)
Hassan District Hospital: ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮಹಾ ಎಡವಟ್ಟೊಂದು ನಡೆದಿದೆ. ಮಹಿಳೆಯ ಎಡಗಾಲಿಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ವೈದ್ಯನೊಬ್ಬ ಆಕೆಯ ಬಲಗಾಲು ಕೊಯ್ದಿರುವ ಘಟನೆ ನಡೆದಿದೆ. ಹೌದು, ಹಿಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಶಸ್ತ್ರಚಿಕಿತ್ಸಕ ಡಾ.ಸಂತೋಷ್ ವಿರುದ್ಧ ಗಂಭೀರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಎಡಗಾಲಿನಲ್ಲಿ ಅಳವಡಿಸಿದ್ದ ರಾಡ್ ತೆಗೆಯಲು ಹೋಗಿ ಬಲಗಾಲು ಕೊಯ್ದು ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯ ವೈದ್ಯನ ಮಹಾ ಎಡವಟ್ಟಿನಿಂದ ಇದೀಗ ಮಹಿಳೆ ನಡೆಯಲಾಗದೆ ಹಾಸಿಗೆ ಹಿಡಿದಿದ್ದಾಳೆ.
ಇದನ್ನೂ ಓದಿ: ಸಂಸದರ ಪತ್ನಿಗೆ ಸೈಬರ್ ವಂಚಕರ ಕಾಟ..!
ಎರಡೂವರೆ ವರ್ಷದ ಹಿಂದೆ ನಡೆದ ಅಪಘಾತದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬೂಚನಹಳ್ಳಿ ಕಾವಲು ಗ್ರಾಮದ ಜ್ಯೋತಿ ಎಂಬುವರು ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತದ ವೇಳೆ ಪೆಟ್ಟಾಗಿದ್ದರಿಂದ ಎಡಗಾಲಿಗೆ ರಾಡ್ ಅಳವಡಿಸಲಾಗಿತ್ತು. ಇತ್ತೀಚಿಗೆ ಕಾಲಿಗೆ ಅಳವಡಿಸಿದ್ದ ರಾಡ್ನಿಂದ ಜ್ಯೋತಿಯವರಿಗೆ ಕಾಲುನೋವು ಕಾಣಿಸಿಕೊಂಡಿತ್ತು.
ಬಳಿಕ ಹಿಮ್ಸ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಸಂತೋಷ್ ಬಳಿ ಜ್ಯೋತಿಯವರು ತಮ್ಮ ಕಾಲು ತೋರಿಸಿದ್ದರು. ಈ ವೇಳೆ ರಾಡ್ ತೆಗೆಸುವಂತೆ ಅವರು ಸೂಚಿಸಿದ್ದರು. ಅದರಂತೆ ಸೋಮವಾರ ನಡೆದ ಶಸ್ತ್ರ ಚಿಕಿತ್ಸೆ ವೇಳೆ ಜ್ಯೋತಿಯವರ ಎಡಗಾಲಿನ ಬದಲು ಡಾ.ಸಂತೋಷ್ ಬಲಗಾಲು ಕೊಯ್ದು ಎಡವಟ್ಟು ಮಾಡಿದ್ದಾನೆ. ಕಡೆಗೆ ತನ್ನ ತಪ್ಪಿನ ಅರಿವಾಗಿ ಎಡಗಾಲಿಗೆ ಅಳವಡಿಸಿದ್ದ ರಾಡ್ ತೆಗೆಯಲಾಗಿದೆ. ಜ್ಯೋತಿಯವರ ಎರಡೂ ಕಾಲಿಗೂ ಬ್ಯಾಂಡೇಜ್ ಸುತ್ತಲಾಗಿದೆ.
ಇದನ್ನೂ ಓದಿ: ಗೋಮಾಂಸ ಸಾಗಾಟ.. ಲಾರಿಗೆ ಬೆಂಕಿ
ಎರಡೂ ಕಾಲುಗಳಿಗೆ ಗಾಯಗಳಾಗಿ ಓಡಾಡಲು ಸಾಧ್ಯವಾಗದೆ ಜ್ಯೋತಿ ಹಾಸಿಗೆ ಹಿಡಿದಿದ್ದಾರೆ. ಶಸ್ತ್ರಚಿಕಿತ್ಸೆಗೆಂದು ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ಜ್ಯೋತಿ ಇನ್ನೂ ಸಹ ಹಿಮ್ಸ್ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ವೈದ್ಯರ ನಿರ್ಲಕ್ಷ್ಯತನದ ವಿರುದ್ಧ ಜ್ಯೋತಿ ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯತನದಿಂದ ಜ್ಯೋತಿ ಮತ್ತು ಕುಟುಂಬಸ್ಥರು ಕಣ್ಣೀರಿಡುವಂತಾಗಿದೆ. ಹೀಗಾಗಿ ಸೂಕ್ತ ಪರಿಹಾರ ನೀಡುವಂತೆ ಜ್ಯೋತಿ ಪೋಷಕರು ಒತ್ತಾಯಿಸಿದ್ದಾರೆ.