ಮುಂಬೈ: ಇಲ್ಲಿನ ಹೋಟೆಲ್ ರೆನೈಸನ್ಸ್ ಒಳಗೆ ಪ್ರವೇಶಿಸಲು ಕರ್ನಾಟಕ ಕಾಂಗ್ರೆಸ್ ಮುಖಂಡ ಮತ್ತು ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ತಡೆದು, ವಶಕ್ಕೆ ಪಡೆದ ಮುಂಬೈ ಪೋಲೀಸರ ಕ್ರಮವನ್ನು ಕಾಂಗ್ರೆಸ್ ಹಿರಿಯ ಮುಖಂಡ ಸಂಜಯ್ ನಿರುಪಮ್ ತೀವ್ರವಾಗಿ ಖಂಡಿಸಿದ್ದಾರೆ.


COMMERCIAL BREAK
SCROLL TO CONTINUE READING

"ನಾನು ಶಿವಕುಮಾರ್‌ ಅವರನ್ನು ತಡೆದ ಮುಂಬೈ ಪೊಲೀಸರ ಕ್ರಮವನ್ನು ಖಂಡಿಸುತ್ತೇನೆ. ಒಂದು ರಾಜ್ಯದ ಗೌರವಾನ್ವಿತ ಸಚಿವರನ್ನು ಈ ರೀತಿ ನಡೆಸಿಕೊಳ್ಳುವುದು ಮಹಾರಾಷ್ಟ್ರದ ಸಂಸ್ಕೃತಿಯಲ್ಲ" ಎಂದು ಟ್ವೀಟ್ ಮಾಡುವ ಮೂಲಕ ನಿರುಪಮ್ ವಾಗ್ದಾಳಿ ನಡೆಸಿದ್ದಾರೆ.


ಅಷ್ಟೇ ಅಲ್ಲದೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೆಸರನ್ನು ಟ್ವೀಟ್'ನಲ್ಲಿ ಟ್ಯಾಗ್ ಮಾಡಿರುವ ನಿರುಪಮ್, "ಸಿಎಂ ದೇವೇಂದ್ರ ಫಡ್ನವೀಸ್ ಅವರೇ ಈ ರೀತಿ ವರ್ತಿಸಬೇಡಿ. ಹೋಟೆಲ್ ಒಳಗೆ ಬಿಜೆಪಿಯಿಂದ ಬಂಧಿತರಾಗಿರುವ ಸಹೋದ್ಯೋಗಿಗಳನ್ನು ಭೇಟಿ ಮಾಡಲು ಡಿಕೆಶಿ ಅವರಿಗೆ ಅವಕಾಶ ಕಲ್ಪಿಸಿ" ಎಂದಿದ್ದಾರೆ.



ಇಂದು ಬೆಳಿಗ್ಗೆ ಅತೃಪ್ತ ಶಾಸಕರ ಮನವೊಲಿಸಲು ಮುಂಬೈನ ಹೋಟೆಲ್ ಗೆ ಪ್ರವೇಶಿಸಲು ಪ್ರಯತ್ನಿಸಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮಹಾರಾಷ್ಟ್ರ ಪೊಲೀಸರು ತಡೆ ನೀಡಿದ್ದರು. ಬಳಿಕ ಆ ಹೋಟೆಲ್ ನಲ್ಲಿ ಶಿವಕುಮಾರ್ ಅವರು ಕಾಯ್ದಿರಿಸಿದ್ದ ಕೊಠಡಿಯನ್ನೂ ರದ್ದು ಮಾಡಿದ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು, ಸಚಿವ ಜಿ,ಟಿ.ದೇವೇಗೌಡ ಅವರೊಂದಿಗೆ ಹೋಟೆಲ್ ಮುಂಭಾಗದಲ್ಲೇ ಠಿಕಾಣಿ ಹೂಡಿದ್ದರು. 


ಹೀಗಾಗಿ ಸ್ಥಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೂ ಸ್ಥಳ ಬಿಟ್ಟು ಕದಲದ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ ಸೇರಿದಂತೆ ತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.