)
Telangana Road Accident: ಇಂದು (ನ.03) ಬೆಳಿಗ್ಗೆ ತೆಲಂಗಾಣದ ಚೆವೆಲ್ಲಾ ಸಮೀಪ ಮಿರ್ಜಗುಡ-ಖಾನಾಪುರ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಈ ದುರ್ಘಟನೆಯಲ್ಲಿ ಸುಮಾರು ಮೂರು ತಿಂಗಳ ಹೆಣ್ಣು ಮಗು ಸೇರಿದಂತೆ ಒಟ್ಟು 17 ಜನರು ಮೃತಪಟ್ಟಿರುವ ಘಟನೆ ನಡೆದಿದೆ. ತಂದೂರ್ ಡಿಪೋಗೆ ಸೇರಿದ ಈ ಬಸ್ನಲ್ಲಿ ಸುಮಾರು 70 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರ ಎಂದು ವರದಿಯಾಗಿದೆ. ಈ ಘಟನೆಯಲ್ಲಿ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪ್ರಾಥಮಿಕ ತನಿಖೆಗಳ ಪ್ರಕಾರ, ವಿಕಾರಾಬಾದ್-ಹೈದರಾಬಾದ್ ಮಾರ್ಗದಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದ ಲಾರಿಯೊಂದು (TG06T3879) ವೇಗವಾಗಿ ಬಂದು ಆರ್ಟಿಸಿ (TS 34 TA 6354) ಬಸ್ಗೆ ಡಿಕ್ಕಿ ಹೊಡೆದಿರುವ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ರಸ್ತೆ ಅಪಘಾತದ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಅವಶೇಷಗಳನ್ನೂ ತೆರವುಗೊಳಿಸಿ, ಗಾಯಾಳುಗಳನ್ನೂ ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಇನ್ನು ಎರಡು ಗಂಟೆಗೂ ಹೆಚ್ಚು ಕಾಲ ಈ ಮಾರ್ಗದಲ್ಲಿ ರಕ್ಷಣಾ ಕಾರ್ಯ ಜರುಗಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಚೆವೆಲ್ಲಾ ರಸ್ತೆ ಅಪಘಾತಕ್ಕೆ ಸಂಭವಿಸಿದಂತೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಅಪಘಾತ ಸಂಭವಿಸುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿ ಬಸ್ಸಿನಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲಾಗಿದೆ. ಮೊದಲಿಗೆ 16 ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಚೆವೆಲ್ಲಾದ ಆಸ್ಪತ್ರೆಗೆ ರವಾನಿಸಲಾಗಿದೆ. 9ಗಂಟೆ ಸುಮಾರಿಗೆ ಮತ್ತೊಂದು ಶವರನ್ನು ಹೊರತೆಗೆಯಲಾಗಿದೆ. ಘಟನೆಯಲ್ಲಿ ಇದುವರೆಗೂ ಒಟ್ಟು 17 ಜನರು ಪ್ರಾಣಕಳೆದುಕೊಂಡಿರುವುದು ದೃಢಪಟ್ಟಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ವೇಗವಾಗಿ ಚಾಲನೆ ಮಾಡಿ ಬಂದ ಲಾರಿ (TG06T3879)ಯನ್ನು ಉದಿತ್ಯ ಅನಿತಾ ಎಂಬ ಹೆಸರಿನಲ್ಲಿ ನೋಂದಾಯಿಸಲಾಗಿದ್ದು, ಈ ವಾಹನದ ಮೇಲೆ ಪ್ರವೇಶ ನಿಷೇಧ ಉಲ್ಲಂಘನೆಗಾಗಿ ₹3,270 ಮೊತ್ತದ ಎರಡು ಚಲನ್ಗಳು ಬಾಕಿ ಉಳಿದಿವೆ ಎಂದು ಮಾಹಿತಿ ಲಭ್ಯವಾಗಿವೆ.