ಕನ್ನಡಿಗರ ಮೇಲೆ ಅವಾಸ್ತವಿಕ ಆರೋಪ: ಪ್ರತ್ಯೇಕವಾಗಿರಲಿ ಅಪರಾಧ ಮತ್ತು ಕನ್ನಡ ಭಾಷಾಭಿಮಾನ

Bangalore road rage incident: ಕರ್ನಾಟಕದಲ್ಲಿ ಇತ್ತೀಚೆಗೆ ಒಂದು ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ. ರೋಡ್ ರೇಜ್ ಆಗಿರಲಿ, ಅಥವಾ ಯಾವುದೇ ವೈಯಕ್ತಿಕ ಮಟ್ಟದ ಜಗಳಗಳೇ ಆಗಿರಲಿ, ಅದನ್ನು ಕನ್ನಡಿಗ - ಕನ್ನಡೇತರ ಜಗಳ ಎಂಬ ರೀತಿಯಲ್ಲಿ ಪ್ರಚುರಪಡಿಸಲಾಗುತ್ತಿದೆ.

Written by - Girish Linganna | Edited by - Zee Kannada News Desk | Last Updated : Apr 23, 2025, 04:34 PM IST
  • ಕರ್ನಾಟಕದಲ್ಲಿ ಇತ್ತೀಚೆಗೆ ಒಂದು ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ.
  • ಎಪ್ರಿಲ್ 21ರಂದು ಬೆಂಗಳೂರಿನಲ್ಲಿ ನಡೆದ ರೋಡ್ ರೇಜ್ ಪ್ರಕರಣ ಮತ್ತು 2023ರ ಹಿಂದಿ ನಾಮ ಫಲಕ ವಿವಾದಗಳು ಕನ್ನಡಿಗರನ್ನು ಹೇಗೆ ಅನ್ಯಾಯವಾಗಿ ಗುರಿಯಾಗಿಸಲಾಗುತ್ತಿದೆ.
  • ಬೆಂಗಳೂರಿನ ಓಲ್ಡ್‌ ಮದ್ರಾಸ್ ರಸ್ತೆಯಲ್ಲಿ ನಡೆದ ರಸ್ತೆ ಜಗಳದ ಪ್ರಕರಣ ಇದಕ್ಕೊಂದು ಸೂಕ್ತ ಉದಾಹರಣೆ.
ಕನ್ನಡಿಗರ ಮೇಲೆ ಅವಾಸ್ತವಿಕ ಆರೋಪ: ಪ್ರತ್ಯೇಕವಾಗಿರಲಿ ಅಪರಾಧ ಮತ್ತು ಕನ್ನಡ ಭಾಷಾಭಿಮಾನ

