)
Bagalkote: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಮುಂದುವರೆದಿರುವ ಹಿನ್ನೆಲೆಯಲ್ಲಿ, ಸಾಮಾನ್ಯ ಪ್ರಯಾಣಿಕರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಬಾಗಲಕೋಟೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾತ್ರ ಕೆಲ ಬಸ್ಗಳ ಸಂಚಾರ ಅನುಮತಿಸಲಾಗಿದೆ.
ಬಾಗಲಕೋಟೆ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಇಂದಿನ ಬೆಳಿಗ್ಗೆ ಕೆಲವು ಬಸ್ಗಳು ವಿದ್ಯಾರ್ಥಿಗಳನ್ನು ಪಿಕಪ್ ಮಾಡಲು ಹೊರಟಿದ್ದು, ಗಂಜಿಹಾಳ, ಸೋಕನಾದಾಗಿ ಸೇರಿ ಇತರ ಹತ್ತಿರದ ಗ್ರಾಮಗಳ ಕಡೆಗೆ ಬಸ್ಗಳು ತೆರಳಿದವು. ಈ ಬಸ್ಗಳಲ್ಲಿ ಸಾಮಾನ್ಯ ಪ್ರಯಾಣಿಕರಿಗೆ ಪ್ರವೇಶವಿಲ್ಲದೆ, ಕೇವಲ ಶಾಲಾ ಮಕ್ಕಳನ್ನು ಮಾತ್ರ ತರುವ ನಿರ್ಧಾರವನ್ನ ಅಧಿಕಾರಿಗಳು ತೆಗೆದುಕೊಂಡಿದ್ದಾರೆ.
ಸಾರಿಗೆ ಇಲಾಖೆಯ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ನೊಂದಿಗೆ ಬಸ್ಗಳನ್ನು ನಡೆಸುತ್ತಿದ್ದಾರೆ. ಬಸ್ಗಳ ನಿರ್ವಹಣೆಗೆ ಆಗಮಿಸಿದ್ದ ಚಾಲಕರು, “ಮಕ್ಕಳಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಆದರೆ, ಮುಷ್ಕರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ,” ಎಂದು ತಿಳಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಬಸ್ ಸಂಚಾರ ಬಹುತೇಕ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಮಾತ್ರ ಈ ವಿಶೇಷ ವ್ಯವಸ್ಥೆ ಕೈಗೊಳ್ಳಲಾಗಿದೆ.
ಇದರಿಂದ ಶಾಲಾ ಮಕ್ಕಳಿಗೆ ಸ್ವಲ್ಪ ನಿಟ್ಟುಸಿರು ಸಿಕ್ಕಿದರೂ, ಇಡೀ ಮುಷ್ಕರದ ತೀವ್ರತೆ ರಾಜ್ಯದ ಸಾರಿಗೆ ವ್ಯವಸ್ಥೆಯ ಮೇಲೆ ಎಳೆಯ ತೋರಿಸುತ್ತಿದೆ. ಮುಷ್ಕರದ ಕುರಿತು ಸರ್ಕಾರದ ನಿರ್ಧಾರ ಹಾಗೂ ನೌಕರರ ಒತ್ತಾಯಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.