ಬೆಂಗಳೂರು: ಬಸವರಾಜ ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ. ಈ ಸ್ಪಷ್ಟತೆ ನನಗಿದೆ. ನಾನು ದ್ರಾವಿಡ ಮೂಲವನ್ನು ಉಳಿಸಿಕೊಂಡಿದ್ದೇನೆ, ನೀವು ಮಾತ್ರ ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದು ಪಕ್ಷಾಂತರ ಮಾಡಿದ್ದೀರಿ.ಬೇಗ “ಘರ್ ವಾಪಸಿ”’ ಆಗಿಬಿಡಿ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ನೆಹರೂ ಅವರನ್ನು ಮೋದಿಗೆ ಹೋಲಿಸಲು ಸಾಧ್ಯವೇ ಇಲ್ಲ ಎಂದು ಮತ್ತೆ ಮತ್ತೆ ಹೇಳುತ್ತೇನೆ. ಇಬ್ಬರು ನಾಯಕರ ಸಾಧನೆ ಬಗ್ಗೆ ಮುಕ್ತ ಚರ್ಚೆಗೆ ನೀವು ಸಿದ್ಧ ಇದ್ದರೆ ನಾನೂ ಸಿದ್ಧನಿದ್ದೇನೆ. ನನ್ನ ಮಾತಿಗೆ ನೀವು ಖರೀದಿಸಿಟ್ಟಿರುವ ‘’ಟ್ರೋಲ್ ಗ್ಯಾಂಗ್’’ ಮೂಲಕ ಉತ್ತರ ಕೊಡಿಸಲು ಹೋಗಬೇಡಿ ಎಂದು ಹೇಳಿದರು.


‘’ಭಾರತ ಮಾತೆ ತನ್ನ ಭಕ್ತನನ್ನು ಕಳೆದುಕೊಂಡಿದ್ದಾಳೆ, ಶಾಂತಿ ತನ್ನ ರಕ್ಷಕನನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ, ನಿರಾಶ್ರಿತರು ತನ್ನ ಆಶ್ರಯದಾತನನ್ನು, ಸಾಮಾನ್ಯ ಜನ ತಮ್ಮ ಕಣ್ಮಣಿಯನ್ನು ಕಳೆದುಕೊಂಡಿದ್ದಾರೆ.. ಪರದಿ ಬಿದ್ದಿದೆ’’ -ಹೀಗೆಂದು ನೆಹರೂ ಸಾವಿಗೆ ಎ.ಬಿ.ವಾಜಪೇಯಿ ಕಂಬನಿ ಮಿಡಿದಿದ್ದನ್ನು ಹಿರಿಯ ಬಿಜೆಪಿ ನಾಯಕರಿಂದ ಕೇಳಿ ತಿಳಿದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ: IPL 2022 : ಗುಜರಾತ್‌-ರಾಜಸ್ಥಾನ ಫೈನಲ್‌ ಫೈಟ್‌: ಅಂತಿಮ ಜಿದ್ದಾಜಿದ್ದಿ ನೋಡಲಿದ್ದಾರಾ ಪಿಎಂ ಮೋದಿ?


‘ದೇಶ ವಿಭಜನೆಯ ಗಾಯಕ್ಕೆ ಸೌಹಾರ್ದತೆಯ ಮುಲಾಮು ಹಚ್ಚಿದವರು ಜವಾಹರಲಾಲ ನೆಹರೂ. ಒಣಗಿದ ಗಾಯಗಳನ್ನು ಕೋಮುದ್ವೇಷದ ಮೂಲಕ ಕೆದಕುತ್ತಾ ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತಿರುವವರು ನಿಮ್ಮ ನರೇಂದ್ರ ಮೋದಿ ಅವರು ಎಂದು ಕಿಡಿ ಕಾರಿದ್ದಾರೆ.ಜವಾಹರಲಾಲ ನೆಹರೂ ಅಭಿವೃದ್ದಿಯ ಮುನ್ನೋಟದಿಂದ ದೇಶ ಕಟ್ಟಿದ್ದರು. ಅವರಿಗೆ ಕಟ್ಟುವುದಷ್ಟೇ ಗೊತ್ತಿತ್ತು, ನಿಮ್ಮ ನರೇಂದ್ರ ಮೋದಿ ಅವರು ಕೆಡವುದನ್ನಷ್ಟೇ ಕಲಿತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.