Bangalore road rage incident: ಕರ್ನಾಟಕದಲ್ಲಿ ಇತ್ತೀಚೆಗೆ ಒಂದು ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ. ರೋಡ್ ರೇಜ್ ಆಗಿರಲಿ, ಅಥವಾ ಯಾವುದೇ ವೈಯಕ್ತಿಕ ಮಟ್ಟದ ಜಗಳಗಳೇ ಆಗಿರಲಿ, ಅದನ್ನು ಕನ್ನಡಿಗ - ಕನ್ನಡೇತರ ಜಗಳ ಎಂಬ ರೀತಿಯಲ್ಲಿ ಪ್ರಚುರಪಡಿಸಲಾಗುತ್ತಿದೆ. ಈ ಗಲಭೆಗಳಿಗೂ, ಭಾಷೆ ಮತ್ತು ಸಂಸ್ಕೃತಿಗೂ ಯಾವುದೇ ಸಂಬಂಧ ಇಲ್ಲವೆಂದು ಪುರಾವೆಗಳು ಹೇಳಿದರೂ, ಇಂತಹ ಘಟನೆಗಳು ಮುಂದುವರಿದಿವೆ. ಇಂತಹ ಘಟನೆಗಳಲ್ಲಿ ಕನ್ನಡಿಗರನ್ನು ಭಾಷಾಂಧರು ಎಂಬಂತೆ ಬಿಂಬಿಸುವುದರಿಂದ ವಾಸ್ತವ ವಿಚಾರಗಳು ಮರೆಯಾಗುವುದು ಮಾತ್ರವಲ್ಲದೆ, ಎಲ್ಲರನ್ನೂ ಸ್ವಾಗತಿಸುವ ರಾಜ್ಯ ಎಂಬ ಕರ್ನಾಟಕದ ಪ್ರತಿಷ್ಠೆಗೂ ಧಕ್ಕೆಯಾಗುತ್ತಿದೆ. ಇತ್ತೀಚಿನ ಎರಡು ಘಟನೆಗಳು, ಎಪ್ರಿಲ್ 21ರಂದು ಬೆಂಗಳೂರಿನಲ್ಲಿ ನಡೆದ ರೋಡ್ ರೇಜ್ ಪ್ರಕರಣ ಮತ್ತು 2023ರ ಹಿಂದಿ ನಾಮ ಫಲಕ ವಿವಾದಗಳು ಕನ್ನಡಿಗರನ್ನು ಹೇಗೆ ಅನ್ಯಾಯವಾಗಿ ಗುರಿಯಾಗಿಸಲಾಗುತ್ತಿದೆ, ಕನ್ನಡಿಗರಿಗೆ, ಮತ್ತು ಅವರ ಭಾಷಾ ಹೆಮ್ಮೆಗೆ ಸಂಬಂಧವೇ ಇಲ್ಲದ ವಿಚಾರಗಳಿಗೆ ಅವರನ್ನು ಹೇಗೆ ಬಲಿಪಶುಗಳನ್ನಾಗಿ ಮಾಡಲಾಗುತ್ತದೆ ಎನ್ನುವುದಕ್ಕೆ ಸಾಕ್ಷಿಗಳಾಗಿವೆ.

