ಹೈದರಾಬಾದ್: ತೆಲಂಗಾಣದ ರಾಜಧಾನಿಯಲ್ಲಿ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ನಿರ್ದಯವಾಗಿ ಹತ್ಯೆ ಮಾಡಲಾಗಿದ್ದ ಘಟನೆಯ 10 ದಿನಗಳ ನಂತರ ಶುಕ್ರವಾರ ರಂಗರೆಡ್ಡಿ ಜಿಲ್ಲೆಯ ಶಾದ್‌ನಗರದ ಚರ್ನಪಲ್ಲಿ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ನಡೆಸುವ ಮೂಲಕ ಹತ್ಯೆಗೈದಿದ್ದಾರೆ. ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಾಲ್ವರು ಆರೋಪಿಗಳ ಶವಗಳನ್ನು ಡಿಸೆಂಬರ್ 9 ರ ರಾತ್ರಿ 08:00 ಗಂಟೆವರೆಗೆ ರಾಜ್ಯ ಸರ್ಕಾರ ಇಟ್ಟುಕೊಳ್ಳಬೇಕು ಎಂದು ತೆಲಂಗಾಣ ಹೈಕೋರ್ಟ್ ನಿರ್ದೇಶಿಸಿದೆ. ಅಲ್ಲದೆ, ನಾಲ್ಕು ಶವಗಳ ಮರಣೋತ್ತರ ಪರೀಕ್ಷೆಯನ್ನು ಪೂರ್ಣ ವಿಡಿಯೋಗ್ರಫಿ ನೀಡುವಂತೆ ಹೈಕೋರ್ಟ್ ಕೇಳಿದೆ. ಜೊತೆಗೆ, ಇಡೀ ಎನ್‌ಕೌಂಟರ್‌ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೋರಲಾಗಿದೆ.


COMMERCIAL BREAK
SCROLL TO CONTINUE READING

ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಎನ್‌ಕೌಂಟರ್‌: ಪೊಲೀಸರು 
ಡಾಕ್ಟರ್ ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಶುಕ್ರವಾರ ಮುಂಜಾನೆ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ಆರೋಪಿಗಳು ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಅವರ ಮೇಲೆಯೇ ಗುಂಡು ಹಾರಿಸಲಾರಂಭಿಸಿದರು. ಈ ವೇಳೆ ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಹೈದರಾಬಾದ್‌ನಿಂದ 50 ಕಿ.ಮೀ ದೂರದಲ್ಲಿರುವ ಶಾದ್‌ನಗರ ನಗರದ ಚತನ್‌ಪೆಲ್ಲಿಯಲ್ಲಿ ಬೆಳಿಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ.


ನವೆಂಬರ್ 27ರಂದು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆಗೈದು ಆಕೆಯ ದೇಹವನ್ನು ದಹಿಸಿದ ಜಾಗದಲ್ಲೇ ಪೊಲೀಸರು ಈ ನಾಲ್ವರು ಆರೋಪಿಗಳನ್ನು ಮಟ್ಟಹಾಕಿದ್ದಾರೆ.


ಸಾಕ್ಷ್ಯಗಳನ್ನು ಸಂಗ್ರಹಿಸಲು ಆರೋಪಿಗಳೊಂದಿಗೆ ಸ್ಥಳಕ್ಕೆ ತಲುಪಿದ್ದ ಪೊಲೀಸರು:
ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ನಾಲ್ವರು ಆರೋಪಿಗಳನ್ನು ಸಾಕ್ಷ್ಯಗಳನ್ನು ಸಂಗ್ರಹಿಸಲು ಶುಕ್ರವಾರ ಬೆಳಗ್ಗೆ 5.45 ರ ಸುಮಾರಿಗೆ ಘಟನಾ ಸ್ಥಳಕ್ಕೆ ಕರೆತರಲಾಯಿತು. ಈ ವೇಳೆ ದಿಶಾರ ಮೊಬೈಲ್, ಡಾಟಾ ಬ್ಯಾಂಕ್ ಮತ್ತು ಅವರ ವಾಚ್ ಅನ್ನು ಎಲ್ಲಿ ಬಚ್ಚಿಟ್ಟಿದ್ದೀರಿ ಎಂದು ಆರೋಪಿಗಳನ್ನು ಕೇಳಲಾಯಿತು. ಈ ಸಂದರ್ಭದಲ್ಲಿ ಅವರು ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಮಾದಿರುವುದಾಗಿ ತಿಳಿಸಿ ಸುಮಾರು 200 ಮೀಟರ್ ದೂರಕ್ಕೆ ಕರೆದೊಯ್ಯುತ್ತಿದ್ದಂತೆ, ಅವರು ಪೊಲೀಸರ ಶಸ್ತ್ರಾಸ್ತ್ರಗಳನ್ನು ಕಿತ್ತು ಪೊಲೀಸ್ ತಂಡದ ಮೇಲೆ ಹಲ್ಲೆ ನಡೆಸಿದ ಪರಾರಿಯಾಗಲು ಯತ್ನಿಸಿದರು ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ.ಸಜ್ಜನರ್(VC Sajjanar) ತಿಳಿಸಿದ್ದಾರೆ.

ನವೆಂಬರ್ 30 ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಶಾದ್‌ನಗರ ಪೊಲೀಸ್ ಠಾಣೆ ಹೊರಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ನೂರಾರು ಜನರು ಆರೋಪಿಗಳನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಿದರು. ನಿರ್ದಯ ಅತ್ಯಾಚಾರ ಮತ್ತು ಕೊಲೆ ಕುರಿತು ದೇಶಾದ್ಯಂತ ಪ್ರತಿಭಟನೆಯ ಅಲೆಗಳು ಕೇಳಿಬಂದವು, ಅಪರಾಧಿಗಳಿಗೆ ತಕ್ಷಣ ಮರಣದಂಡನೆ ವಿಧಿಸಬೇಕು ಎಂಬ ಕೂಗು ಕೂಡ ಕೇಳಿಬರುತ್ತಿತ್ತು. ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವಂತೆ ಅನೇಕ ಜನರು ಒತ್ತಾಯಿಸಿದ್ದರು. ತೆಲಂಗಾಣ ಸರ್ಕಾರವು ಡಿಸೆಂಬರ್ 4 ರಂದು ಆರಂಭಿಕ ವಿಚಾರಣೆಗೆ ಮಹಬೂಬ್‌ನಗರದಲ್ಲಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವನ್ನು ಸ್ಥಾಪಿಸಿತ್ತು.