ನಿರ್ಭಯಾ ದೋಷಿಗಳಿಗೆ ಗಲ್ಲು ಶಿಕ್ಷೆ ಗ್ಯಾರಂಟಿ

ನ್ಯಾಯಮೂರ್ತಿ NV ರಮಾನಾ, ನ್ಯಾ. ಅರುಣ್ ಮಿಶ್ರಾ, ನ್ಯಾ. ರೋಹಿಂಗಟನ್ ಫಾಲಿ ನಾರಿಮನ್, ನ್ಯಾ. ಆರ್. ಭಾನುಮತಿ ಹಾಗೂ ನ್ಯಾ. ಅಶೋಕ್ ಭೂಷಣ್ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ವಿನಯ್ ಶರ್ಮಾ ಹಾಗೂ ಮುಕೇಶ್ ದಾಖಲಿಸಿದ್ದ ಕ್ಯುರೆಟಿವ್ ಪಿಟಿಷನ್ ಅನ್ನು ತಳ್ಳಿಹಾಕಿದೆ.  

Last Updated : Jan 14, 2020, 04:36 PM IST
ನಿರ್ಭಯಾ ದೋಷಿಗಳಿಗೆ ಗಲ್ಲು ಶಿಕ್ಷೆ ಗ್ಯಾರಂಟಿ  title=

ನವದೆಹಲಿ: ನಿರ್ಭಯಾ ಪ್ರಕರಣದ ಇಬ್ಬರು ದೋಷಿಗಳಿಗೆ ಮಂಗಳವಾರ ಭಾರಿ ಪೆಟ್ಟು ನೀಡಿರುವ ಸುಪ್ರೀಂ ಕೋರ್ಟ್ ಅವರು ಸಲ್ಲಿಸಿದ್ದ ಕ್ಯೂರೆಟಿವ್ ಪಿಟಿಷನ್ ಅನ್ನು ವಜಾಗೊಳಿಸಿದೆ. ನ್ಯಾಯಮೂರ್ತಿ NV ರಮಾನಾ, ನ್ಯಾ. ಅರುಣ್ ಮಿಶ್ರಾ, ನ್ಯಾ. ರೋಹಿಂಗಟನ್ ಫಾಲಿ ನಾರಿಮನ್, ನ್ಯಾ. ಆರ್. ಭಾನುಮತಿ ಹಾಗೂ ನ್ಯಾ. ಅಶೋಕ್ ಭೂಷಣ್ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ವಿನಯ್ ಶರ್ಮಾ ಹಾಗೂ ಮುಕೇಶ್ ದಾಖಲಿಸಿದ್ದ ಕ್ಯುರೆಟಿವ್ ಪಿಟಿಷನ್ ಅನ್ನು ತಳ್ಳಿಹಾಕಿದೆ. ಹೀಗಾಗಿ ಈ ಪ್ರಕರಣದ ಎಲ್ಲ ನಾಲ್ವರು ದೋಷಿಗಳಿಗೆ ಜನವರಿ 22ರ ಬೆಳಗ್ಗೆ 7ಗಂಟೆಗೆ ಗಲ್ಲು ಶಿಕ್ಷೆ ನೀಡುವುದು ಇದೀಗ ಖಚಿತವಾಗಿದೆ.

ಈ ಪ್ರಕರಣದಲ್ಲಿ ಸದ್ಯ ನಾಲ್ವರು ಅಪರಾಧಿಗಳು ಉಳಿದಿದ್ದು, ಅವರಲ್ಲಿ ಕೇವಲ ಇಬ್ಬರು ಮಾತ್ರ ಈ ಅರ್ಜಿಯನ್ನು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಬಹಿರಂಗವಾಗಿ ನ್ಯಾಯಾಲಯದಲ್ಲಿ ನಡೆಸದೆ, ನ್ಯಾಯಮೂರ್ತಿಗಳ ಕೊಠಡಿಯಲ್ಲಿ ಮಧ್ಯಾಹ್ನ 1.45 ಸುಮಾರಿಗೆ ನಡೆಸಲಾಗಿದೆ. ಈ ವೇಳೆ ನ್ಯಾಯಾಧೀಶರ ಕೊಠಡಿಯಲ್ಲಿ ಯಾವುದೇ ಪಕ್ಷದ ಪರ ವಾದ-ಪ್ರತಿವಾದ ನಡೆಸಲು ವಕೀಲರಿಗೆ ಅನುಮತಿ ನೀಡಲಾಗುವುದಿಲ್ಲ.

