ಹಣದುಬ್ಬರಕ್ಕೆ ಅನುಗುಣವಾಗಿ ಸಂಸದರ ಸಂಬಳ ಏರಿಕೆಯಾಗುವುದಾದರೆ,ರೈತರಿಗೇಕೆ ಅದು ಅನ್ವಯಿಸುವುದಿಲ್ಲ?- ಯೋಗೇಂದ್ರ ಯಾದವ್
ನವದೆಹಲಿ: ಫೆಬ್ರುವರಿ 1 ರಂದು ಮಂಡನೆಯಾದ ಬಜೆಟ್ ಬಗ್ಗೆ ಪ್ರತಿಕ್ರಯಿಸಿರುವ ಸ್ವರಾಜ್ ಇಂಡಿಯಾದ ನಾಯಕ ಯೋಗೇಂದ್ರ ಯಾದವ್ ಸಂಸದರು ತಮ್ಮ ಸಂಬಳವನ್ನು ಹಣದುಬ್ಬರಕ್ಕೆ ಅನುಗುಣವಾಗಿ ಏರಿಕೆ ಮಾಡುವುದಾದರೆ ಅದೇ ನಿಯಮ ರೈತರಿಗೇಕೆ ಅನ್ವಯವಾಗುವುದಿಲ್ಲ ಎಂದು ತಮ್ಮ ಟ್ವೀಟ್ ನಲ್ಲಿ ಕೇಂದ್ರ ಸರ್ಕಾರದ 2018 ರ ಬಜೆಟ್ ಬಗ್ಗೆ ಅತೃಪ್ತಿ ಹೊರಹಾಕಿದ್ದಾರೆ.
ಸಂಸತ್ ನಲ್ಲಿ ಬಜೆಟ್ ಮಂಡಿಸುವ ವೇಳೆ ಹಣಕಾಸು ಸಚಿವ ಅರುಣ ಜೈಟ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಅದು ಹಣದುಬ್ಬರಕ್ಕೆ ಅನುಗುಣವಾಗಿ ಸಂಸದರ ವೇತನವು ಹೆಚ್ಚಳವಾಗುತ್ತದೆ ಎಂದು ತಿಳಿಸಿದ್ದರು. ಈ ನಿಯಮಾವಳಿಯಿಂದಾಗಿ ಸಂಸದರ ಮೂಲ ವೇತನವು 50,000 ರೂಗಳಿಂದ 1 ಲಕ್ಷದವರೆಗೆ ಏರಿಕೆಯಾಗಲಿದೆ.ಅದೇ ರೀತಿ ರಾಷ್ಟಪತಿಯವರು 5 ಲಕ್ಷ, ಉಪ ರಾಷ್ಟ್ರಪತಿ 4, ಲಕ್ಷ ರಾಜ್ಯಪಾಲರದು 3.5 ಲಕ್ಷವಾಗಲಿದೆ. ಈ ಹಿಂದೆ ಇವರೆಲ್ಲರ ಮಾಸಿಕ ವೇತನವು ಕ್ರಮವಾಗಿ ರೂ 1.5 ಲಕ್ಷ, 1.25 ಲಕ್ಷ, 1.1 ಲಕ್ಷ ಇತ್ತು.
ಇದೆ ಸಂದರ್ಭದಲ್ಲಿ ಬಜೆಟ್ ನಲ್ಲಿ ಕೃಷಿಗೆ ಹಂಚಿಕೆಯಾಗಿರುವ ಬಜೆಟ್ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 2.38 ರಿಂದ 2.36 ಗೆ ಇಳಿಕೆಯಾಗಿದೆ ಎಂದು ಯೋಗೇಂದ್ರ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರೈತರ ರಾಬಿ ಮತ್ತು ಖಾರಿಫ್ ಬೆಳೆಗಳಿಗೆ ಯಾವುದೇ ಹೆಚ್ಚಿನ ಹಣ ನೀಡಿಲ್ಲ. ಇದೊಂದು ರೀತಿಯಲ್ಲಿ ಈ ಬಜೆಟ್ ಅದ್ದೂರಿ ಘೋಷಣೆಯನ್ನೊಳಗೊಂಡ ಯಾವುದೇ ಹಣವಿಲ್ಲದ ಪರಿಣಾಮರಹಿತ ಬಜೆಟ್ ಎಂದು ಟೀಕಿಸಿದ್ದಾರೆ.
ಇನ್ನು ಗ್ರಾಮೀಣ ಭಾಗಕ್ಕೆ ಪ್ರಾಶಸ್ತ್ಯ ನೀಡಲಾಗಿದೆ ಎಂದು ಹೇಳುವ ಕೇಂದ್ರದ ಬಜೆಟ್ ನಲ್ಲಿ ಉದ್ಯೋಗ ಖಾತ್ರಿ ಯೋಜನೆಯಾದ 'ಮನರೇಗಾ'ಗೆ ಕೇವಲ 55 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ. ಆದರೆ ವಾಸ್ತವವಾಗಿ ಮನರೇಗಾದ ಗುರಿ ತಲುಪಲು ಕನಿಷ್ಠ 80 ಸಾವಿರ ಕೋಟಿ ಹಣದ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.