ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ರಾಷ್ಟ್ರೀಯ ಪಕ್ಷಗಳ ನಾಯಕರ ರಾಜ್ಯ ಪ್ರವಾಸ ಎಲ್ಲರ ಗಮನ ಸೆಳೆಯುತ್ತಿದೆ. ಒಂದು ಕಡೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾಗಿನೆಲೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಹಾಗೂ ಬಾದಾಮಿಯ ಶಿವಯೋಗಿ ಮಂದಿರದಲ್ಲಿ ಸಂತರ ಜತೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಯಡಿಯೂರಪ್ಪ ತವರಲ್ಲಿಂದು ಕಾಂಗ್ರೆಸ್ ನಾಯಕರ ಪರ ಪ್ರಚಾರ ನಡೆಸಲಿದ್ದಾರೆ.
ಇಂದು ಬೆಳಿಗ್ಗೆ 11.55ಕ್ಕೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಂತರ 12.10ಕ್ಕೆ ಶಿವಮೊಗ್ಗ ಬಾಲರಾಜ್ ಅರಸು ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಟ್ಟಡ ಉದ್ಘಾಟಿಸಿ, 12.35ಕ್ಕೆ ಅಶೋಕ ವೃತ್ತದಿಂದ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಗೋಪಿ ವೃತ್ತದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿರುವ ರಾಹುಲ್, ಅಲ್ಲಿಂದ ದಾವಣಗೆರೆ ಜಿಲ್ಲೆಯ ಮೂಲಕ ಹೊನ್ನಾಳಿಗೆ ತೆರಳಲಿದ್ದಾರೆ.
ಶಿವಮೊಗ್ಗ ಜಿಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ಯಡಿಯೂರಪ್ಪರ ತವರು ಜಿಲ್ಲೆಯಾಗಿರುವುದರಿಂದ ರಾಹುಲ್ ಗಾಂಧಿಯವರ ಶಿವಮೊಗ್ಗ ಪ್ರವಾಸ ವಿಶೇಷವಾಗಿದೆ.
ಏಪ್ರಿಲ್ 3 ಮತ್ತು ಏಪ್ರಿಲ್ 4ರಂದು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿರುವ ರಾಹುಲ್, ಈ ಸಮಯದಲ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ ಬ್ಲಾಕ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರ ಸಭೆ, ಸಾರ್ವಜನಿಕ ಸಭೆ ಮತ್ತು ರೋಡ್ ಶೋ ಗಳಲ್ಲೂ ಪಾಲ್ಗೊಳ್ಳಲಿದ್ದಾರೆ.
ಮುಂಬೈ ಕರ್ನಾಟಕ ಭಾಗಗಳಾದ ಬೆಳಗಾವಿ, ಬಾಗಲಕೋಟೆ, ಹಾವೇರಿಯಲ್ಲಿ ಸೋಮವಾರ ಮತ್ತು ಮಂಗಳವಾರ ನಿಗದಿ ಪಡಿಸಲಾಗಿದ್ದ ಅಮಿತ್ ಷಾ ಪ್ರವಾಸವನ್ನು ಏಪ್ರಿಲ್ 12 ಮತ್ತು 13ಕ್ಕೆ ಮುಂದೂಡಲಾಗಿದೆ.