)
ಚಾಮರಾಜನಗರ: ಬೆಳಗ್ಗೆಯಿಂದಲೇ ಪ್ರತಿಭಟನಾಕಾರರು ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿಗಳನ್ನು ನಡೆಸಿ ಶೂ ಎಸೆತ ಘಟನೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟಿಸಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಚಾಮರಾಜನಗರ ಅಂಗಡಿ ಬೀದಿಯಲ್ಲಿ ಅಂಗಡಿ ಮುಂಗಟ್ಟುಗಳು ಸ್ತಬ್ಧವಾಗಿದ್ದು, ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವು ವಿರಳವಾಗಿದೆ. ಆಟೋಗಳು ಮಾತ್ರ ಅಲ್ಲಲ್ಲಿ ಓಡಾಟ ನಡೆಸುತ್ತಿವೆ, ಹೋಟೆಲ್ ಗಳು ಸೇರಿ ಬಹುಪಾಲು ವಾಣಿಜ್ಯ ಚಟುವಟಿಕೆ ಬಂದ್ದಾಗಿದ್ದು ಕಂಡುಬಂದಿತು.
ಕೇಸರಿ ಬಾವುಟ ತೆರವು:
ಸಿಜೆಐ ಮೇಲೆ ಶೂ ಎಸೆತ ಯತ್ನ ಖಂಡಿಸಿ ದಲಿತ ಸಂಘಟನೆಗಳು, ಎಸ್ಡಿಪಿಐ ಸೇರಿದಂತೆ ಹಲವು ಸಂಘಸಂಸ್ಥೆಗಳು ಚಾಮರಾಜನಗರ ಬಂದ್ ಗೆ ಕರೆ ಕೊಟ್ಟು ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ಇಂದು ಆರ್ ಎಸ್ ಎಸ್ ಪಥ ಸಂಚಲನ ಹಿನ್ನೆಲೆ ಭುವನೇಶ್ವರಿ ವೃತ್ತದಲ್ಲಿ ಅಳವಡಿಸಿದ್ದ ಕೇಸರಿ ಬಾವುಟ ತೆರವು ಮಾಡಬೇಕೆಂದು ಆಕ್ರೋಶ ಹೊರಹಾಕಿದರು.
ದಲಿತ ಮುಖಂಡ ಅಯ್ಯನಪುರ ಶಿವಕುಮಾರ್ ಮಾತನಾಡಿ, ಬೆಳಗ್ಗೆ 6 ರಿಂದ ಸಂಜೆ 6 ರ ತನಕ ನಾವು ಬಂದ್ ಆಚರಿಸುತ್ತಿದ್ದೇವೆ. ಈ ವೇಳೆ, ನೀವು ಆರ್ ಎಸ್ ಎಸ್ ಪಥ ಸಂಚಲನಕ್ಕಾಗಿ ಕೇಸರಿ ಬಾವುಟಗಳನ್ನು ಹೇಗೆ ಹಾಕಿಸಿದಿರಿ ಎಂದು ಪೊಲೀಸರು, ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಪೊಲೀಸರು, ನಗರಸಭೆ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿದರು. ಪರಿಸ್ಥಿತಿ ಅರಿತ ನಗರಸಭೆ ಸಿಬ್ಬಂದಿ ಭುವನೇಶ್ವರಿ ವೃತ್ತದಲ್ಲಿ ಅಳವಡಿಸಿದ್ದ ಕೇಸರಿ ಬಾವುಟವನ್ನು ತೆರವು ಮಾಡಿದರು.