ನವದೆಹಲಿ: ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಂಗಳವಾರದಂದು ವಿಚಾರಣೆ ವೇಳೆ ಸರ್ಕಾರಿ ಸ್ವಾಮ್ಯದ ಏರ ಇಂಡಿಯಾಗೆ ಕಿಡಿಕಾರುತ್ತಾ ನೀವೇಕೆ ವಿಮಾನಯಾನ ಸೇವೆಯನ್ನು ಬಂದ್ ಮಾಡುತ್ತಿಲ್ಲ ?ಎಂದು ಪ್ರಶ್ನಿಸಿದೆ.
ಅಲ್ಲದೆ ಮುಂದಿನ ವಿಚಾರಣೆಗೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತೆ ಹಾಜರಿರಲು ನಿರ್ದೇಶನ ನೀಡಿದೆ.ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಭೂತ ಸೌಕರ್ಯದ ಬಗ್ಗೆ ಮೊಹಾಲಿ ಇಂಡಸ್ಟ್ರೀಸ್ ಅಸೋಸಿಯೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ನ್ಯಾಯಮೂರ್ತಿ ಅರುಣ್ ಪಲ್ಲಿ ಅವರ ವಿಭಾಗೀಯ ಪೀಠವು ಈ ನಿರ್ದೇಶನಗಳನ್ನು ಅಂಗೀಕರಿಸಿತು.
ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ವಿಭಾಗೀಯ ಪೀಠವು ಚಂಡೀಗಡ -ಬ್ಯಾಂಕಾಕ್ ನಡುವಿನ ವಿಮಾನಯಾನ ಸೇವೆಯನ್ನು ಸ್ಥಗೀತಗೊಳಿಸಿರುವ ವಿಚಾರವಾಗಿ ಕೋರ್ಟ್ ಏರ್ ಇಂಡಿಯಾ ಬಳಿ ವಿವರಣೆ ಕೇಳಿದೆ. ಜುಲೈನಲ್ಲಿ ಹಝ್ ಯಾತ್ರೆಯ ಸಂದರ್ಭದಲ್ಲಿ ವಿಮಾನಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಮಾರ್ಗದ ಸೇವೆಯನ್ನು ಏರ್ ಇಂಡಿಯಾ ಸ್ಥಗೀತಗೊಳಿಸಿತ್ತು.
ಏರ್ ಇಂಡಿಯಾ ವಿವಿಧ ವಿಮಾನಯಾನ ವೇಳಾಪಟ್ಟಿಗಳ ಮಾಹಿತಿ ಮತ್ತು ವಿಮಾನದ ವಿವಿಧ ವಲಯಗಳಲ್ಲಿನ ಲಾಭದಾಯಕದ ಮಾಹಿತಿಯನ್ನು ಏರ್ ಇಂಡಿಯಾ ಸಲ್ಲಿಸಬೇಕೆಂದು ಕೋರ್ಟ್ ಕೇಳಿಕೊಂಡಿದೆ.