Add Zee News as a Preferred Source

ಬೆಂಗಳೂರಿನ ಓಲ್ಡ್‌ ಮದ್ರಾಸ್ ರಸ್ತೆಯಲ್ಲಿ ನಡೆದ ರಸ್ತೆ ಜಗಳದ ಪ್ರಕರಣ ಇದಕ್ಕೊಂದು ಸೂಕ್ತ ಉದಾಹರಣೆ. ವಿಕಾಸ್ ಕುಮಾರ್ ಎಂಬ ಬಿಪಿಒ ಉದ್ಯೋಗಿಯ ಬೈಕ್ ಮತ್ತು ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅವರ ಕಾರ್ ರಸ್ತೆಯಲ್ಲಿ ಒಂದಕ್ಕೊಂದು ಒರೆಸಿದ ಬಳಿಕ ಅವರಿಬ್ಬರ ನಡುವೆ ಜಗಳ ನಡೆಯಿತು. ಆರಂಭದಲ್ಲಿ ಶಿಲಾದಿತ್ಯ ಬೋಸ್ ವಿಕಾಸ್ ಕುಮಾರ್ ತನ್ನ ಮೇಲೆ ಕೀ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದು, 'ಇದು ಕನ್ನಡ ನಾಡು, ನೀನು ಹೊರಗಡೆಯವನು' ಎಂಬಂತ ಮಾತುಗಳಿಂದ ಬೈದಿದ್ದಾನೆ ಎಂದು ಆರೋಪಿಸಿದ್ದರು. ಈ ಆರೋಪಗಳು ಸಾಮಾಜಿಕ ಜಾಲತಾಣಗಳು ಮತ್ತು ಆರಂಭಿಕ ಮಾಧ್ಯಮ ವರದಿಗಳಲ್ಲಿ ಹರಿದಾಡಿ, ಜಗಳ ವಿವಾದದ ರೂಪ ಪಡೆದು, ವಿಕಾಸ್ ಕುಮಾರ್‌ನನ್ನು, ಆ ಮೂಲಕ ಒಟ್ಟಾರೆಯಾಗಿ ಕನ್ನಡಿಗರನ್ನು ಅಸಹಿಷ್ಣುಗಳು, ಆಕ್ರಮಣಕಾರಿಗಳು ಎಂದು ತಪ್ಪಾಗಿ ಬಿಂಬಿಸತೊಡಗಿದವು. ಆದರೆ, ಬಳಿಕ ಲಭಿಸಿದ ಸಿಸಿಟಿವಿ ದೃಶ್ಯಾವಳಿಗಳು ಬೇರೆಯೇ ಕತೆಯನ್ನು ಹೇಳಿದ್ದವು. ಅದರ ಅನುಸಾರ, ಶಿಲಾದಿತ್ಯ ಬೋಸ್ ಸ್ವತಃ ಆಕ್ರಮಣಕಾರಿಯಾಗಿದ್ದು, ಕೆಳಗೆ ಬಿದ್ದ ವಿಕಾಸ್ ಕುಮಾರ್ ಮೇಲೆ ಹಲ್ಲೆ ನಡೆಸಿ, ಆತನಿಗೆ ಮನಸೋ ಇಚ್ಛೆ ಒದ್ದಿದ್ದು ಕಂಡುಬಂದಿತ್ತು. ಪೊಲೀಸರು ಸಹ ಈ ಘಟನೆ ಸಂಪೂರ್ಣವಾಗಿ ಒಂದು ರಸ್ತೆ ಜಗಳವಾಗಿತ್ತೇ ಹೊರತು ಇದಕ್ಕೆ ಯಾವುದೇ ಭಾಷಾ ವಿವಾದದ ಆಯಾಮ ಇರಲಿಲ್ಲ ಎಂದಿದ್ದರು. ವಾಸ್ತವ ವಿಚಾರ ಬೆಳಕಿಗೆ ಬರುವ ವೇಳೆಗೆ ಹಾನಿ ನಡೆದುಹೋಗಿತ್ತು. ಕನ್ನಡಿಗರನ್ನು ಅಷ್ಟರಲ್ಲಾಗಲೇ ಅಸಹಿಷ್ಣುಗಳೆಂದು ಬಿಂಬಿಸಲಾಗಿ, ರಾಷ್ಟ್ರೀಯ ಮಾಧ್ಯಮಗಳು ಕನ್ನಡಿಗರ ಆತಿಥ್ಯ ಮನೋಭಾವವನ್ನು ಪ್ರಶ್ನಿಸತೊಡಗಿದ್ದವು.

ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ: ಕೇಂದ್ರ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಲಿ

