Bear Death in Accident: ಜುಲೈ 26ರ ಬೆಳಗಿನ ಜಾವ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಆರೇಳು ವರ್ಷದ ಗಂಡು ಕರಡಿ ತೀವ್ರ ರಕ್ತಸ್ರಾವದಿಂದ ಧಾರುಣವಾಗಿ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ರಾಂಪುರ ಸಮೀಪದ ಗ್ರ್ಯಾಂಡ್ ಹೋಟೆಲ್ ಎದುರು ಸಂಭವಿಸಿದೆ.
ಬೆಂಗಳೂರು ಟು ಬಳ್ಳಾರಿ ಮಾರ್ಗದಲ್ಲಿ ರಾತ್ರಿ ವಾಹನ ಸವಾರರು ಸೂಚನ ಫಲಕಗಳಿದ್ದರೂ ಅತೀ ವೇಗವಾಗಿ ವಾಹನ ಚಲಾಯಿಸುತ್ತಾರೆ. ಈ ರೀತಿ ವೇಗದ ಚಾಲನೆಯಿಂದಾಗಿ ಅಪರಿಚಿತ ವಾಹನ ಕರಡಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಕರಡಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯು ತೀವ್ರ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ- ಮದ್ಯಪಾನ ಮಾಡಿ ಶಾಲೆಯಲ್ಲೇ ನಿದ್ದೆಗೆ ಜಾರಿದ ಮುಖ್ಯಶಿಕ್ಷಕ: ಪೋಷಕರ ಆಕ್ರೋಶ
ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕು ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗುಡ್ಡ ಪ್ರದೇಶವಾಗಿದೆ. ಇಲ್ಲಿ ಸುತ್ತಮುತ್ತ ಬೃಹತ್ ಕಲ್ಲು ಬಂಡೆಗಳ ಗುಡ್ಡಗಾಡು ಇರುವುದರಿಂದ ವನ್ಯಜೀವಿಗಳು ಒಂದೆಡೆಯಿಂದ ಮತ್ತೊಂದೆಡೆ ಓಡಾಡುವುದು ಸರ್ವೇ ಸಾಮಾನ್ಯವಾದ ಸಂಗತಿಯಾಗಿದೆ. ಈ ರೀತಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಟುವಾಗ ವೇಗವಾಗಿ ಬಂದು ಡಿಕ್ಕಿ ಹೊಡೆದಿರುವ ವಾಹನ ಅಪಘಾತದ ರಭಸಕ್ಕೆ ಮೂಕ ಪ್ರಾಣಿಯೊಂದು ಕೊನೆಯುಸಿರೆಳೆದಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ- ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯ...
ಮತ್ತೊಂದೆಡೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಿರತೆ, ಕರಡಿ, ಜಿಂಕೆ ಇನ್ನಿತರ ಕಾಡುಪ್ರಾಣಿಗಳು ರಸ್ತೆ ಅಪಘಾತಕ್ಕೆ ಸಿಲುಕಿ ಮೃತಪಡುತ್ತಿರುವುದು ಆತಂಕ ಮೂಡಿಸಿದೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರ ಮಾಲತೇಶ್ ಅರಸ್, ಪ್ರಧಾನ ಕಾರ್ಯದರ್ಶಿ ಟಿ.ರುದ್ರಮುನಿ, ಉಪಾಧ್ಯಕ್ಷರಾದ ಓಂಕಾರಪ್ಪ, ಕಾನೂನು ಸಲಹೆಗಾರರಾದ ಶಿವಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.









