)
ಆಕೆ ಆ ಮನೆಯ ಮುದ್ದಿನ ಮಗಳು, ಆಕೆಯ ಆಟ ಮುದ್ದಾಟ, ತುಂಟ ತನದಿಂದ ಇಡೀ ಮನೆ ನಂದಗೋಕುಲವಾಗಿತ್ತು. ಆದರೆ ಆ ಪುಟ್ಟ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿ ಮಗುವನ್ನೇ ಬಲಿ ತೆಗೆದುಕೊಂಡಿದೆ. ಸ್ವರ್ಗದಂತಿದ್ದ ಮನೆಯನ್ನು ನರಕ ಮಾಡಿ ಬಿಟ್ಟಿದೆ.
ದಾವಣಗೆರೆ ನಗರದ ಶಾಸ್ತ್ರಿ ಲೇಔಟ್ ನ ಮೊಹಮ್ಮದ್ ಶಾಕೀರ್ ಆಲಿ, ಅತೀಹಾ ಖಾನಂ ದಂಪತಿಯ ಪುತ್ರಿ ಖದೀರಾ ಬಾನುಗೆ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಕಳೆದ ನಾಲ್ಕು ತಿಂಗಳ ಹಿಂದೆ ಬೀದಿಯಲ್ಲಿ ಓಡಾಡುತ್ತಿದ್ದ ನಾಯಿಯೊಂದು ಮನೆಯ ಒಳಗಡೆ ನುಗ್ಗಿ ಏಕಾಏಕಿ ಬಂದು ದಾಳಿ ಮಾಡಿತ್ತು. ತಕ್ಷಣಕ್ಕೆ ಮಗುವಿಗೆ ದಾವಣಗೆರೆ ಸೇರಿದಂತೆ ಹಲವು ಕಡೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅದಾಗಲೇ ಬಾಲಕಿಗೆ ಇನ್ ಫೆಕ್ಶನ್ ಆಗಿ ರೇಬಿಸ್ ಖಾಯಿಲೆ ತಗುಲಿದೆ.
ಇದನ್ನೂ ಓದಿ : ಕೃಷ್ಣಾ ನದಿ ನಡುಗಡ್ಡೆಯಲ್ಲಿ ಸಿಲುಕಿದ 40 ಕುಟುಂಬಗಳು
ಈ ಕಾರಣಕ್ಕೆ ಆ ಮಗುವನ್ನ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಕಳೆದ ನಾಲ್ಕು ತಿಂಗಳಿನಿಂದ ಚಿಕಿತ್ಸೆ ಕೊಡಿಸುತ್ತಿದ್ದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನಲ್ಲಿ ಬಾಲಕಿ ಮೃತ ಪಟ್ಟಿದ್ದಾಳೆ. ಇದರಿಂದ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರಾದ ಹಜರತ್ ಆಲಿ "ಇಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮನೆಯಿಂದ ಹೊರಬರಲು ಆಗಲ್ಲ, ಅಷ್ಟು ನಾಯಿಗಳು ಇರುತ್ತವೆ. ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಮಗುವಿಗೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ. ಇದೀಗ ಹಣನೂ ಇಲ್ಲ ಮಗುನೂ ಇಲ್ಲ ಎಂಬ ಪರಿಸ್ಥಿತಿ ಪೋಷಕರದ್ದಾಗಿದೆ. ಸರ್ಕಾರದಿಂದ ಪರಿಹಾರ ಕೊಡಿಸಬೇಕು, ಬೀದಿ ನಾಯಿ ಉಪಟಳಕ್ಕೆ ಕಡಿವಾಣ ಹಾಕಬೇಕು. ಇನ್ನು ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಿ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದರೂ ದಾವಣಗೆರೆಯಲ್ಲಿ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಇಂದು ಎಂಟನೇ ದಿನದ ವಿಧಾನಸಭೆ ಅಧಿವೇಶನ
ಒಟ್ಟಾರೆಯಾಗಿ ಬೀದಿ ನಾಯಿಗಳ ಹಾವಳಿಗೆ ಮುದ್ದು ಕಂದಮ್ಮ ಬಲಿಯಾಗಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಕ್ರಮವಹಿಸಬೇಕು. ಈ ರೀತಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು.