)
ಬೆಂಗಳೂರು: ರಾಜ್ಯಾದ್ಯಂತ ಕೃಷಿ ಜಾರಿದಳ ಚುರುಕುಗೊಳಿಸಲಾಗಿದ್ದು, ರಸಗೊಬ್ಬರ, ಕೀಟನಾಶಕಗಳ ಅನಧಿಕೃತ ದಾಸ್ತಾನು, ಸಾಗಾಟಗಳ ಮೇಲೆ ಕಣ್ಗಾವಲು ಇರಿಸಲಾಗಿದ್ದು, ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಗುಂಡ್ಲುಪೇಟೆ ಬಳಿ ಕೇರಳಕ್ಕೆ ಸಾಗಿಸುತ್ತಿದ್ದ, ಯೂರಿಯಾ ತುಂಬಿದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದ್ದು ಇದಲ್ಲದೇ ಹಲವು ಅಕ್ರಮಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ.
ಈ ಬೆನ್ನಲ್ಲೇ ಎಲ್ಲಾ ಗಡಿಗಳಲ್ಲಿ ಹೆಚ್ಚಿನ ಕಟ್ಟೆಚ್ಚರಕ್ಕೆ ವಹಿಸುವಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಯೂರಿಯಾ ಗೊಬ್ಬರದ ಕೃತಕ ಅಭಾವ ಉಂಟಾದ ಹಿನ್ನಲೆಯಲ್ಲಿ ಕೃಷಿ ಜಾಗೃತ ದಳ ಹಾಗೂ ಕೃಷಿ ಇಲಾಖೆಯ ಇತರೆ ಅಧಿಕಾರಿಗಳು ಇನ್ನಷ್ಟು ಕಟ್ಟೆಚ್ಚರ ವಹಿಸಲು ಸೂಚಿಸಿರುವ ಅವರು ಪ್ರತಿಯೊಂದು ದಾಸ್ತಾನು ಕೇಂದ್ರಗಳನ್ನು ತಪಾಸಣೆ ನಡೆಸಲು ನಿರ್ದೇಶನ ನೀಡಿದ್ದಾರೆ. ಗಡಿ ಭಾಗದಲ್ಲಿ ಸಂಚರಿಸುವ ಎಲ್ಲಾ ಸರಕು ಸಾಗಣೆ ವಾಹನಗಳ ಮೇಲೆ ವಿಶೇಷ ಕಣ್ಗಾವಲು ವಹಿಸಿ ತಪಾಸಣೆ ನಡೆಸಲು ತಿಳಿಸಿದ್ದಾರೆ.
ರಾಜ್ಯದ ಒಳಗೂ, ಲಾರಿಗಳು ಹಾಗೂ ಗೂಡ್ಸ್ ವಾಹನಗಳ ತಪಾಸಣೆ ನಡೆಸಿ ಅನಧಿಕೃತ ಅಕ್ರಮ ಸಾಗಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಇತರೆ ಪ್ರಕರಣಗಳ ವಿವರ:
ಇದೇ ಜು.18 ರಂದು ನಂಜನಗೂಡು ತಾಲ್ಲೂಕಿನ ಕೈಗಾರಿಕ ಪ್ರದೇಶದಲ್ಲಿರುವ ಶ್ರೀಇಂಡಸ್ಟ್ರೀಸ್, ಕೀಟನಾಶಕ ಉತ್ಪಾದನ ಘಟಕದಲ್ಲಿ ಅನಧಿಕೃತವಾಗಿ ಉತ್ಪಾದಿಸುತ್ತಿದ್ದ 170.50 ಲೀಟರ್ Profenophos 50% EC ಕೀಟನಾಶಕವನ್ನು ಜಪ್ತು ಮಾಡಲಾಗಿದೆ.
ಜು.23 ರಂದು ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೆಕೆರೆ ಗ್ರಾಮದಿಂದ ಅನಧಿಕೃತವಾಗಿ ಸಾಗಿಸುತ್ತಿದ್ದ ಎಂ.ಎಫ್.ಎಲ್ ಕಂಪನಿಯ 100 ಚೀಲ ಯೂರಿಯಾ ಗೊಬ್ಬರವನ್ನು ಚನ್ನರಾಯಪಟ್ಟಣ ಟೌನ್ ಬಳಿ ಹಿಡಿದು, ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಮುಂದಿನ ಕ್ರಮವಹಿಸಲು ಸಹಾಯಕ ಕೃಷಿ ನಿರ್ದೇಶಕರು, ಚನ್ನರಾಯಪಟ್ಟಣರವರಿಗೆ ತಿಳಿಸಲಾಗಿದೆ.