ಎಸ್.ಬಿ.ಐ, ಎಲ್.ಐ.ಸಿ ಯಿಂದ ಹಿಡಿದು  ಭಾರತೀಯ ತೈಲ ನಿಗಮ, ಏರ್ ಇಂಡಿಯಾದ ವರೆಗೆ ನೂರಾರು ಸರ್ಕಾರಿ ಸಂಸ್ಥೆಗಳನ್ನು ಕಟ್ಟಿದವರು ಪಂಡಿತ ಜವಾಹರಲಾಲ ನೆಹರೂ. ಅದನ್ನು ಮಾರಾಟಕ್ಕಿಟ್ಟವರು ಯಾರೆಂದು ಬಿಡಿಸಿ ಹೇಳಬೇಕೇ? ಉಕ್ಕಿನ ಕಾರ್ಖಾನೆ, ರೈಲ್ವೆ ಎಂಜಿನ್-ಕೋಚ್ ನಿರ್ಮಾಣ ಘಟಕಗಳು, ಯುದ್ಧ ವಿಮಾನ-ಟ್ಯಾಂಕ್ ಗಳು, ಉಷ್ಣವಿದ್ಯುತ್ ಉತ್ಪಾದನಾ ಸಲಕರಣೆಗಳು ಹೀಗೆ ಸರ್ಕಾರಿ ಸ್ವಾಮ್ಯದಲ್ಲಿ ಸಾಲು ಸಾಲು ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದವರು ಜವಾಹರಲಾಲ ನೆಹರೂ. ಮೋದಿಯವರು ಕಟ್ಟಿದೆಷ್ಟು, ಕೆಡವಿದೆಷ್ಟು? ಎಂದು ಅವರು ಪ್ರಶ್ನಿಸಿದರು.


Knowledge News: ಡಿಟಿಎಚ್‌ ಆಂಟೆನಾಗಳ ಶೇಪ್‌ ಈ ರೀತಿ ಇರಲು ಕಾರಣ ಏನು ಗೊತ್ತಾ?


ಆಧುನಿಕ ಸಂಶೋಧನಾ ಸಂಸ್ಥೆಗಳ ಸ್ಥಾಪನೆ ಮೂಲಕ ಸಂವಿಧಾನದ ಆಶಯವಾದ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಶ್ರಮಿಸಿದವರು ಪಂಡಿತ ನೆಹರೂ. ಪ್ಲಾಸ್ಟಿಕ್ ಸರ್ಜರಿ, ಚರಂಡಿ ನೀರಿನಿಂದ ಗ್ಯಾಸ್, ಪೆನ್ ಡ್ರೈವ್ ಗಳ ಹೇಳಿಕೆಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೀಡಾದವರು ಯಾರೆಂದು ನಿಮಗೆ ಗೊತ್ತಿಲ್ಲವೇ? ಎಂದು ಕುಟುಕಿದರು.


ಬೊಮ್ಮಾಯಿವರೇ, ಭಾರತ-ಚೀನಾ ಗಡಿಪ್ರದೇಶದ ಬೆಳವಣಿಗೆ ಬಗ್ಗೆ ಸರಿಯಾದ ಮಾಹಿತಿ ತರಿಸಿಕೊಳ್ಳಿ. ಇತಿಹಾಸದ ವ್ಯಸನದಲ್ಲಿ ಮೈಮರೆಯಬೇಡಿ. ವರ್ಷದ ಹಿಂದೆ ಚೀನಾ ದೇಶದ ಎದುರು ಭಾರತ ಮಂಡಿ ಊರುವಂತೆ ಮಾಡಿ ಭಾರತೀಯರು ತಲೆ ತಗ್ಗಿಸುವಂತೆ ಮಾಡಿದ್ದು ಯಾರೆಂದು ನಿಮಗೆ ಗೊತ್ತಿಲ್ಲವೇ?


ಭಾರತ ಚೀನಾ ಗಡಿಯನ್ನು ಆ ದೇಶದ ಬೇಡಿಕೆಯಂತೆ 1959ರ ಗಡಿರೇಖೆಗೆ ಒಪ್ಪಿಕೊಂಡು ರಾಜಿ ಮಾಡಿಕೊಂಡಿದ್ದು ಇತ್ತೀಚಿನ ಇತಿಹಾಸ. ಗಾಲ್ವಾನ್ ಕಣಿವೆಯಲ್ಲಿ ನಮ್ಮ ಸೈನಿಕರನ್ನು ಲಾಠಿ, ದೊಣ್ಣೆಗಳಿಂದ ಕಾದಾಡುವಂತೆ ಮಾಡಿದ್ದನ್ನು ಕೂಡಾ ದೇಶದ ಜನ ಮರೆತಿಲ್ಲ.ಪಾಕಿಸ್ಥಾನ ಎಂಬ ದುರ್ಬಲ ದೇಶದ ಎದುರು ವೀರಾವೇಶ ಮೆರೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಪಾಕಿಸ್ಥಾನಕ್ಕಿಂತ ದೊಡ್ಡ ಶತ್ರುವಾದ ಚೀನಾದ ಹೆಸರನ್ನು ಉಚ್ಚರಿಸಲು ಕೂಡಾ ಅಂಜುವುದು ಯಾಕೆ ಎಂದು ಹೇಳಬಲ್ಲಿರಾ ಬೊಮ್ಮಾಯಿ ಅವರೇ? ಎಂದು ಸಿದ್ಧರಾಮಯ್ಯ ಸವಾಲು ಹಾಕಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.