ಇದೇ ರೀತಿಯ ಘಟನೆ 2023ರಲ್ಲೂ ನಡೆದಿತ್ತು. ಬೆಂಗಳೂರಿನ ಓರ್ವ ವರ್ತಕ ಹಿಂದಿಯಲ್ಲಿ ಮಾತನಾಡಿದ್ದಕ್ಕಾಗಿ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿತ್ತು. ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿ ಮಾಧ್ಯಮಗಳು ಕನ್ನಡಿಗರು ಹಿಂದಿ ಭಾಷಿಕರ ಕುರಿತು ದ್ವೇಷದ ಭಾವನೆ ಹೊಂದಿದ್ದಾರೆ ಎಂದು ಆರೋಪಿಸಿದ್ದವು. ಅಂಗಡಿ ಮಾಲೀಕ ಹಿಂದಿಯಲ್ಲಿ ಮಾತನಾಡಿದ್ದಕ್ಕಾಗಿ ಗ್ರಾಹಕನನ್ನು ಬೈದು, ಕನ್ನಡ ಮಾತಾಡುವಂತೆ ಆಗ್ರಹಿಸಿದ ಎನ್ನಲಾಗಿತ್ತು. ಕನ್ನಡ ಪರ ಸಂಘಟನೆಗಳು, ಹೋರಾಟಗಾರರು ಭಾಷಾ ದ್ವೇಷದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಯಿತು. ಆದರೆ, ಪೊಲೀಸ್ ತನಿಖೆಗಳು ನಡೆದ ಬಳಿಕ, ಸೆಪ್ಟೆಂಬರ್ 2023ರ ವೇಳೆಗೆ ಆ ಘಟನೆ ಕೇವಲ ಬಿಲ್ಲಿಂಗ್‌ಗೆ ಸಂಬಂಧಿಸಿದ ಜಗಳವಾಗಿತ್ತೇ ಹೊರತು, ಭಾಷಾ ವಿವಾದವಾಗಿರಲಿಲ್ಲ ಎಂದು ಸ್ಪಷ್ಟವಾಯಿತು. ಆ ಘಟನೆಯನ್ನು ಗ್ರಾಹಕ ಉತ್ಪ್ರೇಕ್ಷೆಯಿಂದ ವಿವರಿಸಿದ್ದ. ಆದರೆ, ಹಿಂದಿ ಭಾಷಾ ವಿರೋಧಿ ಮನೋಭಾವನೆಯ ಆರೋಪವನ್ನು ಸಮರ್ಥಿಸುವಂತಹ ಯಾವುದೇ ಸಾಕ್ಷಿಗಳೂ ಈ ಪ್ರಕರಣದಲ್ಲಿ ಲಭ್ಯವಾಗಿರಲಿಲ್ಲ. ಆದರೆ ಅಷ್ಟರಲ್ಲಾಗಲೇ ಕನ್ನಡಿಗರು ಭಾಷಾಂಧರು ಎಂಬ ಚಿತ್ರಣವನ್ನು ಕಟ್ಟಿ, ಪ್ರಚುರಪಡಿಸಲಾಗಿತ್ತು. ಆನ್‌ಲೈನ್ ಟ್ರೋಲ್‌ಗಳು ಮತ್ತು ಒಂದಷ್ಟು ಮಾಧ್ಯಮಗಳು ಕನ್ನಡಿಗರು ಸಂಕುಚಿತ, ಪ್ರಾದೇಶಿಕ ಮನೋಭಾವ ಉಳ್ಳವರೇ ಹೊರತು, ರಾಷ್ಟ್ರೀಯ ಭಾವ ಇರುವವರಲ್ಲ ಎಂದು ಆರೋಪಿಸಿದ್ದವು.

ಆದರೆ, ಇಂತಹ ಘಟನೆಗಳು ಯಾಕೆ ಮತ್ತೆ ಮತ್ತೆ ಜರುಗುತ್ತವೆ? ಇದಕ್ಕೆ ಪ್ರಚೋದನಕಾರಿ ಪ್ರಚಾರ ನಡೆಸುವ ಬಯಕೆಯೂ ಒಂದು ಕಾರಣವಾಗಿರುತ್ತದೆ. ಯಾವುದೇ ಒಂದು ಅಪರಾಧದ ಘಟನೆಯನ್ನು 'ಕನ್ನಡಿಗ vs ಹೊರಗಡೆಯವ' ಎಂಬುದಾಗಿ ಬಣ್ಣಿಸಿದರೆ, ಅದರ ಪರಿಣಾಮವಾಗಿ, ವಿಶೇಷವಾಗಿ ಅರ್ಧ ಸತ್ಯಗಳನ್ನು ಹಬ್ಬಿಸುವ ಸಾಮಾಜಿಕ ಜಾಲತಾಣಗಳಲ್ಲಂತೂ ಇಂತಹ ಗಾಳಿಸುದ್ದಿಗಳು ವಾಸ್ತವ ವಿಚಾರಕ್ಕಿಂತಲೂ ವೇಗವಾಗಿ, ಕಾಳ್ಗಿಚ್ಚಿನಂತೆ ಹಬ್ಬುತ್ತವೆ. ಇತ್ತೀಚಿನ ರಸ್ತೆ ಜಗಳದ ಪ್ರಕರಣದಲ್ಲೂ ವಿಕಾಸ್ ಕುಮಾರ್ ಕಡೆಯ ವಾದ ಹೊರಬರುವ ಮುನ್ನ, ಶಿಲಾದಿತ್ಯ ಬೋಸ್‌ಗೆ ಆದ ಗಾಯಗಳು ಮತ್ತು ಭಾಷೆಯ ಕಾರಣದಿಂದ ಉಂಟಾದ ಜಗಳ ಎಂಬ ವಿಚಾರ ಎಲ್ಲೆಡೆ ಹಬ್ಬಿತು. ಅದೇ ರೀತಿಯಲ್ಲಿ ಅಂಗಡಿಯ ಫಲಕದ ಪ್ರಕರಣದಲ್ಲೂ ಕನ್ನಡಿಗರ ಆಕ್ರಮಣಶೀಲತೆಯ ಕುರಿತು ನಡೆಸಿದ್ದ ಆಧಾರ ರಹಿತ ಆರೋಪಗಳು ವೈರಲ್ ಆಗಿದ್ದವು. ಸಂಕೀರ್ಣ ವಿಚಾರಗಳನ್ನು ಅತಿಯಾಗಿ ಸರಳಗೊಳಿಸಲು ಯತ್ನಿಸುತ್ತಾ ಜನರು ತಾವೇ ತುರ್ತಾಗಿ ತೀರ್ಪು ನೀಡಲು ಹೊರಡುವುದರಿಂದ ಮತ್ತು ಸಣ್ಣಪುಟ್ಟ ಜಗಳಗಳನ್ನು ಜನರ ನಡುವೆ ಅಂತರ ಸೃಷ್ಟಿಸುವ ಭಾಷಾ ವಿಚಾರವಾಗಿ ಪರಿವರ್ತಿಸಲು ಯತ್ನಿಸುವುದರಿಂದ ಇಂತಹ ಘಟನೆಗಳು ನಡೆಯುತ್ತವೆ.

ಇದನ್ನೂ ಓದಿ: ಪಹಲ್ಗಾಮ್‌ ಉಗ್ರರರ ದಾಳಿ, ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ : ಸಿಎಂ ಸಿದ್ದರಾಮಯ್ಯ

ಇಂತಹ ಘಟನೆಗಳಲ್ಲಿ ರಾಜಕೀಯವೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಭಾಷೆಯ ಕುರಿತು ಹೆಮ್ಮೆ, ಅಭಿಮಾನ ಕರ್ನಾಟಕದಲ್ಲಿ ಒಂದು ಸೂಕ್ಷ್ಮವಾದ ವಿಚಾರವೂ ಹೌದು. ಕೆಲವು ರಾಜಕಾರಣಿಗಳು ಮತ್ತು ಹೋರಾಟಗಾರರು ಜನ ಬೆಂಬಲ ಗಳಿಸುವ ಸಲುವಾಗಿ ಇಂತಹ ಘಟನೆಗಳನ್ನು ಬಳಸಿಕೊಂಡು, ತಮ್ಮನ್ನು ತಾವು ಕನ್ನಡ ಸಂಸ್ಕೃತಿಯ ರಕ್ಷಕರು ಎಂಬಂತೆ ಬಿಂಬಿಸತೊಡಗುತ್ತಾರೆ. ರಸ್ತೆ ಜಗಳದ ಪ್ರಕರಣದಲ್ಲಿ ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಂಡಿಸಿದ್ದರೂ, ಕನ್ನಡಿಗರು ಅಸಹಿಷ್ಣುಗಳು ಎಂಬ ಅವಾಸ್ತವಿಕ ವಿಚಾರ ಬಹಳಷ್ಟು ಪ್ರಚಾರ ಪಡೆದುಕೊಂಡಿತು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಹೊರಗೆ ಕನ್ನಡಪರ ಹೋರಾಟಗಾರರು ಎಪ್ರಿಲ್ 22ರಂದು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಆದರೆ, ಈ ಪ್ರತಿಭಟನೆಯನ್ನು ಪ್ರಾಂತೀಯ ದುರಭಿಮಾನಕ್ಕೆ ಉದಾಹರಣೆ ಎಂಬಂತೆ ಬಣ್ಣಿಸಲಾಯಿತು. ಇದರಿಂದ ಕನ್ನಡಿಗರು ಸಂಕುಚಿತ ಮನೋಭಾವದವರು ಎಂಬ ಸುಳ್ಳು ಭಾವನೆ ಇನ್ನಷ್ಟು ಆಳವಾಗಿ ಬೇರೂರುವಂತಾಯಿತು.

