)
ರೇಷ್ಮೆ ಸೀರೆ ಉಟ್ಟು ಹಣೆಗೆ ಬೊಟ್ಟಿಟ್ಟು ಕೈ ತುಂಬಾ ಬಳೆ ತೊಟ್ಟು ತಲೆ ಬಾಗಿ ನಾಚಿ ನೀರಾಗ್ತಯಿರುವ ವಧು. ಝರಿ ಝರಿ ರೇಷ್ಣೆ ಪಂಚೆ ತಲೆಗೆ ಬಾಸಿಂಗ ತೊಟ್ಟು ತಾಳಿ ಕಟ್ಟಲು ಸಜ್ಜಾಗಿ ನಿಂತಿರುವ ವರ. ನೂತನ ವಧು ವರರಿಗೆ ಶುಭ ಕೋರುತ್ತಿರುವ ಮಠದ ಸ್ವಾಮಿಗಳು, ಶಾಸಕರು ಅಧಿಕಾರಿ ವರ್ಗ.. ತಮ್ಮ ಮಕ್ಕಳ ಮದ್ವೆನ ಕಣ್ತುಂಬಿ ಕೊಂಡು ಸಂತಸ ಪಡುತ್ತಿರುವ ಪೋಷಕ ವೃಂದ. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಗಡಿ ನಾಡು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ. ಹೌದು ಇಂದು ಬರೋಬ್ಬರಿ 93 ಜೋಡಿಗಳಿಗೆ ಕಂಕಣ ಭಾಗ್ಯ ಕೂಡಿ ಬಂದಿತ್ತು. ಮಲೆ ಮಹದೇಶ್ವರ ಪ್ರಾಧಿಕಾರದಿಂದ ನಡೆಸಿದ ಉಚಿತ ಸಾಮೂಹಿಕ ವಿವಾಹದಲ್ಲಿ ಜಿಲ್ಲೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ 93 ಜೋಡಿಗಳು ಆಗಮಿಸಿ ತಮ್ಮ ಹೊಸ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇನ್ನು ವಿಶೇಷ ಅಂದ್ರೆ 16 ಅಂತರ್ಜಾತಿ ವಿವಾಹ ನಡೆದರೆ ಒಬ್ಬ ವಿಶೇಷ ಚೇತನನ್ನ ಯುವತಿಯನ್ನು ಪ್ರೀತಿಸಿ ಕುಟುಂಬಸ್ಥರನ್ನೊಪ್ಪಿಸಿ ಮದ್ವೆಯಾಗಿದ್ದಾರೆ.
ಇದನ್ನೂ ಓದಿ : ಮೀಸಲಾತಿ ವರ್ಗಕ್ಕೆ ಬೋವಿ, ಲಂಬಾಣಿ, ಬಲಗೈ ವಿರೋಧ
ಚಾ.ನಗರ ಜಿಲ್ಲೆಯಿಂದ 55, ಮೈಸೂರಿನಿಂದ 13, ಮಂಡ್ಯದಿಂದ 9 ಬೆಂಗಳೂರು ದಕ್ಷಿಣದಿಂದ 2, ರಾಮನಗರ ಜಿಲ್ಲೆಯಿಂದ 2, ತಮಿಳುನಾಡಿನಿಂದ 5 ಜೋಡಿಗಳು ಸೇರಿದಂತೆ ವಿಜಯಪುರ, ಶಿವಮೊಗ್ಗ, ಕೊಡಗು ಹಾಗೂ ಇನ್ನಿತರ ಜಿಲ್ಲೆಗಳಿಂದ ಒಟ್ಟು 93 ಜೋಡಿಗಳು ನವಜೀವನಕ್ಕೆ ಕಾಲಿಟ್ಟರು. ಇದರಲ್ಲಿ 16 ಜೋಡಿ ಅಂತರ್ಜಾತಿ ವಿವಾಹವಾಗಿದ್ದು ಓರ್ವ ಯುವತಿ ವಿಶೇಷ ಚೇತನ ವ್ಯಕ್ತಿಯನ್ನು ವರಿಸಿದ್ದಾರೆ. ಮಾದಪ್ಪನ ದೇಗುಲ ಮುಂಭಾಗದ ರಂಗಮಂದಿರಲ್ಲಿ ಸೋಮವಾರ ಬೆಳಗ್ಗೆ 9.20 ರಿಂದ 10.10 ರೊಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಮಾಂಗಲ್ಯ ಧಾರಣೆ ನೆರವೇರಿತು. ವಧುವಿಗೆ ಚಿನ್ನದ ತಾಳಿ, ಬೆಳ್ಳಿ ಕಾಲುಂಗುರ, ಸೀರೆ, ರವಿಕೆ ಹಾಗೂ ವರನಿಗೆ ಪಂಚೆ, ಷರ್ಟ್, ಶಲ್ಯ ಹಾಗೂ ಪೇಟವನ್ನು ಪ್ರಾಧಿಕಾರದಿಂದ ಉಚಿತವಾಗಿ ನೀಡಲಾಯ್ತು.
1989 ರಿಂದ ಸಾಮೂಹಿಕ ವಿವಾಹ ನಡೆಯುತ್ತಲೇ ಬಂದಿದೆ. ಈ ಹಿಂದೆ ಬಡವರು ಹಾಗೂ ಸಾಮಾನ್ಯ ವರ್ಗದವರು ಬೆಟ್ಟಕ್ಕೆ ಆಗಮಿಸಿ ಸರಳವಾಗಿ ವಿವಾಹವಾಗುತ್ತಿದ್ದರು. ಈ ಸರಳ ವಿವಾಹ ಇತರರಿಗೂ ಉತ್ತಮ ಕಾರ್ಯ ಎಂದೆನಿಸುತ್ತಿತ್ತು. ಇದನ್ನು ಮನಗಂಡ ಅಂದಿನ ಶ್ರೀ ಮಹದೇಶ್ವರ ಸ್ವಾಮಿ ಆಡಳಿತ ಮಂಡಳಿ ಸರಳ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 1989ರಿಂದ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಿಕೊಂಡು ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾದಪ್ಪನ ಬೀಡಲ್ಲಿ ಕಂಕಣ ಭಾಗ್ಯ ಕೂಡಿ ಬರುತ್ತಿರುವುದಕ್ಕೆ ಪ್ರಾಧಿಕಾರ ಪ್ರತಿ ವರ್ಷವೂ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದ ಬಡವರಿಗೆ, ಹಿಂದುಳಿದವರಿಗೆ ವರದಾನವಾಗಿದೆ. 2007ರಲ್ಲಿನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ 101 ಜೋಡಿಗಳು ಭಾಗಿಯಾಗುವುದರ ಮೂಲಕ ದಾಖಲೆ ನಿರ್ಮಿಸಿತ್ತು. ಒಟ್ಟು ಇಲ್ಲಿಯವರೆಗೆ 2074 ಜೋಡಿಗಳು ಮಾದಪ್ಪನ ಸನ್ನಿಧಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಸಂಸಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ೯೩ ನವಜೋಡಿಗಳು