ. ಬಾಗಿಲ ಬಳಿ ಇದ್ದವರಷ್ಟೇ ಕೆಳಗಿಳಿದು ಬಚಾವ್ ಆಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು ಮಾತ್ರವಲ್ಲದೆ ಬೈಕ್ ಸವಾರ ಕೂಡ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಬರುತ್ತಿರುವ ಪ್ರಾಥಮಿಕ ವರದಿಗಳ ಪ್ರಕಾರ ದ್ವಿಚಕ್ರ ವಾಹನವೇ ಬಸ್ಸಿಗೆ ಡಿಕ್ಕಿ ಹೊಡೆದು, ಪೆಟ್ರೋಲ್ ಟ್ಯಾಂಕ್ ಮುಚ್ಚಳ ಓಪನ್ ಆಗಿದ್ದರಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ.
ಸಿಎಂ ಚಂದ್ರಬಾಬು ನಾಯ್ಡು ಸಂತಾಪ:
ರಾಜ್ಯದಲ್ಲಿ ಖಾಸಗಿ ಬಸ್ಸಿನಲ್ಲಿ ಸಂಭವಿಸಿರುವ ಅಗ್ನಿ ಅಪಘಾತಕ್ಕೆ ಸಂಬಂಧಿಸಿದಂತೆ ದುಬೈ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇನ್ನಿತರೆ ಅಧಿಕಾರಿಗಳ ಜೊತೆ ಮಾತನಾಡಿ ಅಪಘಾತದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಅಧಿಕಾರಿಗಳನ್ನು ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದ್ದಾರೆ.
ಆಂಧ್ರದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಸಚಿವ ಸತ್ಯಕುಮಾರ್ ಯಾದವ್ ಮಾತನಾಡಿ ಘಟನಾ ಸ್ಥಳದಲ್ಲೇ ಪೋಸ್ಟ್ಮಾರ್ಟಂ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಫೊರೆನ್ಸಿಕ್ ವೈದ್ಯರನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಮೃತದೇಹಗಳನ್ನು ಸಾಗಿಸಲು ವಾಹನಗಳನ್ನೂ ಸಿದ್ಧಪಡಿಸಲಾಗಿದೆ. ಮೃತರ ಗುರುತಿಗಾಗಿ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕರ್ನೂಲ್ನಲ್ಲಿ ಕಂಟ್ರೋಲ್ ರೂಂ ಸ್ಥಾಪನೆ:
ಕರ್ನೂಲು ಜಿಲ್ಲೆಯ ಚಿನ್ನಟೇಕೂರಿನಲ್ಲಿ ನಡೆದ ಭೀಕರ ಅಪಘಾತದ ಬಗ್ಗೆ ಮಾಹಿತಿ ಒದಗಿಸಲು ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಕುಟುಂಬಸ್ಥರು ಅಥವಾ ಸ್ನೇಹಿತರು ಯಾವುದೇ ಮಾಹಿತಿಗಾಗಿ ನಿಯಂತ್ರಣ ಕೊಠಡಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಎ. ಸಿರಿ ಮಾಹಿತಿ ನೀಡಿದ್ದಾರೆ.
ಸಂಪರ್ಕ ಸಂಖ್ಯೆಗಳು ಈ ಕೆಳಕಂಡಂತಿವೆ:
ಕಲೆಕ್ಟರೇಟ್ನಲ್ಲಿರುವ ಕಂಟ್ರೋಲ್ ರೂಂ ಸಂಖ್ಯೆ 08518-277305 , ಸರ್ಕಾರಿ ಜನರಲ್ ಆಸ್ಪತ್ರೆಯ ಕಂಟ್ರೋಲ್ ರೂಂ ಸಂಖ್ಯೆ 9121101059 , ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 9121101075 , ಅಪಘಾತ ಸ್ಥಳದ ಕಂಟ್ರೋಲ್ ರೂಂ ಸಂಖ್ಯೆ 9121101061 ಮತ್ತು ಜಿಜಿಹೆಚ್ನಲ್ಲಿರುವ ಸಹಾಯ ಕೇಂದ್ರವನ್ನು ಸಂಪರ್ಕಿಸಲು 9494609814 ಮತ್ತು 9052951010 ಸಂಖ್ಯೆಗಳಿಗೆ ಕರೆ ಮಾದಬಹುದಾಗಿದೆ.