ಜು.25 ರಂದು ಶ್ರೀ ಚಾಮುಂಡೇಶ್ವರಿ ಟ್ರೇರ್ಸ್ ಮತ್ತು ಗ್ರೀನ್ ವೇ ಎಂಟರ್ ಪ್ರೆಸಸ್, ಬನ್ನೂರು, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ, ಇಲ್ಲಿ ರಸಗೊಬ್ಬರ ನಿಯಂತ್ರಣ (ನಿರವಯವ, ಸಾವಯವ ಅಥವಾ ಮಿಶ್ರಣ)ಆದೇಶ-1985ನ್ನು ಉಲ್ಲಂಘಿಸಿ ದಾಸ್ತಾನಿಕರಿಸಿ, ಮಾರಾಟ ಮಾಡುತ್ತಿದ್ದ ಬಯೋ ಸ್ಟಿಮ್ಯೂಲೆಂಟ್ಸ್ ಗಳಾದ GROW-R - 100 ಲೀಟರ್, ABDA GOlD – 1600 ಕೆ.ಜಿ, ZYME GOLD -500 ಕೆ.ಜಿ, SAGARIKa- 50 ಲೀಟರ್, SIVARIKA- -7000 ಕೆ.ಜಿ ಸೇರಿದಂತೆ ಒಟ್ಟು ರೂ -5,29,900/- ಮೌಲ್ಯದ ಬಯೋಸ್ಟಿಮ್ಯೂಲೆಂಟ್ಸ್ ಗಳನ್ನು ಜಪ್ತು ಮಾಡಲಾಗಿದೆ.
ಗೃಹ ಬಳಕೆ ಕೀಟನಾಶಕ ತಯಾರಕ ಸಂಸ್ಥೆಯ ಮೇಲೆ ಜಾಗೃತಕೋಶ, ಸಚಿವಾಲಯ ವಿಭಾಗದ ಅಪರ ಕೃಷಿ ನಿರ್ದೇಶಕ ಹೆಚ್ಎಸ್ .ದೇವರಾಜು ಹಾಗೂ ಅವರ ತಂಡದ ಅಧಿಕಾರಿಗಳು ದಾಳಿ ನಡೆಸಿ ಕೀಟನಾಶಕ ಮಾರಾಟ ಪರವಾನಗಿ ಇಲ್ಲದೇ ತಯಾರಿಸಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದನ್ನು ಪತ್ತೆ ಹಚ್ಚಿ ವಶಪಡಿಸಿ ಕೊಂಡಿರುತ್ತಾರೆ.
ಬೆಂಗಳೂರು ನಗರಜಿಲ್ಲೆಯ ಸುಂಕದಕಟ್ಟೆಯಲ್ಲಿ ಮೆ||ಮುಕುಂದ್ ಇಂಡಸ್ಟ್ರೀಸ್ ಗೃಹ ಬಳಕೆ ಕೀಟನಾಶಕ ತಯಾರಿಕಾ ಘಟಕದಲ್ಲಿ ಕೀಟನಾಶಕ ಮಾರಾಟ ಪರವಾನಗಿಯನ್ನು ಪಡೆಯದೇ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಾಗೃತ ಕೋಶ, ಸಚಿವಾಲಯ ವಿಭಾಗದ ಅಪರ ಕೃಷಿ ನಿರ್ದೇಶಕ ಹೆಚ್.ಎಸ್ ದೇವರಾಜು, ಜಂಟಿ ಕೃಷಿ ನಿರ್ದೇಶಕ ಶ್ರೀವಿದ್ಯಾನಂದ, ಉಪ ಕೃಷಿ ನಿರ್ದೇಶಕ ಅಶೋಕ್ ಅವರು ತಂಡದೊಂದಿಗೆ ದಾಳಿ ನಡೆಸಿ 50 ಸಾವಿರ ಮೌಲ್ಯದ 133.70 ಕೆ.ಜಿ ಗೃಹಬಳಕೆ ಕೀಟನಾಶಕವನ್ನು ವಶಕ್ಕೆ ಪಡೆದು ಜಪ್ತುಮಾಡಲಾಗಿದೆ.