ಇನ್ನೊಂದು ಮುಖ್ಯ ಅಂಶವೆಂದರೆ, ಇಂತಹ ಕತೆಗಳನ್ನು ಹೇಳುವಾಗ ಇರುವ ಹೊಣೆಗಾರಿಕೆಯ ಕೊರತೆ. ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವಿಗಳು ನಿಖರ ಮಾಹಿತಿಗಿಂತಲೂ ವೇಗವಾಗಿ ಮಾಹಿತಿ ಒದಗಿಸುವುದಕ್ಕೆ ಆದ್ಯತೆ ನೀಡುತ್ತಿದ್ದು, ನಾಟಕೀಯ ವರದಿಗೆ ಸೂಕ್ತವಾದ ರೀತಿಯಲ್ಲಿ ವಿವರಣೆ ನೀಡುತ್ತಿದ್ದಾರೆ. ಎರಡೂ ಪ್ರಕರಣಗಳಲ್ಲಿ ಆರಂಭಿಕ ವರದಿಗಳು ಸಾಕ್ಷ್ಯಾಧಾರಗಳಿಗೆ ಕಾಯುವ ವ್ಯವಧಾನ ಹೊಂದಿರದೆ, ಒಂದೇ ಬದಿಗೆ ಪಕ್ಷಪಾತಿಯಾದಂತೆ ತೋರುತ್ತಿದ್ದವು. 2025ರ ಪ್ರಕರಣದಲ್ಲಿ ಶಿಲಾದಿತ್ಯ ಬೋಸ್ ಪರ ಮತ್ತು 2023ರ ಪ್ರಕರಣದಲ್ಲಿ ಅಂಗಡಿಯ ಗ್ರಾಹಕನ ಪರವಾಗಿ ಆರಂಭಿಕ ವರದಿಗಳಿದ್ದವು. ಆದರೆ, ಪ್ರತಿ ದೂರು ದಾಖಲಾಗಿ, ವಿಚಾರಣೆಗಳು ಸತ್ಯವನ್ನು ಬಯಲಿಗೆ ತಂದ ಬಳಿಕವಷ್ಟೇ ಅಲ್ಲಿ ಏನು ನಡೆದಿತ್ತು ಎನ್ನುವುದು ತಿಳಿಯಿತು. ಆದರೆ ಅಷ್ಟರಲ್ಲಾಗಲೇ ಕನ್ನಡಿಗರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಇಂತಹ ಚಿತ್ರಣ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ, ಭಾಷಾಭಿಮಾನ ಶಕ್ತಿಯೂ, ಸೂಕ್ಷ್ಮವಾದ ವಿಚಾರವೂ ಆಗಿರುವ ರಾಜ್ಯಗಳಲ್ಲೆಲ್ಲ ಕಂಡುಬರುತ್ತವೆ. ಅಂತಹ ರಾಜ್ಯಗಳ ಪ್ರತಿಷ್ಠೆಗೂ ಇದರಿಂದ ಧಕ್ಕೆ ಉಂಟಾಗುತ್ತದೆ.

