ನವದೆಹಲಿ: ರಾಜ್ಯದ ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮನುಮತಿ ನೀಡಲು ಮುಂದಾದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಖ್ಯಾತೆ ತೆಗೆದಿದ್ದು, ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಡಿ, ತಮಿಳುನಾಡಿನ ಜೊತೆ ಚರ್ಚಿಸದೆ ಯಾವುದೇ ತೀರ್ಮಾನ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರ ಬಳಿ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ದೆಹಲಿಯಲ್ಲಿಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ತಮಿಳುನಾಡು ಸಿಎಂ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಪತ್ರ ಬರೆದು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದ ಪಳನಿಸ್ವಾಮಿ ಇಂದು ದೆಹಲಿಗೆ ಆಗಮಿಸಿ ಪ್ರಧಾನಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 


ಇದೇ ವೇಳೆ ಕಾವೇರಿ ಜಲಾನಯನ ಪ್ರದೇಶದ ಅಭಿವೃದ್ಧಿಗೆ ಸಹಕರಿಸುವಂತೆ ಎಡಪ್ಪಾಡಿ ಪಳನಿಸ್ವಾಮಿ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಿದ್ದಾರೆ. ಜಲಾನಯನ ಪ್ರದೇಶದ ಅಭಿವೃದ್ಧಿಗೆ ಡಿಪಿಆರ್ ಕೂಡ ಸಿದ್ದವಾಗಿದೆ, ಹಣ ಒದಗಿಸಲು ಎಷ್ಯಾ ಡೆವೆಲಪ್ಮೆಂಟ್ ಬ್ಯಾಂಕ್ ಮುಂದೆ ಬಂದಿದೆ. ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಹಾಗಾಗಿ ಜಲಾನಯನ ಪ್ರದೇಶದ ಅಭಿವೃದ್ಧಿಗೆ ಸಹಕರಿಸಿ ಎಂದು ಪಳನಿಸ್ವಾಮಿ ಮನವಿ ಸಲ್ಲಿಸಿದ್ದಾರೆ.


ಶುಕ್ರವಾರವಷ್ಟೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ, ಸಚಿವ ರೇವಣ್ಣ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾಗಿ ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಮಾತುಕತೆ ನಡೆಸಿದ್ದರು. ಈ ವೇಳೆ ಮೇಕೆದಾಟು ಯೋಜನೆಗೆ ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ ಕಾವೇರಿ ನೀರನ್ನು ಬಳಸಿಕೊಂಡರೆ ಉಂಟಾಗುವ ಪ್ರಯೋಜನೆಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದರು. ಈ ವೇಳೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದ ಸಚಿವ ನಿತಿನ್ ಗಡ್ಕರಿ ಕರ್ನಾಟಕ ಸರ್ಕಾರಕ್ಕೆ ಎಲ್ಲ ರೀತಿಯ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ್ದರು.




ಕರ್ನಾಟಕಕ್ಕೇ ಗಡ್ಕರಿ ಸ್ಪಂದನೆ ಹಿನ್ನೆಲೆಯಲ್ಲಿ ಪಿಎಂ‌ ಮೊರೆಹೋದ ಎಡಪ್ಪಾಡಿ ಪಳನಿಸ್ವಾಮಿ ಯೋಜನೆಗೆ ಅನುಮತಿ ನೀಡಬೇಡಿ ಎಂದಿದ್ದಾರೆ.