ಈ ಪ್ರಕರಣದ ಒಟ್ಟು ನಾಲ್ವರು ದೋಷಿಗಳ ಪೈಕಿ ಕೇವಲ ಇಬ್ಬರು ದೋಷಿಗಳು ಮಾತ್ರ ಇದುವರೆಗೆ ಕ್ಯೂರೆಟಿವ್ ಪಿಟಿಷನ್ ದಾಖಲಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳೂ ಕೂಡ ಕ್ಯೂರೆಟಿವ್ ಪಿಟಿಷನ್ ದಾಖಲಿಸಬಹುದಾಗಿದೆ. ಅವರು ಈ ಅರ್ಜಿ ದಾಖಲಿಸಲು ಮಾಡುತ್ತಿರುವ ವಿಳಂಬ ಶಿಕ್ಷೆಯನ್ನು ಇನ್ನಷ್ಟು ದಿನ ಮುಂದೂಡುವ ಪ್ರಯತ್ನ ಎಂದೇ ಹೇಳಬಹುದು. ಕ್ಯೂರೆಟಿವ್ ಪಿಟಿಷನ್ ಬಳಿಕ ಆರೋಪಿಗಳ ರಾಷ್ಟ್ರಪತಿ ಬಳಿ ದಯೆ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.

ಇದಕ್ಕೂ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಅಕ್ಷಯ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 18ಕ್ಕೆ ವಜಾಗೊಳಿಸಿತ್ತು. ಜನವರಿ 7ರಂದು ಈ ಪ್ರಕರಣದಲ್ಲಿ ಅಂತಿಮ ತೀರ್ಪು ಪ್ರಕಟಿಸಿದ್ದ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ, ಪ್ರಕರಣದ ಎಲ್ಲ ನಾಲ್ವರು ಆರೋಪಿಗಳ ವಿರುದ್ಧ ಡೆತ್ ವಾರೆಂಟ್ ಜಾರಿಗೊಳಿಸಿ, ಜನವರಿ 22ರಂದು ಬೆಳಗ್ಗೆ 7ಗಂಟೆಗೆ ಗಲ್ಲುಶಿಕ್ಷೆ ವಿಧಿಸಲು ಸಮಯ ನಿಗದಿಪಡಿಸಿದೆ. ನಿರ್ಭಯಾ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಡೆತ್ ವಾರೆಂಟ್ ಜಾರಿಗೊಳಿಸಿತ್ತು. ಜನವರಿ 7ರವರೆಗೆ ಸುಪ್ರೀಂ ಕೋರ್ಟ್ ನಲ್ಲಿ ಅಥವಾ ರಾಷ್ಟ್ರಪತಿಗಳ ಬಳಿ ಅಪರಾಧಿಗಳ ಯಾವುದೇ ಅರ್ಜಿ  ವಿಚಾರಣೆ ಬಾಕಿ ಇಲ್ಲವಾದ ಕಾರಣ ಟ್ರಯಲ್ ಕೋರ್ಟ್ ಕೂಡಲೇ ಅಪರಾಧಿಗಳಿಗೆ ಗಲ್ಲುಶಿಕ್ಷೆ ಕಾಯಂಗೊಳಿಸಬೇಕು ಎಂದು ತಮ್ಮ ಅರ್ಜಿಯಲ್ಲಿ ಅವರು ಕೋರಿದ್ದರು. 

Trending News