ಇದನ್ನೂ ಓದಿ:Pahalgam terror attack: ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ದುರಂತ ಸಾವು

ಇಂತಹ ಘಟನೆಗಳ ಪರಿಣಾಮಗಳೂ ಸುದೀರ್ಘವಾಗಿವೆ. ಇವುಗಳು ಕನ್ನಡಿಗರ ಕುರಿತು ತಪ್ಪಾದ ಚಿತ್ರಣ ನೀಡಿ, ವೈವಿಧ್ಯತೆಗೆ ಹೆಸರಾದ ಕನ್ನಡಿಗರನ್ನು ಅಸಹಿಷ್ಣುಗಳು ಎಂದು ಬಿಂಬಿಸುತ್ತವೆ. ಜಾಗತಿಕ ತಂತ್ರಜ್ಞಾನದ ಕೇಂದ್ರ ಎಂದು ಹೆಸರಾಗಿರುವ ಬೆಂಗಳೂರು ತನ್ನ ಕಾಸ್ಮೋಪಾಲಿಟನ್ ಗುರುತಿನ ಮೇಲೆ ಅವಲಂಬಿತವಾಗಿದೆ. ಆದರೂ ಇಂತಹ ಕೆಲವು ಘಟನೆಗಳು ಬೆಂಗಳೂರನ್ನೇ ತಮ್ಮ ಮನೆ ಎಂದು ಪರಿಗಣಿಸಿರುವ ಕನ್ನಡೇತರರನ್ನು ದೂರವಿಡುವಂತೆ ಮಾಡುತ್ತವೆ. ಕನ್ನಡಿಗರಿಗೆ ನಿರಂತರವಾಗಿ ತಾವು ಭಾಷಾಂಧರಲ್ಲ ಎಂದು ಮತ್ತೆ ಮತ್ತೆ ಸಾಬೀತುಪಡಿಸುವ ಕೆಲಸವೇ ತ್ರಾಸದಾಯಕವಾಗಿದೆ. ರೋಡ್ ರೇಜ್ ಪ್ರಕರಣದಲ್ಲಿ ದೈಹಿಕ ಹಲ್ಲೆಗೆ ಮಾತ್ರವಲ್ಲದೆ, ಕೆಲಸ ಕಳೆದುಕೊಳ್ಳುವ ಅಪಾಯಕ್ಕೂ ತುತ್ತಾಗಿದ್ದ ಕನ್ನಡಿಗ ವಿಕಾಸ್ ಕುಮಾರ್‌ನನ್ನು ಆರಂಭದಲ್ಲಿ ಖಳನಾಯಕನಾಗಿ ಚಿತ್ರಿಸಲಾಗಿತ್ತು. ಇದೇ ರೀತಿ, 2023ರ ಪ್ರಕರಣದಲ್ಲಿ ಅಂಗಡಿಯಾತನ ವಿರುದ್ಧ ಭಾಷಾ ಕಲಹದ ಆರೋಪ ಹೊರಿಸಿ, ಆತನ ಗೌರವಕ್ಕೂ ಧಕ್ಕೆ ತರಲಾಗಿತ್ತು. ಸುಳ್ಳು ಆರೋಪಗಳು ವೈಯಕ್ತಿಕವಾಗಿ ಮತ್ತು ಒಂದು ಸಮುದಾಯವಾಗಿ ಕನ್ನಡಿಗರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಈ ಘಟನೆಗಳು ತೋರಿಸಿವೆ.

