ಐದು ವರ್ಷಗಳಲ್ಲಿ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ನೆರೆಯ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದೇವೆ. ನಮ್ಮ ಸೈನಿಕರು ಮತ್ತು ವಾಯು ಸೇನೆಯ ಪೈಲಟ್ ಗಳು ಧೈರ್ಯವಾಗಿ ಉಗ್ರರನ್ನು ಹೊಡೆದುರುಳಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Last Updated : Mar 9, 2019, 06:46 PM IST
ಐದು ವರ್ಷಗಳಲ್ಲಿ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ title=
Photo Courtesy: ANI

ಮಂಗಳೂರು: ಉರಿ, ಬಾಲಕೋಟ್ ಸೇರಿದಂತೆ ಭಾರತ ಗಡಿ ದಾಟಿ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಉರಿ ಮತ್ತು ಬಾಲಕೋಟ್ ಬಗ್ಗೆ ನಿಮಗೆಲ್ಲ ಗೊತ್ತಿದೆ. ಆದ್ರೆ ಮೂರನೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೇಳಲಾರೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಇಂದು ಮಂಗಳೂರಿನಲ್ಲಿ ಹೇಳಿದ್ದಾರೆ.

ನಗರದಲ್ಲಿಂದು ಏರ್ಪಡಿಸಿದ್ದ ಬಿಜೆಪಿ ಶಕ್ತಿ ಕೇಂದ್ರದ ಸಮಾವೇಶದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ನೆರೆಯ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದೇವೆ. ನಮ್ಮ ಸೈನಿಕರು ಮತ್ತು ವಾಯು ಸೇನೆಯ ಪೈಲಟ್ ಗಳು ಧೈರ್ಯವಾಗಿ ಉಗ್ರರನ್ನು ಹೊಡೆದುರುಳಿಸುತ್ತಿದ್ದಾರೆ. ಅಲ್ಲಿ ಉಗ್ರರು ಸತ್ತರೆ, ಇಲ್ಲಿಯ ಕೆಲವರಿಗೆ ನೋವಾಗುತ್ತಿದೆ. ದಾಳಿ ನಡೆಸಿದ್ದಕ್ಕೆ ಸಾಕ್ಷಿ ಬೇಕೆಂದು ಕೇಳುತ್ತಿದ್ದಾರೆಂದು ವಿಪಕ್ಷ ನಾಯಕರ ವಿರುದ್ಧ ರಾಜನಾಥ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡಿದ ಅವರು, ಭಾರತ ಇಂದು ಬದಲಾಗುತ್ತಿದೆ. 2025ರ ಹೊತ್ತಿಗೆ ಭಾರತ ಸೂಪರ್ ಪವರ್ ಆಗಲಿದೆ. ವಿಶ್ವದ ಮೂರು ಪ್ರಬಲ ರಾಷ್ಟ್ರಗಳಾದ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳಲ್ಲಿ ಒಂದನ್ನು ಹಿಂದಿಕ್ಕಲಿದೆ. ಇಡೀ ವಿಶ್ವದಲ್ಲೇ ಭಾರತ ಸೂಪರ್ ಪವರ್ ಆಗಿ ಹೊರಹೊಮ್ಮಲಿದೆ. ಇಡೀ ವಿಶ್ವದ ಆರ್ಥಿಕ ತಜ್ಞರು ಭಾರತ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆರ್ಥಿಕತೆಯಲ್ಲಿ ಭಾರತ ವಿಶ್ವದ ಮೊದಲ 10 ರಾಷ್ಟ್ರಗಳಲ್ಲಿ ಒಂದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಕಿಚಡಿ ಸರ್ಕಾರವಿದೆ. ಇದರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ರೈತರ ಸಾಲ ಮನ್ನಾ ಮಾಡುವುದಾಗಿ ನೀಡಿದ್ದ ಭರವಸೆಯನ್ನು ತ್ವರಿತವಾಗಿ ಈಡೇರಿಸುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಾಜ್ಯದ ಜನತೆಗೆ ವಿಶ್ವಾಸ ದ್ರೋಹ ಮಾಡಿದೆ ಎಂದು ಕಿಡಿಕಾರಿದರು.

Trending News