)
ಹೈದರಾಬಾದ್: ಮೇ 10 ರ ಭಾನುವಾರದಂದು ಹೈದರಾಬಾದ್ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ (HICC) ತೆಲಂಗಾಣಕ್ಕಾಗಿ ಸುಮಾರು ₹9,400 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಪ್ರಸ್ತುತ ಕಾಲದಲ್ಲಿ, ಪೆಟ್ರೋಲ್, ಡೀಸೆಲ್ ಮತ್ತು ಅನಿಲದ ಬಳಕೆಯನ್ನು ಸಂಯಮದಿಂದ ನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಉಂಟಾಗುತ್ತಿರುವ ಮತ್ತು ಜಾಗತಿಕ ತೈಲ ಪೂರೈಕೆಯಲ್ಲಿ ಅಡಚಣೆಗಳು ಕಂಡುಬರುತ್ತಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗಳು ಜನರಲ್ಲಿ ಗೊಂದಲದ ಜೊತೆ ಆತಂಕ ಸೃಷ್ಟಿಸಿವೆ.
ನಮ್ಮ ನೆರೆಹೊರೆಯಲ್ಲಿ ಪ್ರಸ್ತುತ ಒಂದು ದೊಡ್ಡ ಸಂಘರ್ಷ ನಡೆಯುತ್ತಿದೆ. ಭಾರತವು ತನ್ನದೇ ಆದ ಅಪಾರ ತೈಲ ನಿಕ್ಷೇಪಗಳನ್ನು ಹೊಂದಿಲ್ಲ. ನಾವು ವಿದೇಶಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಆಮದು ಮಾಡಿಕೊಳ್ಳಬೇಕು. ಈ ಸರಕುಗಳ ಬೆಲೆಗಳು ಗಗನಕ್ಕೇರಿವೆ. ಇಂದು ದೇಶ ಎದುರಿಸುತ್ತಿರುವ ಪರಿಸ್ಥಿತಿಯನ್ನು ಜನರು ಸ್ಪಷ್ಟವಾಗಿ ಗಮನಿಸಬಹುದು. ನಮ್ಮ ನಾಗರಿಕರು ಈ ಹೊರೆಯನ್ನು ಹೊರದಂತೆ ತಯಡೆಯಲು ಸಂಪೂರ್ಣ ಹೊರೆಯನ್ನು ನಾವೇ ಹೊರುತ್ತೇವೆ. ಈಗ ನಾವು ಒಗ್ಗಟ್ಟಿನಿಂದ ನಿಂತು ಈ ಸವಾಲನ್ನು ಒಟ್ಟಿಗೆ ಎದುರಿಸಬೇಕು ಎಂದು ಕರೆ ನೀಡಿದರು.
ಮಲ್ಕಾಪುರದಲ್ಲಿ ಹೊಸ ಇಂಡಿಯನ್ ಆಯಿಲ್ ಟರ್ಮಿನಲ್ ಉದ್ಘಾಟನೆಯು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಈ ಟರ್ಮಿನಲ್ ಪೂರೈಕೆ ಸರಪಳಿಯನ್ನು ಬಲಪಡಿಸುತ್ತದೆ. ತೆಲಂಗಾಣದ ಬೆಳೆಯುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಕಳೆದ ಕೆಲವು ವರ್ಷಗಳಿಂದ ಭಾರತವು ಸೌರಶಕ್ತಿ ಕ್ಷೇತ್ರದಲ್ಲಿ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಮೋದಿ ಹೇಳಿದರು.
