ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾದ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ
ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಈಗ ಕಾಂಗ್ರೆಸ್ ಪಕ್ಷವನ್ನು ತೊರೆದ ಬೆನ್ನಲ್ಲೇ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ನವದೆಹಲಿ: ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಈಗ ಕಾಂಗ್ರೆಸ್ ಪಕ್ಷವನ್ನು ತೊರೆದ ಬೆನ್ನಲ್ಲೇ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮುಂಬೈನಲ್ಲಿ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆಯವರ ಸಮ್ಮುಖದಲ್ಲಿ ಪ್ರಿಯಾಂಕಾ ಚತುರ್ವೇದಿ ಪಕ್ಷಕ್ಕೆ ಸೇರ್ಪಡೆಯಾದರು.ಶಿವಸೇನಾಗೆ ಸೇರ್ಪಡೆಯಾದ ನಂತರ ಮಾತನಾಡಿದ ಅವರು "ನಾನು ನನ್ನ ಹಿಂದಿನ ಹೇಳಿಕೆಗಳು ಮತ್ತು ನನ್ನ ಅಭಿಪ್ರಾಯಗಳಿಗೆ ನಾನು ಜವಾಬ್ದಾರಳಾಗಿರುತ್ತೇನೆ ಎನ್ನುವುದು ಗೊತ್ತಿದೆ. ಇದೆಲ್ಲದರ ನಡುವೆಯೇ ನಾನು ಸಾಕಷ್ಟು ಯೋಚಿಸಿಯೇ ಈಗ ಶಿವಸೇನಾ ಪಕ್ಷಕ್ಕೆ ಸೇರುವ ನಿರ್ಧಾರವನ್ನು ತೆಗೆದುಕೊಂಡಿದ್ದೆನೆ" ಎಂದು ಹೇಳಿದರು.
ಈ ಹಿಂದೆ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ಮಥುರಾದಲ್ಲಿ ಪ್ರಿಯಾಂಕಾ ಚತುರ್ವೇದಿ ರಫೇಲ್ ಒಪ್ಪಂದದ ಕುರಿತಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೆಲವು ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು .ಆದರೆ ಈಗ ಅವರನ್ನು ಪುನಃ ಕಾಂಗ್ರೆಸ್ ಪಕ್ಷದ ಪಕ್ಷದ ಸಂಘಟನೆಯಲ್ಲಿ ಸೇರಿಸಿಕೊಂಡಿರುವುದಕ್ಕೆ ಪ್ರಿಯಾಂಕಾ ಚತುರ್ವೇದಿ ಬೇಸರ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ರಕ್ತ ಮತ್ತು ಬೆವರನ್ನು ಹರಿಸಿದವರ ಬದಲಾಗಿ ಗೂಂಡಾಗಳಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತಿದೆ.ತಮಗೆ ಬೆದರಿಕೆ ಒಡ್ಡಿದವರೆಲ್ಲ ಈಗ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಎಂದು ಅವರು ಟ್ವೀಟ್ ಮೂಲಕ ಹೇಳಿದ್ದರು. ಕಾಂಗ್ರೆಸ್ ಪಕ್ಷವನ್ನು ಅವರು ತೊರೆಯುವುದಕ್ಕೂ ಮೊದಲು ವಾಟ್ಸಪ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಕಾಂಗ್ರೆಸ್ ಪಕ್ಷದ ಕುರಿತಾದ ಉಲ್ಲೇಖವನ್ನು ಅಳಿಸಿ ಹಾಕಿದ್ದಾರೆ.