)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೊಪ್ಪಳದ ಕಾರ್ಯಕ್ರಮಕ್ಕೆ ಮಳೆಯ ಕಾರಣದಿಂದ ಹೋಗದೇ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ, ಆಸ್ಪತ್ರೆಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ವೇಳೆ ವಾಣಿ ವಿಲಾಸ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ಗೂ ಭೇಟಿ ನೀಡಿದ ಅವರು, ರೋಗಿಗಳ ಜೊತೆ ಸಂವಾದ ನಡೆಸಿ, ಆಸ್ಪತ್ರೆಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳನ್ನು ಸಹಾನುಭೂತಿಯಿಂದ ಕಾಣಬೇಕು ಎಂದು ಸಿಎಂ ಸೂಚಿಸಿದರು. ಉಚಿತ ಚಿಕಿತ್ಸೆಯಿಂದಾಗಿ ವೈದ್ಯರ ಮೇಲೆ ಒತ್ತಡ ಹೆಚ್ಚಿದ್ದರೂ, ಸಹನೆಯಿಂದ ಕೆಲಸ ಮಾಡಬೇಕು ಮತ್ತು ಯಾರಿಂದಲೂ ಹಣ ಪಡೆಯಬಾರದು ಎಂದು ತಾಕೀತು ಮಾಡಿದರು.
ಆಸ್ಪತ್ರೆಯಲ್ಲಿ ವಾಹನ ನಿಲುಗಡೆಗೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿದ್ದು, ಇದನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.ವಾಣಿ ವಿಲಾಸ ಆಸ್ಪತ್ರೆಯಲ್ಲಿ ದಿನಕ್ಕೆ 40ಕ್ಕೂ ಹೆಚ್ಚು ಹೆರಿಗೆಗಳು ನಡೆಯುತ್ತಿದ್ದು, ಕರ್ನಾಟಕದ ಜೊತೆಗೆ ಬೇರೆ ರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಜನದಟ್ಟಣೆಯಿಂದಾಗಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಎದ್ದು ಕಾಣುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ಜೊತೆಗೆ, ವೈದ್ಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
ವಿಕ್ಟೋರಿಯಾ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ, ಅಂಗಾಂಗ ದಾನದ ಚಿಕಿತ್ಸೆಯನ್ನು ಇಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೊರಗಡೆ 30 ರಿಂದ 40 ಲಕ್ಷ ರೂಪಾಯಿ ವೆಚ್ಚವಾಗುವ ಈ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುತ್ತಿದೆ. ರೋಗಿಗಳೊಂದಿಗೆ ಮಾತನಾಡಿದ ಸಿಎಂ, ವೈದ್ಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಮತ್ತು ಊಟದ ವ್ಯವಸ್ಥೆಯೂ ಉತ್ತಮವಾಗಿದೆ ಎಂಬ ಅಭಿಪ್ರಾಯವನ್ನು ಕೇಳಿದರು.
ಪ್ರಸ್ತುತ 120 ಹಾಸಿಗೆಗಳಿರುವ ವಿಕ್ಟೋರಿಯಾ ಆಸ್ಪತ್ರೆಯನ್ನು 300 ಹಾಸಿಗೆಗಳಿಗೆ ವಿಸ್ತರಿಸುವ ಬೇಡಿಕೆಯಿದ್ದು, ಈ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಬೇಡಿಕೆಯನ್ನು ಶೀಘ್ರದಲ್ಲೇ ಪರಿಗಣಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. ಭೇಟಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೋಗಿಗಳ ಅಹವಾಲುಗಳನ್ನು ಆಲಿಸಿ, ಆಸ್ಪತ್ರೆಯ ಸೌಲಭ್ಯಗಳನ್ನು ಇನ್ನಷ್ಟು ಸುಧಾರಿಸುವ ಕಾರ್ಯಕ್ಕೆ ಒತ್ತು ನೀಡುವುದಾಗಿ ತಿಳಿಸಿದರು.