ಬೆಂಗಳೂರು: ಇನ್ನು ಮುಂದೆ ಏರ್​ಪೋರ್ಟ್​ನಲ್ಲಿ ಗಂಟೆಗಟ್ಟಲೇ ಕಾಯಬೇಕಿಲ್ಲ, ಮುಂಬರುವ ವರ್ಷದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಲ್ಲಿ ವಿಮಾನ ಏರುವವರು ಕಂಪ್ಯೂಟರ್ ಮುಂದೆ ನಿಮ್ಮ ಮುಖ ತೋರಿಸಿ ನೇರವಾಗಿ ವಿಮಾನ ಏರಬಹುದು. ಆದರೆ, ಈ ಸೌಲಭ್ಯ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಅಲ್ಲ, ಕೇವಲ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತ್ರ ಮೊದಲಿಗೆ ಲಭ್ಯವಾಗಲಿದೆ.


COMMERCIAL BREAK
SCROLL TO CONTINUE READING

ದೇಶದಲ್ಲೇ ಮೊದಲ ಬಾರಿಗೆ 'ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್' ತಂತ್ರಜ್ಞಾನವನ್ನು ಕೆಐಎಯಲ್ಲಿ ಅಳವಡಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಕ್ಯಾನ್ ಮಾಡಲಾದ ನಿಮ್ಮ ಮುಖವನ್ನೇ ನಿಮ್ಮ ಬೋರ್ಡಿಂಗ್ ಪಾಸ್ ಆಗಿ ಮಾಡುವ ವಿನೂತನ ಯೋಜನೆಯನ್ನು ಕೆಐಎನಲ್ಲಿ ಪರಿಚಯಿಸಲಾಗುತ್ತಿದೆ. ವಿಮಾನನಿಲ್ದಾಣದ ಮೂಲಕ ತಡೆರಹಿತ ಪ್ರಯಾಣವನ್ನು ಸುಲಭಗೊಳಿಸಲು ಈ ಯೋಜನೆ ಜಾರಿಯಾಗುತ್ತಿದ್ದು  ಏರ್ ಏಷ್ಯಾ, ಜೆಟ್ ಏರ್ವೇಸ್ ಮತ್ತು ಸ್ಪೈಸ್ ಜೆಟ್  ವಿಮಾನದ ದೇಶೀಯ ಪ್ರಯಾಣಿಕರು ಪ್ರಾರಂಭದಲ್ಲಿ ಇದರ ಪ್ರಯೋಜನ ಪಡೆಯಲಿದ್ದಾರೆ.


ವಿದೇಶಿಯರ ಮುಖ ಚಹರೆಯನ್ನು ಕಿಯೋಸ್ಕ್ ಯಂತ್ರದಲ್ಲಿ ಗುರುತಿಸಿಟ್ಟುಕೊಳ್ಳಲು ಕಾನೂನಿನಲ್ಲಿ ಕೆಲವು ಅಡೆತಡೆಗಳಿದ್ದು, ಈ ಸಂಬಂಧ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು. ಅಲ್ಲಿಯವರೆಗೂ ದೇಶೀಯ ಪ್ರಯಾಣಿಕರು ಮಾತ್ರ ಈ ಸೇವೆಯ ಲಾಭ ಪಡೆಯಲಿದ್ದಾರೆ. ಭದ್ರತಾ ತಪಾಸಣೆ ಎಂದಿನಂತೆ ಮುಂದುವರೆಯಲಿದೆ ಎಂದು ನಿಲ್ದಾಣದ ಅಧಿಕಾರಿ ಹೇಳಿದ್ದಾರೆ.


ಲಿಸ್ಬನ್ ನಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ಇಂಟರ್ ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ನ ಸಿಇಒ ಹರಿ ಮಾರರ್ ಹಾಗೂ ವಿಷನ್ ಬಾಕ್ಸ್ ನ ಸಿಇಒ ಮಿಗುಯೆಲ್ ಲಿಟ್ಮನ್  ನಡುವೆ ಗುರುವಾರ ಒಪ್ಪಂದದ ಪತ್ರಕ್ಕೆ ಸಹಿ ಹಾಕಿದರು. ಈ ಒಪ್ಪಂದದಂತೆ ಎಲೆಕ್ಟ್ರಾನಿಕ್ ಐಡೆಂಟಿಟಿ ಸಿಸ್ಟಮ್ ಜಾರಿಗೆ ಬರಲಿದೆ. 


ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೋರ್ಡಿಂಗ್ ಪ್ರಕ್ರಿಯೆ ತಡವಾಗುತ್ತಿರುವ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬರುತ್ತಿವೆ. ಅದಕ್ಕೆ ಪರಿಹಾರವಾಗಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದೇವೆ. 


'ನಿಮ್ಮ ಮುಖವೇ ಬೋರ್ಡಿಂಗ್ ಪಾಸ್​' ಎಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರದ ಡಿಜಿಯಂತ್ರಾ ಯೋಜನೆಗೆ ಬೆಂಬಲವಾಗಿ ಬಯೋಮೆಟ್ರಿಕ್ ಸೆಲ್ಫ್​ ಬೋರ್ಡಿಂಗ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಇದರಿಂದಾಗಿ ವಿಮಾನ ಪ್ರಯಾಣದ ಆರಂಭದಿಂದ ಅಂತ್ಯದವರೆಗಿನ ಎಲ್ಲ ಪ್ರಕ್ರಿಯೆಗಳು ಕಾಗದರಹಿತವಾಗಿ ಡಿಜಿಟಲೀಕರಣ ಆಗಲಿವೆ. ನಿಲ್ದಾಣದಲ್ಲಿ ಪ್ರಯಾಣಿಕರು ಚಲಿಸುವಾಗಲೇ ಅವರ ಮುಖಚಹರೆಯ ಮೂಲಕ ಗುರುತಿಸಲಾಗುತ್ತದೆ. ಸದ್ಯ ನಿಲ್ದಾಣದ ಮೂರು ಕಡೆ ಬೋರ್ಡಿಂಗ್ ಪಾಸ್ ತಪಾಸಣೆ ಮಾಡಲಾಗುತ್ತದೆ. ಅದರ ಜತೆಗೆ ಭದ್ರತಾ ಸಿಬ್ಬಂದಿಯಿಂದಲೂ ಒಂದು ಬಾರಿ ತಪಾಸಣೆ ನಡೆಯುತ್ತದೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ನೂತನ ತಂತ್ರಜ್ಞಾನ ಜಾರಿಗೆ ಬಂದರೆ ಪದೇಪದೇ ದಾಖಲೆಗಳ ಪರಿಶೀಲನೆ ಇರುವುದಿಲ್ಲ. ಇದರಿಂದ ಸಮಯ ಉಳಿತಾಯವಾಗಲಿದೆ ಎಂದು ಕೆಐಎ ಸಿಇಒ ಹರಿ ಮರಾರ್ ಮಾಹಿತಿ ನೀಡಿದರು.


ನೂತನ ತಂತ್ರಜ್ಞಾನದ ಬಳಕೆ ಹೇಗೆ?


  • ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕಿಯೋಸ್ಕ್​ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಅವುಗಳ ಮೂಲಕ ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ.

  • ಪ್ರಯಾಣಿಕರು ಮೊದಲು ದ್ವಾರದ ಬಳಿ ಇರುವ ಕಿಯೋಸ್ಕ್ ಯಂತ್ರದಲ್ಲಿ ದಾಖಲೆಗಳ ಮಾಹಿತಿ ನಮೂದಿಸಬೇಕು. ಮುಖ ಹಾಗೂ ಕಣ್ಣಿನ ಗುರುತನ್ನು ಯಂತ್ರದಲ್ಲಿ ದಾಖಲಿಸಬೇಕು. ನಂತರ ನಿಲ್ದಾಣದ ಇತರ ದ್ವಾರಗಳಲ್ಲಿರುವ ಕಿಯೋಸ್ಕ್​ ಯಂತ್ರಗಳಲ್ಲಿ ಮುಖವನ್ನಷ್ಟೇ ತೋರಿಸಿ, ಸರಾಗವಾಗಿ ಮುಂದೆ ಹೋಗಬಹುದು.

  • ನಿಲ್ದಾಣದಿಂದ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಒಂದು ಬಾರಿ ನೋಂದಣಿ ಮಾಡುವುದು ಕಡ್ಡಾಯ. ಅದಾದ ನಂತರ ಜೀವನ ಪರ್ಯಂತ ಬೋರ್ಡಿಂಗ್ ಪಾಸ್ ಇಲ್ಲದೇ ನಿಲ್ದಾಣದಲ್ಲಿ ಓಡಾಡಬಹುದು.