Dharmasthala: ಧರ್ಮಸ್ಥಳದಲ್ಲಿ ನಡೆದ ಶವ ಹೂಳಿಟ್ಟ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿರುವಾಗ, ಇದೀಗ ದಕ್ಷಿಣ ಭಾರತದ ಮತ್ತೊಂದು ವಿವಾದಿತ ಧಾರ್ಮಿಕ ಸ್ಥಳದಲ್ಲಿ ಹೊಸ ಹೋರಾಟದ ಲಕ್ಷಣಗಳು ಗೋಚರಿಸುತ್ತಿವೆ.

Dharmasthala: ಧರ್ಮಸ್ಥಳದಲ್ಲಿ ನಡೆದ ಶವ ಹೂಳಿಟ್ಟ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿರುವಾಗ, ಇದೀಗ ದಕ್ಷಿಣ ಭಾರತದ ಮತ್ತೊಂದು ವಿವಾದಿತ ಧಾರ್ಮಿಕ ಸ್ಥಳದಲ್ಲಿ ಹೊಸ ಹೋರಾಟದ ಲಕ್ಷಣಗಳು ಗೋಚರಿಸುತ್ತಿವೆ. ಕಾಫಿನಾಡಿನ ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಬುಡನ್ ಸ್ವಾಮಿ ದರ್ಗಾದಲ್ಲಿ ಇರುವ ಘೋರಿಗಳ ಕುರಿತು ಹಿಂದೂ ಹಿತರಕ್ಷಣಾ ಸಮಿತಿ ಹೊಸ ಬೇಡಿಕೆ ಮುಂದಿಟ್ಟಿದೆ.
ವಿಶ್ವ ಹಿಂದೂ ಪರಿಷತ್ ಮುಖಂಡ ರಘು ಸಕಲೇಶಪುರ ಅವರ ನೇತೃತ್ವದಲ್ಲಿ ಜಿಲ್ಲೆಯ ಡಿಸಿಗೆ ಕಳುಹಿಸಿರುವ ಮನವಿಯಲ್ಲಿ, ದರ್ಗಾ ಪ್ರದೇಶದಲ್ಲಿ ಇರುವ ಅಕ್ರಮ ಘೋರಿಗಳನ್ನು ಉತ್ಖನನ ಮಾಡಿ, ಅವು ಯಾರದ್ದು ಎಂಬುದನ್ನು ಪತ್ತೆಹಚ್ಚುವಂತೆ ಆಗ್ರಹಿಸಲಾಗಿದೆ. ಈ ಕಾರ್ಯಕ್ಕೆ ವಿಶೇಷ ತನಿಖಾ ದಳ (ಎಸ್ಐಟಿ) ನೇಮಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
27 ಘೋರಿಗಳ ಉತ್ಖನನಕ್ಕೆ ಒತ್ತಾಯ
ಐ.ಡಿ ಪೀಠ ವ್ಯಾಪ್ತಿಯ ಗುಹೆಯ ಸಮೀಪದಲ್ಲಿಯೇ ಸುಮಾರು 27 ಘೋರಿಗಳಿವೆ ಎಂದು ಸ್ಥಳೀಯ ಮುಖಂಡರು ಹೇಳಿದ್ದಾರೆ. ಈ ಘೋರಿಗಳಿಗೆ ಹಾನಿ ಮಾಡದೇ, ವಿಜ್ಞಾನಾಧಾರಿತ ರೀತಿಯಲ್ಲಿ ಉತ್ಖನನ ನಡೆಸಿ, ಧರ್ಮಸ್ಥಳದಲ್ಲಿ ನಡೆದಂತೆ ಜಿಪಿಆರ್ ತಂತ್ರಜ್ಞಾನ ಬಳಸಿ ತನಿಖೆ ನಡೆಸಬೇಕೆಂದು ಅವರು ಬೇಡಿಕೆ ಇಟ್ಟಿದ್ದಾರೆ. ಔದಂಬರ ವೃಕ್ಷ ಹಾಗೂ ಸುತ್ತಮುತ್ತಲಿನ ಘೋರಿಗಳ ಉತ್ಖನನ ಕೂಡ ಈ ಬೇಡಿಕೆಯ ಭಾಗವಾಗಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಯುಡಿಆರ್ ಹಾಗೂ ಎಫ್ಐಆರ್, ಜೊತೆಗೆ ಗ್ರಾಮ ಪಂಚಾಯತಿ ದಾಖಲಾತಿಗಳ ಆಧಾರದ ಮೇಲೆ ಎಸ್ಐಟಿ ತನಿಖೆ ನಡೆಯಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. “ಅಲ್ಲಿರುವದು ಯಾರದ್ದು ಎಂಬುದನ್ನು ಬಹಿರಂಗಪಡಿಸಬೇಕು” ಎಂದು ರಘು ಸಕಲೇಶಪುರ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳುವ ಲಕ್ಷಣ
ಈ ಮನವಿಯನ್ನು ರಿಜಿಸ್ಟರ್ ಪೋಸ್ಟ್ ಮೂಲಕ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಇನ್ನು ಮೂರು-ನಾಲ್ಕು ತಿಂಗಳಲ್ಲಿ ದತ್ತಜಯಂತಿ ಹಾಗೂ ದತ್ತಮಾಲೆಗಳ ಅಭಿಯಾನ ಪ್ರಾರಂಭವಾಗಲಿದ್ದು, ಈ ವಿಚಾರವೇ ಮುಂದಿನ ಹೋರಾಟದ ಪ್ರಮುಖ ಅಜೆಂಡಾ ಆಗುವ ಸಾಧ್ಯತೆಯಿದೆ.
ನಾಲ್ಕು ದಶಕಗಳಿಂದ ವಿವಾದಿತವಾಗಿರುವ ಈ ಸ್ಥಳದಲ್ಲಿ, ಇದೀಗ ಮತ್ತೊಂದು ವಿವಾದದ ಕಿಡಿ ಹತ್ತುವ ಸೂಚನೆಗಳು ಕಾಣಿಸುತ್ತಿವೆ. ಧರ್ಮಸ್ಥಳದ ಪ್ರಕರಣದಂತೆ, ಐ.ಡಿ ಪೀಠದಲ್ಲಿಯೂ ರಾಜಕೀಯ-ಧಾರ್ಮಿಕ ಸಂಘರ್ಷ ಉಂಟಾಗುವ ಆತಂಕ ವ್ಯಕ್ತವಾಗುತ್ತಿದೆ.