)
ನವದೆಹಲಿ: ಏಳನೇ ವೇತನ ಆಯೋಗವು ಡಿಸೆಂಬರ್ 31, 2025 ರಂದು ಕೊನೆಗೊಳ್ಳಲಿದೆ.ಇದು 2026 ರಲ್ಲಿ ಡಿಎ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬ ಬಗ್ಗೆ ನೌಕರರಲ್ಲಿ ಅನುಮಾನಗಳನ್ನು ಹುಟ್ಟು ಹಾಕಿರುವ ಬೆನ್ನಲ್ಲೇ ಈಗ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಕಳೆದ ಕೆಲವು ತಿಂಗಳುಗಳಿಂದ, ತುಟ್ಟಿ ಭತ್ಯೆ (ಡಿಎ) ಮತ್ತು ತುಟ್ಟಿ ಪರಿಹಾರ (ಡಿಆರ್) ಹೆಚ್ಚಳವು 2026 ರ ನಂತರ ನಿಲ್ಲುತ್ತದೆಯೇ ಅಥವಾ 8 ನೇ ವೇತನ ಆಯೋಗದಲ್ಲಿ ಸೇರಿಸಲ್ಪಡುತ್ತದೆಯೇ ಎಂಬ ಬಗ್ಗೆ ಸಂದೇಹಗಳಿದ್ದವು.ಆದರೆ ಈಗ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ತುಟ್ಟಿಭತ್ಯೆ/ಡಿಆರ್ ಎಂದಿನಂತೆ ಮುಂದುವರೆಯುತ್ತದೆ ಎಂದು ಹೇಳಿದೆ.
ಡಿಎ ಅನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಬಹುದು ಎಂದು ಸಾಮಾಜಿಕ ಮಾಧ್ಯಮ ಮತ್ತು ಕಾರ್ಮಿಕ ಸಂಘಗಳಲ್ಲಿ ವ್ಯಾಪಕ ವದಂತಿಗಳು ಹರಡಿದ್ದವು ಈ ಬೆನ್ನಲ್ಲೇ ಈಗ ಸರ್ಕಾರದ ಹೇಳಿಕೆ ಎಲ್ಲ ವದಂತಿಗಳಿಗೆ ಕೊನೆ ಹಾಡಿದೆ.ಈಗ, ನೌಕರರು ಮತ್ತು ಪಿಂಚಣಿದಾರರು 8 ನೇ ವೇತನ ಆಯೋಗವು ತಮಗೆ ಪ್ರಯೋಜನಕಾರಿಯಾದ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂಬುದರ ಕುರಿತು ಚರ್ಚಿಸುತ್ತಿದ್ದಾರೆ.
ಚಳಿಗಾಲದ ಅಧಿವೇಶನದ ಮೊದಲ ದಿನದಂದು, ಸಂಸದ ಆನಂದ್ ಭದೌರಿಯಾ ಲೋಕಸಭೆಯಲ್ಲಿ 8 ನೇ ವೇತನ ಆಯೋಗವನ್ನು ಅಧಿಕೃತವಾಗಿ ತಿಳಿಸಲಾಗಿದೆಯೇ? ಮತ್ತು ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ಸರ್ಕಾರವು ಡಿಎಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲು ಪರಿಗಣಿಸುತ್ತಿದೆಯೇ? ಎಂದು ಎರಡು ಪ್ರಶ್ನೆಗಳನ್ನು ಲೋಕಸಭೆಯಲ್ಲಿ ಕೇಳಿದ್ದರು.ಈ ವೇಳೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಇವುಗಳಿಗೆ ಉತ್ತರಿಸುತ್ತಾ ಸ್ಪಷ್ಟಪಡಿಸಿದ್ದರು.
ಈಗ ನವೆಂಬರ್ 3, 2025 ರ ಅಧಿಸೂಚನೆಯ ಪ್ರಕಾರ 8 ನೇ ವೇತನ ಆಯೋಗವನ್ನು ರಚಿಸಲಾಗಿದ್ದು ಮತ್ತು ನ್ಯಾಯಮೂರ್ತಿ ರಂಜನ್ ಪ್ರಭಾ ದೇಸಾಯಿ ಆಯೋಗದ ಅಧ್ಯಕ್ಷರಾಗಿರುತ್ತಾರೆ, ಪ್ರೊಫೆಸರ್ ಪುಲಕ್ ಘೋಷ್ ಅರೆಕಾಲಿಕ ಸದಸ್ಯರಾಗಿರುತ್ತಾರೆ ಮತ್ತು ಪಂಕಜ್ ಜೈನ್ ಸದಸ್ಯ-ಕಾರ್ಯದರ್ಶಿಯಾಗಿರುತ್ತಾರೆ. ಕೆಲವು ತಿಂಗಳುಗಳಿಂದ, 2026 ರ ನಂತರ ಡಿಎ ಮತ್ತು ಡಿಆರ್ ಹೆಚ್ಚಾಗುವುದನ್ನು ನಿಲ್ಲಿಸಬಹುದು ಮತ್ತು 8 ನೇ ವೇತನ ಆಯೋಗದೊಂದಿಗೆ ವಿಲೀನಗೊಳ್ಳಬಹುದು ಎಂಬ ಊಹಾಪೋಹಗಳು ಹರಡಿದ್ದವು, ಈ ಬೆನ್ನಲ್ಲೇ ಈಗ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಇದ್ದಂತೆ ಪ್ರತಿ ಆರು ತಿಂಗಳಿಗೊಮ್ಮೆ ಡಿಎ/ಡಿಆರ್ ಹೆಚ್ಚಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಡಿಎ/ಡಿಆರ್ ಅನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವ ಸಾಧ್ಯತೆ ಪ್ರಸ್ತುತವಿಲ್ಲ. ಅಂದರೆ, ಪ್ರಸ್ತುತ ವೇತನ ರಚನೆಯು ಹಾಗೆಯೇ ಇರುತ್ತದೆ.ಮೂಲ ವೇತನ ಹೆಚ್ಚಾಗುವುದಿಲ್ಲ, ಡಿಎ/ಡಿಆರ್ ಮಾತ್ರ ಪ್ರತಿ ಆರು ತಿಂಗಳಿಗೊಮ್ಮೆ ಶೇಕಡಾವಾರು ಹೆಚ್ಚಾಗುತ್ತದೆ. ಆದರೆ ಮೂಲ ವೇತನ ಹೆಚ್ಚಾಗದ ಕಾರಣ, ಪಿಂಚಣಿ, ಪಿಎಫ್, ಎಚ್ಆರ್ಎ, ಇತರ ಭತ್ಯೆಗಳಲ್ಲಿ ನಿಜವಾದ ಹೆಚ್ಚಳ ಇರುವುದಿಲ್ಲ. ಏಕೆಂದರೆ ಇವೆಲ್ಲವನ್ನೂ ಮೂಲ ವೇತನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.