ಪೆಟ್ರೋಲ್ನೊಂದಿಗೆ ಎಥೆನಾಲ್ ಮಿಶ್ರಣದಲ್ಲಿಯೂ ಅಭೂತಪೂರ್ವ ಪ್ರಗತಿಯನ್ನು ಸಾಧಿಸಲಾಗಿದೆ. ಇದಲ್ಲದೆ, ಜಾಗತಿಕ ಇಂಧನ ಬಿಕ್ಕಟ್ಟನ್ನು ನಿವಾರಿಸಲು, ನಾವು LPG ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು CNG ಬಳಕೆಯನ್ನು ಉತ್ತೇಜಿಸುವತ್ತ ವ್ಯಾಪಕ ಗಮನ ಹರಿಸಿದ್ದೇವೆ. ಪೆಟ್ರೋಲ್, ಡೀಸೆಲ್ ಮತ್ತು ಅನಿಲವನ್ನು ಅತ್ಯಂತ ಸಂಯಮದಿಂದ ಬಳಸುವುದು ಇಂದಿನ ಅನಿವಾರ್ಯತೆಯಾಗಿದೆ ಎಂದರು.
ಪೆಟ್ರೋಲಿಯಂ ಉತ್ಪನ್ನಗಳ ವಿವೇಚನಾಯುಕ್ತ ಬಳಕೆಯನ್ನು ಒತ್ತಿ ಹೇಳುತ್ತಾ, ಪ್ರಧಾನಿ ಮೋದಿ, ಇಂದು ಪೆಟ್ರೋಲ್, ಗ್ಯಾಸ್ ಮತ್ತು ಡೀಸೆಲ್ನಂತಹ ಸಂಪನ್ಮೂಲಗಳನ್ನು ಹೆಚ್ಚಿನ ವಿವೇಕ ಮತ್ತು ಚಿಂತನಶೀಲತೆಯಿಂದ ಬಳಸಿಕೊಳ್ಳುವ ತುರ್ತು ಅಗತ್ಯವೂ ಇದೆ. ಆಮದು ಮಾಡಿಕೊಂಡ ಪೆಟ್ರೋಲಿಯಂ ಉತ್ಪನ್ನಗಳನ್ನು ನಿಜವಾದ ಅವಶ್ಯಕತೆಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ಬಳಸಬೇಕು. ಈ ವಿಧಾನವು ವಿದೇಶಿ ವಿನಿಮಯ ಉಳಿತಾಯಕ್ಕೆ ಕಾರಣವಾಗುವುದಲ್ಲದೆ, ನಡೆಯುತ್ತಿರುವ ಸಂಘರ್ಷದ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ದೇಶಭಕ್ತಿ ಎಂದರೆ ಕೇವಲ ದೇಶಕ್ಕಾಗಿ ಹೋರಾಡುವುದಲ್ಲ. ರಾಷ್ಟ್ರಕ್ಕಾಗಿ ಬದುಕುವುದು. ನಮ್ಮ ಸಾಮಾಜಿಕ ಕರ್ತವ್ಯಗಳನ್ನು ಶ್ರದ್ಧೆಯಿಂದ ಪೂರೈಸುವುದು ದೇಶಭಕ್ತಿಯ ಕ್ರಿಯೆಗಳಾಗಿವೆ ಎಂದು ಪೆಎಂ ಮೋದಿ ಹೇಳಿದರು.
ನಾವು ಈ ಉದ್ದೇಶಕ್ಕಾಗಿ ನಮ್ಮನ್ನು ಬದ್ಧಗೊಳಿಸಲು ನಿರ್ಧರಿಸಬೇಕು. ಉದಾಹರಣೆಗೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬೇಕು. ಮೆಟ್ರೋ ವ್ಯವಸ್ಥೆಯನ್ನು ಹೊಂದಿರುವ ನಗರಗಳ ನಿವಾಸಿಗಳು ಅದನ್ನು ಬಳಸಿಕೊಳ್ಳಬೇಕು. ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವವರು ಸಾಧ್ಯವಾದಷ್ಟು ಅವುಗಳನ್ನು ಬಳಸಬೇಕು. ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ (Work From Home) ರೂಢಿಸಿಕೊಳ್ಳಬೇಕು, ಆನ್ಲೈನ್ ಕಾನ್ಫರೆನ್ಸಿಂಗ್ ಮತ್ತು ವರ್ಚುವಲ್ ಸಭೆಗಳನ್ನು ಮತ್ತೆ ಬಳಕೆಗೆ ತರಬೇಕು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.