)
ನವದೆಹಲಿ: ಭಾರತೀಯ ನಾಗರಿಕರ ಡೇಟಾ ಗೌಪ್ಯತೆ ಮತ್ತು ಹಕ್ಕುಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಬಳಕೆದಾರರ ಮಾಹಿತಿಯನ್ನು ಇತರ ಉದ್ದೇಶಗಳಿಗಾಗಿ ಹಂಚಿಕೊಳ್ಳುವುದಿಲ್ಲ ಎಂದು ಲಿಖಿತ ಅಫಿಡವಿಟ್ ಸಲ್ಲಿಸುವಂತೆ ವಾಟ್ಸಾಪ್ ಮತ್ತು ಮೆಟಾ ಸಂಸ್ಥೆಗಳಿಗೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಕಟ್ಟುನಿಟ್ಟಿನ ಆದೇಶ ನೀಡಿದೆ.
ಏನಿದು ಪ್ರಕರಣ?
ಒಟಿಟಿ ಸಂದೇಶ ಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಭಾರತೀಯ ಸ್ಪರ್ಧಾತ್ಮಕ ಆಯೋಗವು ಮೆಟಾ ಸಂಸ್ಥೆಗೆ ₹213 ಕೋಟಿ ದಂಡ ವಿಧಿಸಿತ್ತು. ಈ ದಂಡವನ್ನು ಎತ್ತಿಹಿಡಿದ ಎನ್ಸಿಎಲ್ಎಟಿ (NCLAT) ಆದೇಶವನ್ನು ಪ್ರಶ್ನಿಸಿ ಮೆಟಾ ಮತ್ತು ವಾಟ್ಸಾಪ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಕಂಪನಿಗಳ ಲಾಭಕ್ಕಿಂತ ಜನರ ಹಕ್ಕುಗಳೇ ಮಿಗಿಲು ಎಂದು ಎಚ್ಚರಿಸಿದೆ.
ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವುದಿಲ್ಲ ಎಂದು ಲಿಖಿತವಾಗಿ ಭರವಸೆ ನೀಡಲು ಕಂಪನಿಗಳು ಹಿಂದೇಟು ಹಾಕುತ್ತಿರುವುದಕ್ಕೆ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿತು. 'ನೀವು ಸ್ಪಷ್ಟವಾದ ಅಫಿಡವಿಟ್ ಸಲ್ಲಿಸದಿದ್ದರೆ, ನಿಮ್ಮ ಅರ್ಜಿಯನ್ನು ನಾವು ವಿಚಾರಣೆ ನಡೆಸದೆ ವಜಾಗೊಳಿಸುತ್ತೇವೆ' ಎಂದು ಸಿಜೆಐ ಸೂರ್ಯ ಕಾಂತ್ ಎಚ್ಚರಿಕೆ ನೀಡಿದರು. ಯಾವುದೇ ವಾಣಿಜ್ಯ ಸಂಸ್ಥೆಯು ನಾಗರಿಕರ ಹಕ್ಕುಗಳನ್ನು ಬಲಿಗೊಟ್ಟು ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ಪೀಠವು ಪುನರುಚ್ಚರಿಸಿತು.
ಇದೆ ವೇಳೆ ವಾಟ್ಸಾಪ್ನ ಗೌಪ್ಯತಾ ನೀತಿಯು ಸಾಮಾನ್ಯ ಜನರಿಗೆ ಅರ್ಥವಾಗದಷ್ಟು ಕ್ಲಿಷ್ಟಕರವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. "ಸಾಮಾನ್ಯ ವ್ಯಕ್ತಿ ಅಥವಾ ಕಡಿಮೆ ಓದಿದವರು ನಿಮ್ಮ ನೀತಿಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಒಬ್ಬ ಬಡ ವೃದ್ಧ ಮಹಿಳೆ ಅಥವಾ ರಸ್ತೆಬದಿಯ ವ್ಯಾಪಾರಿಗಳಿಗೆ ನಿಮ್ಮ ನಿಯಮಗಳು ತಿಳಿಯುತ್ತವೆಯೇ?" ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನಿಸಿದರು. ಪ್ರಾದೇಶಿಕ ಭಾಷೆಗಳನ್ನು ಬಳಸುವ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಪಾರದರ್ಶಕ ನಿಯಮಗಳು ಇರಬೇಕು ಎಂದು ಕೋರ್ಟ್ ತಿಳಿಸಿದೆ.
ವಿಚಾರಣೆಯ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, 'ಪ್ರತಿ ಬಳಕೆದಾರರ ಡೇಟಾಕ್ಕೂ ಆರ್ಥಿಕ ಮೌಲ್ಯವಿದೆ' ಎಂದು ವಾದಿಸಿದರು. ಇದನ್ನು ಬೆಂಬಲಿಸಿದ ಸುಪ್ರೀಂ ನ್ಯಾಯಪೀಠವು, ಕಂಪನಿಗಳು ಜನರ ವೈಯಕ್ತಿಕ ಮಾಹಿತಿಯನ್ನು ಜಾಹೀರಾತು ಮತ್ತು ಹಣಗಳಿಕೆಗಾಗಿ ಹೇಗೆ ಬಳಸಿಕೊಳ್ಳುತ್ತಿವೆ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿತು. ಡಿಜಿಟಲ್ ಯುಗದಲ್ಲಿ ಗೌಪ್ಯತೆಯ ಹಕ್ಕು ಮೂಲಭೂತ ಹಕ್ಕಾಗಿದ್ದು, ಕಂಪನಿಗಳು ಸಂವಿಧಾನದ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು ಎಂದು ಕೋರ್ಟ್ ಎಚ್ಚರಿಸಿದೆ.