)
ಬೆಳಗಾವಿ: ಚಳಿಗಾಲದ ಅಧಿವೇಶನ ನಾಳೆಯಿಂದ (ಡಿಸೆಂಬರ್ 8) ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗಲಿದೆ. ಬದಲಾದ ರಾಜಕೀಯ ಸನ್ನಿವೇಶ, ಸರಕಾರದ ವಿವಾದಾತ್ಮಕ ನಡೆಗಳು ಮತ್ತು ಉತ್ತರ ಕರ್ನಾಟಕದ ಜನರ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಈ ಅಧಿವೇಶನ ವಿಶೇಷ ಗಮನ ಸೆಳೆಯುತ್ತಿದೆ.
ಅಧಿವೇಶನದ ಮೊದಲ ದಿನದ ಕಲಾಪ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಲಿದೆ.ಸಂತಾಪದ ಬಳಿಕ ಕಲಾಪವನ್ನು ಮುಂದೂಡಲು ಸ್ಪೀಕರ್ ತೀರ್ಮಾನಿಸಿದ್ದಾರೆ.ಬಿಜೆಪಿ-ಜೆಡಿಎಸ್ ಪಕ್ಷಗಳು ಈಗಾಗಲೇ ಈಗ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿವೆ.ಹಂತಹಂತವಾಗಿ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿ ಸರಕಾರವನ್ನು ತೀವ್ರ ಒತ್ತಡಕ್ಕೆ ಸಿಲುಕಿಸುವ ಯೋಜನೆ ರೂಪಿಸಲಾಗಿದೆ.ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳೇ ಪ್ರಮುಖ ಅಸ್ತ್ರವಾಗಲಿವೆ.ಕಳೆದ ಬೆಳಗಾವಿ ಅಧಿವೇಶನದಲ್ಲಿ ನೀಡಿದ್ದ ಭರವಸೆಗಳ ಅನುಷ್ಠಾನದ ಸ್ಥಿತಿಗತಿ ಕುರಿತು ಸರಕಾರದಿಂದ ಮಾಹಿತಿ ಕೋರಲಿವೆ ಎನ್ನಲಾಗಿದೆ.
ಪ್ರಮುಖ ಪ್ರಸ್ತಾಪಗಳು
ಕಬ್ಬು ಬೆಳೆಗಾರ ಬೇಡಿಕೆಗಳಿಗೆ ಸ್ಪಂದಿಸದ ಸರಕಾರ
ಮೆಕ್ಕೆಜೋಳ, ಭತ್ತ, ರಾಗಿ ಖರೀದಿ ಕೇಂದ್ರ ತೆರೆಯದ ನಿರ್ಲಕ್ಷ್ಯ
ಬೆಳೆ ಹಾನಿ ಪರಿಹಾರದಲ್ಲಿ ದೋಷ, ಕಡಿಮೆ ಮೊತ್ತ
ತುಂಗಭದ್ರಾ ಜಲಾಶಯದ 32 ಕ್ರೆಸ್ಟ್ ಗೇಟ್ ಕಾಮಗಾರಿ ವಿಳಂಬ
ಈ ಬಾರಿ ಎರಡನೇ ಬೆಳೆಗೆ ನೀರು ಬಿಡದೇ ರೈತರಿಗೆ ನಷ್ಟ
ಸದ್ದಿಲ್ಲದೆ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಪ್ರಕ್ರಿಯೆ
ಬಗರ್ ಹುಕುಂ ಸಾಗುವಳಿ ಮಂಜೂರಾತಿ ನೀಡದಿರುವುದು
ಸರಕಾರಿ ಶಾಲೆಗಳ ಅವ್ಯವಸ್ಥೆ, ರಾಜ್ಯಾದ್ಯಂತ ಹದಗೆಟ್ಟ ರಸ್ತೆ-ಹೆದ್ದಾರಿಗಳು
ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ದರೋಡೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ-ಗ್ಯಾಂಗ್ಸ್ಟರ್ಗಳಿಗೆ ‘ರಾಜಕೀಯ ಆತಿಥ್ಯ’
ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ, ಕಾನೂನು-ಸುವ್ಯವಸ್ಥೆ ಕುಸಿತ
ಆಡಳಿತ ಪಕ್ಷದ ಆಂತರಿಕ ಕಲಹದ ಚರ್ಚೆ:
ಕಾಂಗ್ರೆಸ್ ಶಾಸಕರಲ್ಲೇ ಮುಂದುವರಿದ ಬಣಗಾರಿಕೆ, ದಿಲ್ಲಿ ಯಾತ್ರೆ, ನಾಯಕತ್ವ ಬದಲಾವಣೆ ಚರ್ಚೆ, ಬ್ರೇಕ್ಫಾಸ್ಟ್-ಲಂಚ್-ಡಿನ್ನರ್ ಸಭೆಗಳ ಪ್ರಸ್ತಾಪ,ಇವೆಲ್ಲವೂ ಸರಕಾರಕ್ಕೆ ಮುಜುಗರ ಉಂಟುಮಾಡಲಿವೆ. ಪ್ರತಿಪಕ್ಷಗಳು ಈ ಒಳಗಿನ ಗೊಂದಲವನ್ನೂ ಆಯುಧವಾಗಿ ಬಳಸಿಕೊಳ್ಳಲಿವೆ.ಒಟ್ಟಾರೆಯಾಗಿ ಈ ಚಳಿಗಾಲದ ಅಧಿವೇಶನ ರಾಜಕೀಯ ಕಾವನ್ನು ಮತ್ತಷ್ಟು ಏರಿಸುವ ನಿರೀಕ್ಷೆಯಿದೆ. ಉತ್ತರ ಕರ್ನಾಟಕದ ಜನರ ಸಮಸ್ಯೆಗಳು, ಸರಕಾರದ ಆಡಳಿತ ವೈಫಲ್ಯ ಆರೋಪಗಳು ಮತ್ತು ಆಂತರಿಕ ರಾಜಕೀಯ ತಲ್ಲಣಗಳೇ ಈ ಅಧಿವೇಶನದ ಮುಖ್ಯ ಸ್ವರೂಪವಾಗಲಿವೆ.