ಈ ಪ್ರಕ್ರಿಯೆಯನ್ನು ತಡೆಯುವ ಸಲುವಾಗಿ ನಾವು ಮೊದಲು ಬದಲಾಗಬೇಕು. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದಕ್ಕಿಂತಲೂ ವಾಸ್ತವ ಸತ್ಯವನ್ನು ಹೇಳುವುದಕ್ಕೆ ಆದ್ಯತೆ ನೀಡಬೇಕು. ಅದರೊಡನೆ ಎರಡೂ ಪ್ರಕರಣಗಳಲ್ಲಿ ಭಾಷೆಯ ವಿಚಾರವೇ ಇರಲಿಲ್ಲ ಎಂದು ಪೊಲೀಸರು ವರದಿ ನೀಡಿದ್ದು, ಇಂತಹ ಸ್ಪಷ್ಟ ವಿಚಾರಗಳ ಆಧಾರದಲ್ಲೇ ವರದಿ ಮಾಡಬೇಕು. ಇನ್ನು ಸಾರ್ವಜನಿಕ ವ್ಯಕ್ತಿಗಳೂ ಸಹ ಜನರನ್ನು ವಿಭಜಿಸುವ ಮಾತುಗಳನ್ನಾಡದೆ, ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕು. ಮುಖ್ಯವಾಗಿ, ಸಂಪೂರ್ಣ ಕನ್ನಡ ಭಾಷಿಕ ಸಮುದಾಯವನ್ನು ಪೂರ್ವಾಗ್ರಹ ಭಾವನೆಯಿಂದ ನೋಡುವುದು ನಿಲ್ಲಬೇಕು. ಕನ್ನಡಿಗರು ಭಾಷಾಭಿಮಾನಿಗಳಾದರೂ, ಎಲ್ಲರನ್ನೂ ಒಳಗೊಳ್ಳುವ ಮನಸ್ಥಿತಿ ಉಳ್ಳವರು. ತಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಹಂಬಲ ಹೊಂದಿದ್ದರೂ, ಇತರ ಭಾಷಿಕರೆಡೆಗೆ ಮುಕ್ತ ಮನಸ್ಸುಳ್ಳವರು. ಕರ್ನಾಟಕದ ಶಕ್ತಿ ರಾಜ್ಯದ ಒಗ್ಗಟ್ಟಿನಲ್ಲಿದೆ. ಆದ್ದರಿಂದ, ಯಾವುದೇ ಅಪರಾಧಗಳಾದರೂ ಅವುಗಳನ್ನು ಆ ದೃಷ್ಟಿಯಿಂದಲೇ ನೋಡಬೇಕೇ ಹೊರತು, ಅದನ್ನು ಮನಬಂದಂತೆ ತಿರುಚುವುದಲ್ಲ.

ಇದನ್ನೂ ಓದಿ: ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ; ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

ಬೆಂಗಳೂರಿನ ರೋಡ್ ರೇಜ್ ಮತ್ತು ನಾಮ ಫಲಕದ ವಿವಾದಗಳು ಒಂದು ರೀತಿಯಲ್ಲಿ ಎಚ್ಚರಿಕೆಯ ಕರೆಗಳೂ ಹೌದು. ನಾವು ಪ್ರತಿಯೊಂದು ವಿವಾದಕ್ಕೂ ಭಾಷೆಯ ಹಣೆಪಟ್ಟಿ ಅಂಟಿಸುವುದನ್ನು ನಿಲ್ಲಿಸಬೇಕು. ಎಲ್ಲರನ್ನೂ ಒಗ್ಗೂಡಿಸುವ ಕತೆಗಳು ನಮಗೆ ಬೇಕೇ ಹೊರತು ಅಂತರ ಸೃಷ್ಟಿಸುವವಲ್ಲ. ಕನ್ನಡಿಗರನ್ನು ಅವರಿರುವ ರೀತಿಯಲ್ಲೇ, ಅಂದರೆ ವೈವಿಧ್ಯಮಯ ಸಂಸ್ಕೃತಿ, ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುವ, ಮತ್ತು ತಾವು ಮಾಡದ ತಪ್ಪಿಗೆ ಭಾಷಾಂಧರು ಎನಿಸಿಕೊಂಡವರಾಗಿ ಪರಿಗಣಿಸುವ ಅಗತ್ಯ ಇಂದು ಬಹಳಷ್ಟು ಹೆಚ್ಚಾಗಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Trending News